ಸಾರಾಂಶ
ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಅಧಿದೇವತೆ ಅಂತರಘಟ್ಟೆ ಶ್ರೀ ದುರ್ಗಾಂಬ ದೇವಿ ಬ್ರಹ್ಮರಥೋತ್ಸವ ಶನಿವಾರ ಬೆಳಿಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ವಿಶೇಷವಾಗಿ ಹೂವಿನ ಅಲಂಕಾರದೊಂದಿಗೆ ರಥಗೋಪುರ ನಿರ್ಮಾಣ
ಕನ್ನಡಪ್ರಭ ವಾರ್ತೆ, ಬೀರೂರುಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಅಧಿದೇವತೆ ಅಂತರಘಟ್ಟೆ ಶ್ರೀ ದುರ್ಗಾಂಬ ದೇವಿ ಬ್ರಹ್ಮರಥೋತ್ಸವ ಶನಿವಾರ ಬೆಳಿಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಕಳೆದ ಒಂದು ವಾರದಿಂದ ಜಾತ್ರಾಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು, ಶನಿವಾರ ಬೆಳಿಗ್ಗೆ ದೇವಾಲಯದಲ್ಲಿ ಸಂಕಲ್ಪ ಸೇವೆಗಳ ಅಭಿಷೇಕ ಪೂಜಾ ಕಾರ್ಯಕ್ರಮಗಳು ಜರುಗಿದವು. ದೇವಾಲಯದ ಪ್ರಾಂಗಣದಲ್ಲಿ ದೇವಿ ಉತ್ಸವ ನಡೆಸಿದರು. ಈ ಬಾರಿ ವಿಶೇಷವಾಗಿ ಹೂವಿನ ಅಲಂಕಾರದೊಂದಿಗೆ ರಥಗೋಪುರ ನಿರ್ಮಾಣ ಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು. ದೇವಿ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ 7 ಗಂಟೆಗೆ ನಡೆದ ಬಲಿಪ್ರಧಾನಪೂಜೆ ನೆರವೇರಿಸಿ ನಂತರ ನೆರೆದಿದ್ದ ಸಾವಿರಾರು ಭಕ್ತರು ದೇವಿ ರಥವನ್ನು ಹರ್ಷೋದ್ಘಾಗರದೊಂದಿಗೆ ಎಳೆದು ಸಂಭ್ರಮಿಸಿದರು. ದೇವಿ ಉತ್ಸವ ಮೂರ್ತಿಯನ್ನು ರಥದಿಂದ ತೆರವುಗೊಳಿಸುವ ಮುನ್ನ ಬಾಳೆಹಣ್ಣಿನ ರಾಶಿಪೂಜೆಯೊಂದಿಗೆ ರಥೋತ್ಸವ ಸಂಪನ್ನಗೊಳಿಸಲಾಯಿತು.ರಥವು ಸಾಗುತ್ತಿದ್ದಂತೆ ಹರಕೆ ಹೊತ್ತಿದ್ದ ದೇವಿಯ ಭಕ್ತರು ಕಾಳು ಮೆಣಸು, ಕೊಬ್ಬರಿ, ಕಡ್ಲೆಕಾಯಿ, ಬಾಳೆಹಣ್ಣು ಜೊತೆಗೆ ಕೋಳಿಗಳನ್ನು ರಥಕ್ಕೆ ಎಸೆದು ಭಕ್ತಿಯನ್ನು ಸಮರ್ಪಿಸಿದರು. ಕಡೂರು, ತರೀಕೆರೆ, ಅಜ್ಜಂಪುರ, ಹೊಸದುರ್ಗ ಸೇರಿದಂತೆ ನೆರೆಯ ಜಿಲ್ಲೆಗಳ ಭಾಗಗಳಿಂದ ಸುಮಾರು 8 ಸಾವಿರಕ್ಕೂ ಅಧಿಕ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕಡೂರು ಮತ್ತು ತರೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಸ್.ಆನಂದ್, ಜಿ.ಎಚ್.ಶ್ರೀನಿವಾಸ್, ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್, ಕಡೂರು ಮತ್ತು ತರೀಕೆರೆ ತಹಸೀಲ್ದಾರ್‌ಗಳಾದ ಎಂ.ಪಿ. ಕವಿರಾಜ್, ವಿ.ಎಸ್. ರಾಜೀವ್ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿ ಪೂಜಾ ಮಹೋತ್ಸವದಲ್ಲಿ ಭಾಗಿ ಯಾಗಿದ್ದರು. ದೇವಾಲಯ ಮುಜರಾಯಿ ಇಲಾಖೆ ಸುರ್ಪದಿಗೆ ಒಳಪಡುವ ಹಿನ್ನಲೆಯಲ್ಲಿ ಕಂದಾಯ ವಿಭಾಗದ ಅಧಿಕಾರಿ ಗಳು, ಪಂಚಾಯಿತಿ ವತಿಯಿಂದ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲಾಯಿತು. ಅಂತರಘಟ್ಟೆ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು. ಜಾತ್ರಾ ಸಮಿತಿ ಸೇರಿದಂತೆ ಸಂಘ ಸಂಸ್ಥೆಗಳಿಂದ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಯಿತು.---ಕೋಟ್---
ಬರದ ಛಾಯೆ ಆವರಿಸಿರುವ ತಾಲೂಕಿಗೆ ದೇವಿ ಸಮೃದ್ಧ ಮಳೆಬೆಳೆ ಕರುಣಿಸಿ ರೈತಾಪಿ ವರ್ಗವನ್ನು ರಕ್ಷಿಸು ವಂತೆ ವಿಶೇಷವಾದ ಪೂಜೆ ಸಲ್ಲಿಸಲಾಗಿದೆ. ಜೊತೆಯಲ್ಲಿ ತರೀಕೆರೆ-ಹೊಸದುರ್ಗ ಮತ್ತು ಕಡೂರು ತಾಲೂಕು ಕೇಂದ್ರಗಳಿಗೆ ಸಂಪರ್ಕ ಹೊಂದಿರುವ ಅಂತರಘಟ್ಟೆ ಗ್ರಾಮದ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುವ ಭಕ್ತರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಮುಂಜಾಗೃತ ಕ್ರಮ ವಹಿಸಿ ಅಗತ್ಯ ಸೌಲಭ್ಯ ಒದಗಿಸಿಕೊಡಲಾಗಿದೆ.- ಕೆ.ಎಸ್.ಆನಂದ್, ಶಾಸಕ ಕಡೂರು.
24 ಬೀರೂರು 1(ಕಡೂರು ತಾಲ್ಲೂಕಿನ ಅಂತರಘಟ್ಟೆಯ ಶ್ರೀ ದುರ್ಗಾಂಬ ದೇವಿಯ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.)