ಮಂತ್ರಾಲಯದಲ್ಲಿ ಶ್ರೀಗುರುವೈಭವೋತ್ಸವಕ್ಕೆ ಚಾಲನೆ

| Published : Mar 12 2024, 02:04 AM IST

ಮಂತ್ರಾಲಯದಲ್ಲಿ ಶ್ರೀಗುರುವೈಭವೋತ್ಸವಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುವೈಭವೋತ್ಸಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಗುರುವೈಭವೋತ್ಸದ ಮೊದಲ ದಿನ ವೇದಿಕೆ ಸಮಾರಂಭದಲ್ಲಿ ಶ್ರೀಗಳು ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಅವರಿಗೆ ಗುರುವೈಭವೋತ್ಸವದ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುವೈಭವೋತ್ಸಕ್ಕೆ ಸೋಮವಾರ ಚಾಲನೆ ದೊರಕಿತು.

ಶ್ರೀಗುರುಸಾರ್ವಭೌಮರ 403ನೇ ಪಟ್ಟಾಭಿಷೇಕ ಹಾಗೂ 429 ನೇ ವರ್ಧಂತೋತ್ಸವಗಳನ್ನೊಳಗೊಂಡ ಶ್ರೀರಾಘವೇಂದ್ರ ಗುರುವೈಭವೋತ್ಸವಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಮಾ.16 ವರೆಗೆ ನಡೆಯಲಿರುವ ಗುರುವೈಭವೋತ್ಸವದ ಮೊದಲ ದಿನವಾದ ಸೋಮವಾರ ಬೆಳಗ್ಗೆ ಶ್ರೀಗಳು ಮೂಲರಾಮದೇವರಿಗೆ ಹಾಗೂ ಶ್ರೀಗುರುಸಾರ್ವಭೌಮರ ಮೂಲಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಶ್ರೀಮಠದ ಮುಂಭಾಗದಲ್ಲಿರುವ ಶ್ರೀಯೋಗೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮವನ್ನು ಶ್ರೀಗಳು ಉದ್ಘಾಟಿಸಿದರು. ಇದೇ ವೇಳೆ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಅಲ್ಸೆ ಹಾಗೂ ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಅವರಿಗೆ ಗುರುವೈಭವೋತ್ಸವದ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿ ಆಶೀರ್ವದಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದೂಷಿ ಗೀತಾ ಭಟದ್ ಅವರು ಕರ್ನಾಟಿಕ್‌ ಗಾಯನವನ್ನು ನಡೆಸಿಕೊಟ್ಟರು ನಂತರ ಹುಬ್ಬಳ್ಳಿಯ ಭಾವದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ರೂಪಕ ನೋಡುಗರ ಗಮನ ಸೆಳೆಯಿತು.

ಶ್ರೀಗುರುವೈಭವೋತ್ಸವದ ಎರಡನೇ ದಿನವಾದ ಮಂಗಳವಾರ ಶ್ರೀಮಠದಲ್ಲಿ ಶ್ರೀಗುರುರಾಯರ 403 ನೇ ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೂಲಪಾದುಕೆಗಳಿಗೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಪಾದುಕಾ ಪಟ್ಟಾಭಿಷೇಕ ನೆರವೇರಿಸುತ್ತಿದ್ದು ಇದರ ಜೊತೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವೇದಿಕೆ ಕಾರ್ಯಕ್ರಮಗಳು ಸಹ ನಡೆಯಲಿವೆ.