ಮೃತ ಮಕ್ಕಳ ಮನೆಗೆ ಶ್ರೇಯಸ್‌ ಭೇಟಿ, ಸಾಂತ್ವನ

| Published : May 18 2024, 12:30 AM IST

ಸಾರಾಂಶ

ಆಲೂರು ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ಗುರುವಾರ ಕೆರೆಗೆ ಈಜಲು ಹೋಗಿ ಮೃತಪಟ್ಟ ಮಕ್ಕಳ ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಕಾಂಗ್ರೆಸ್ ಮುಖಂಡ, ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್‌ ಪಟೇಲ್‌, ಮುರಳಿ ಮೋಹನ್ ಕುಟುಂಬದವರಿಗೆ ಭರವಸೆ ನೀಡಿದರು.

ಈಜಲು ಹೋಗಿ ಮೃತಪಟ್ಟಿದ್ದ ಮಕ್ಕಳು । ಮೃತ ಮಕ್ಕಳ ಕುಟುಂಬದ ಜವಾಬ್ದಾರಿ ಹೊತ್ತ ಪಟೇಲ್‌ । ಪರಿಹಾರದ ಭರವಸೆ

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ಗುರುವಾರ ಕೆರೆಗೆ ಈಜಲು ಹೋಗಿ ಮೃತಪಟ್ಟ ಮಕ್ಕಳ ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಕಾಂಗ್ರೆಸ್ ಮುಖಂಡ, ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್‌ ಪಟೇಲ್‌, ಮುರಳಿ ಮೋಹನ್ ಕುಟುಂಬದವರಿಗೆ ಭರವಸೆ ನೀಡಿದರು.

ಮೃತ ಮಕ್ಕಳ ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಮುರಳಿ ಮೋಹನ್‌, ನಾಲ್ಕು ಮಕ್ಕಳ ಕುಟುಂಬದವರ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಕೆಲವು ಮನೆಗಳ ದುರಸ್ತಿ ಕಾರ್ಯ ಅರ್ಧಕ್ಕೆ ನಿಂತಿರುವುದನ್ನು ಸ್ವತ: ಪೂರ್ಣಗೊಳಿಸಿಕೊಡುತ್ತೇನೆ. ಮನೆಯಲ್ಲಿರುವ ಹೆಣ್ಣು, ಗಂಡು ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸಹ ಸ್ವಂತವಾಗಿ ಭರಿಸಿ ಶಿಕ್ಷಣ ಕೊಡಿಸುತ್ತೇನೆ ಎಂದರು.

ಮಕ್ಕಳ ಬಗ್ಗೆ ಪೋಷಕರು ಜಾಗ್ರತೆಯಿಂದ ಇರಬೇಕು. ಒಂದೇ ಗ್ರಾಮದಲ್ಲಿ ನಾಲ್ಕು ಮಕ್ಕಳ ಸಾವಿನಿಂದ ಇಡೀ ಗ್ರಾಮ ಶೋಕದಲ್ಲಿ ಮುಳುಗಿದೆ. ಇಂತಹ ಘಟನೆಗಳು ಮುಂದೆ ಆಗಬಾರದು. ದೇವರು ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ. ಮೃತ ಕುಟುಂಬಗಳಿಗೆ ಸರ್ಕಾರದಿಂದ ದೊರಕುವ ಎಲ್ಲ ಪರಿಹಾರ, ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.

ಶ್ರೇಯಸ್‌ ಪಟೇಲ್‌ ಮಾತನಾಡಿ, ನೋವಿನಲ್ಲಿರುವ ಕುಟುಂಬದವರಿಗೆ ಮನೆ ಕಟ್ಟಿಕೊಳ್ಳಲು ಜಾಗವಿಲ್ಲ. ಕಟ್ಟಿರುವ ಮನೆಯೂ ಅವರ ಹೆಸರಿನಲ್ಲಿಲ್ಲ. ಪರಿಹಾರ ಶಾಶ್ವತವಲ್ಲ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಪಿ.ಮೋಹನ್, ಜಿ.ಆರ್.ರಂಗನಾಥ್, ಶಿವಮೂರ್ತಿ, ಶಾಂತಪ್ಪ, ಅರಸಯ್ಯ, ರಾಜಪ್ಪ, ರಂಗೇಗೌಡ, ಧರ್ಮಪ್ಪ, ಕುಂದೂರು ಶ್ರೀಕಾಂತ್, ಅಜ್ಜೇನಹಳ್ಳಿ ಲೋಕೇಶ್ ಉಪಸ್ಥಿತರಿದ್ದು ಸಾಂತ್ವನ ಹೇಳಿದರು.