- ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ ಹಾಗೂ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳು ದೇವರಿಗೆ ಸಮಾನ. ಅವರಿಗೆ ಶಕ್ತಿ ತುಂಬಲು ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ಕೊಡಬೇಕು ಎಂದು ಬೆಂಗಳೂರು

ಗವಿಪುರಂ ಶ್ರೀ ಗೋಸಾಯಿ ಮಹಾ ಸಂಸ್ಥಾನ ಶ್ರೀ ಭವಾನಿ ಮಹಾಪೀಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ಭಾನುವಾರ ಸಮೀಪದ ರಂಗೇನಹಳ್ಳಿ ಶ್ರೀ ಅಂಬಾ ಭವಾನಿ ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಘಟಕದ ಸುವರ್ಣ ಮಹೋತ್ಸವ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತ್ಯುತ್ಸವ ಹಾಗೂ ಅಭಿನಂದನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.


ರಾಷ್ಟ್ರ ದೃಢವಾಗಬೇಕಾದರೆ ಸಂಘಟನೆ ಬಹಳ ಮುಖ್ಯ, ಐಖ್ಯ ಎನ್ನುವುದು ಬಲ, ಸಂಘಟನೆಯೇ ಸಮುದ್ರ, ಕೇಂದ್ರ ಘಟಕ ಒಂದು ಸಮುದ್ರ, ಸುಖ ಶಾಂತಿ ನೆಮ್ಮದಿ ಪರಮಾತ್ಮನ ಆಶೀರ್ವಾದ. ಇದೇ ನಿಜವಾದ ಸಂಘಟನೆ, ಶಿವಾಜಿ ಮಹಾರಾಜರು ಮಹಾ ಪುರುಷರಲ್ಲಿ ಮಹಾ ಪುರುಷರು. ಅವರು ಅದ್ಬುತ ಕಾರ್ಯ ಮಾಡಿದರು. ಜಿಲ್ಲೆ, ತಾಲೂಕು, ಹಳ್ಳಿಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ನಡೆಯುತ್ತಿದೆ ಎಂದರು.

ಸುಖ ಶಾಂತಿ ನೆಮ್ಮದಿ ಬೇಕು ಎಂದು ಎಲ್ಲರೂ ಕೇಳುತ್ತಾರೆ. ಗೀತೆಯ ಸಾರವೇ ತ್ಯಾಗ. ತ್ಯಾಗ ಮಾಡಿದರೆ ಸುಖ ಎಂದು ಅನೇಕ ದಾರ್ಶನಿಕರು ವಿವರಿಸಿದ್ದಾರೆ ಎಂದು ಹೇಳಿದರು.

ಬೆಂಗಳೂರು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್, ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ಜಿಲ್ಲಾಧ್ಯಕ್ಷ, ಮಾಜಿ ಸೈನಿಕ ಶ್ರೀನಿವಾಸರಾವ್ ಮದನೆ ಮತ್ತು ಘಟಕದ ಪದಾಧಿಕಾರಿಗಳು ರಂಗೇನಹಳ್ಳಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತ್ಯುತ್ಸವ ಆಚರಿಸಿರುವುದು, ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.ರಾಜ್ಯ ಲೆಕ್ಕ ಪರಿಶೋಧಕ ಎಚ್.ವಿಶ್ವನಾಥ್ ಲಾಡ್ ಮಾತನಾಡಿ ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮವೀರ. ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್.ಗೆ 50 ವರ್ಷ ಆಗಿದೆ. ಉತ್ತಮ ನಾಯಕತ್ವ ಹೊಂದಿದೆ. ಪದಾಧಿಕಾರಿಗಳು ಸೇವೆಗಳ ಮೂಲಕ ಸಮಾಜ ಕಾರ್ಯ ನಿರ್ವಹಿಸಿದ್ದಾರೆ. ರಂಗೇನಹಳ್ಳಿಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಲು ಸ್ಥಳ ಕೊಡುವುದಾಗಿ ಮತ್ತು ಅಂಬಾಭವಾನಿ ಸಮುದಾಯ ಭವನದ ಅಭಿವೃದ್ಧಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ₹10 ಲಕ್ಷ ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ರಾಜ್ಯಾಧ್ಯಕ್ಷ ಸುರೇಶ್ ರಾವ್ ಸಾಠೆ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು, ಆ ನಿಟ್ಟಿನಲ್ಲಿಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದೆ. ಬೆಂಗಳೂರಿನಲ್ಲಿ ಮರಾಠ ವಿದ್ಯಾರ್ಥಿ ನಿಲಯದಲ್ಲಿ ಪ್ರತಿವರ್ಷ 150 ಎಂಜಿನಿಯರಿಂಗ್ ಮತ್ತು ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಉಚಿತ ವಸತಿ ಸೌಲಭ್ಯ, ಉನ್ನತ ವ್ಯಾಸಂಗಕ್ಕೆ ನೆರವು ನೀಡುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಕೆಕೆಎಂಪಿ ರಾಜ್ಯ ಖಚಾಂಚಿ ಟಿ.ಆರ್.ವೆಂಕಟರಾವ್ ಚವ್ಹಾಣ್ , ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ಸುನೀಲ್ ಚವ್ಹಾಣ್ , ಕೆಕೆಎಂಪಿ ಚಿಕ್ಕಮಗಳೂರು ಜಿಲ್ಲೆ ಅಧ್ಯಕ್ಷ ಶ್ರೀನಿವಾಸರಾವ್ ಮದನೆ ಮಾತನಾಡಿದರು.

ಕೆಕೆಎಂಪಿ ತರೀಕೆರೆ ತಾಲೂಕು ಅಧ್ಯಕ್ಷ ಎ.ಎಸ್.ಗಿರೀಶ್ ಚವ್ಹಾಣ್, ಕೆಕೆಎಂಪಿ ಅಜ್ಜಂಪುರ ತಾಲೂಕು ಅಧ್ಯಕ್ಷ ಗಿರೀಶ್ ಚವ್ಹಾಣ್, ಎನ್.ಆರ್.ಪುರ ಮರಾಠ ಮುಖಂಡರಾದ ಎಚ್.ಟಿ.ರಘುವೀರ್ ಭಾಗವಹಿಸಿದ್ದರು.

-

24ಕೆಟಿಆರ್.ಕೆ.15ಃ ತರೀಕೆರೆ ಸಮೀಪದ ರಂಗೇನಹಳ್ಳಿಯಲ್ಲಿ ಚಿಕ್ಕಮಗಳೂರು ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಘಟಕ ದಿಂದ ನಡೆದ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತ್ಯುತ್ಸವ ಹಾಗೂ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಂಗಳೂರು ಗವಿಪುರಂ ಗೋಸಾಯಿ ಮಹಾ ಸಂಸ್ಥಾನದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ವಹಿಸಿದ್ದರು. ಸುರೇಶ್ ರಾವ್ ಸಾಠೆ, ಶ್ರೀನಿವಾಸರಾವ್ ಮದನೆ,ಎಚ್.ವಿಶ್ವನಾಥ್ ಲಾಡ್ ಭಾಗವಹಿಸಿದ್ದರು.