ಶ್ರೀ ಭುವನೇಶ್ವರಿ ಭಾವಚಿತ್ರ ಮೆರವಣಿಗೆ

| Published : Nov 30 2024, 12:46 AM IST

ಸಾರಾಂಶ

ಚನ್ನಗಿರಿ ಪಟ್ಟಣದಲ್ಲಿ ಕನ್ನಡನಾಡು ಹಿತರಕ್ಷಣಾ ಸಮಿತಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಮಧ್ಯಾಹ್ನ 12.30ರಿಂದ ಪಟ್ಟಣದ ವಿವಿಧ ರಸ್ತೆಗಳಲ್ಲಿ ಕನ್ನಡಾಂಭೆಯ ಭವ್ಯ ಮೆರವಣಿಗೆ ನಡೆಯಿತು.

- ಕನ್ನಡನಾಡು ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರಾಜ್ಯೋತ್ಸವ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದಲ್ಲಿ ಕನ್ನಡನಾಡು ಹಿತರಕ್ಷಣಾ ಸಮಿತಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಮಧ್ಯಾಹ್ನ 12.30ರಿಂದ ಪಟ್ಟಣದ ವಿವಿಧ ರಸ್ತೆಗಳಲ್ಲಿ ಕನ್ನಡಾಂಭೆಯ ಭವ್ಯ ಮೆರವಣಿಗೆ ನಡೆಯಿತು.

ಪಟ್ಟಣದ ಎಪಿಎಂಸಿ ಬಳಿಯ ಭುವನೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲಂಕೃತ ಸಾರೋಟಿನಲ್ಲಿ ಕನ್ನಡತಾಯಿ ಶ್ರೀ ಭುವನೇಶ್ವರಿ ದೇವಿ ಭಾವಚಿತ್ರ ಪ್ರತಿಷ್ಠಾಪಿಸಿ, ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯರು, ಸಮಿತಿ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಗೀತಾಗಿರಿಜ ಅವರು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕನ್ನಡದ ಬಾವುಟ ಬೀಸುವ ಮೂಲಕ ಮೆರವಣಿಗೆಗೆ ಶುಭಾರಂಭ ನೀಡಿದರು.

ಮೆರವಣಿಗೆಯು ಅಂತರಘಟ್ಟಮ್ಮ ದೇವಾಲಯ ಮುಂಭಾಗದ ರಸ್ತೆಯಿಂದ ವಿವಿಧೆಡೆ ಸಾಗಿ, ಮುಖ್ಯ ಬಸ್ ನಿಲ್ದಾಣದ ಮುಂಭಾಗ ಸಮಾರಂಭ ನಡೆಯುವ ಸ್ಥಳವಾದ ತಾಲೂಕು ಕ್ರೀಡಾಂಗಣ ತಲುಪಿತು. ವಿವಿಧ ಜಾನಪದ ಕಲಾತಂಡಗಳಾದ ಡೊಳ್ಳು ಕುಣಿತ, ವೀರಗಾಸೆ, ಚಂಡೆ, ಜಗ್ಗಲಿಗೆ ಮೇಳ, ಗೊಂಬೆ ಕುಣಿತ, ಕಾಸಬೇಡರ ಪಡೆ, ಲಂಬಾಣಿ ನೃತ್ಯ, ಬ್ಯಾಂಡ್ ಸೆಟ್, ಇನ್ನಿತರೆ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು.

ಸಮಿತಿ ತಾಲೂಕು ಅಧ್ಯಕ್ಷ ಎಂ.ಅಣ್ಣೋಜಿರಾವ್, ಗೌರವಾಧ್ಯಕ್ಷ ಸರ್ದಾರ್, ನಗರ ಘಟಕ ಅಧ್ಯಕ್ಷ ನಟರಾಜ ರಾಯ್ಕರ್, ಸೋಮಶೇಖರ್, ಅಫ್ತಾಬ್ ಅಹಮದ್, ನಿರ್ಮಲಬಾಯಿ, ನಾಗರತ್ನ, ಸುಧಾ ನಾಗರಾಜ್, ಶಶಿಕಲಾ ನಾಗರಾಜ್, ಕುಮಾರಪ್ಪ, ಮೊದಲಾದವರು ಹಾಜರಿದ್ದರು.

- - - -29ಕೆಸಿಎನ್‌ಜಿ1, 2:

ಚನ್ನಗಿರಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡಾಂಬೆ ಭಾವಚಿತ್ರ ಮೆರವಣಿಗೆ ನಡೆಯಿತು.