ಸಾರಾಂಶ
ಪುರಾಣ, ಇತಿಹಾಸ ಹಾಗೂ ಭವಿಷ್ಯವನ್ನು ಬೆಸೆಯುವ ಅತ್ಯಂತ ಸೋಜಿಗದ ಅಧ್ಯಾಯವೊಂದು ಇದೇ ಜ. ೨೨ರ ಸೋಮವಾರ ವಿಶ್ವದಾಖಲೆಯೆನಿಸಿ ತೆರೆದುಕೊಳ್ಳಲಿದೆ. ತ್ರೇತಾಯುಗದೊಂದಿಗೆ ಕಲಿಯುಗದ ಪ್ರಥಮಪಾದ ಎಂಬ ಸನಾತನ ಹಿಂದೂ ನಂಬಿಕೆಯ ಆಧಾರಿತ ನಿರಂತರ ಚಿಂತನಧಾರೆ ಸರಯೂ ನದೀ ತೀರದಲ್ಲಿ ಚಿಮ್ಮಲಿದೆ. ಜಾಗತಿಕ ಚರಿತ್ರೆಯ ಬರೆದಿಟ್ಟ, ತೆರೆದಿಟ್ಟ ಹೊತ್ತಗೆಯಲ್ಲಿ ಹೊಸಪುಟವೊಂದು ತೆರೆದುಕೊಳ್ಳಲಿದೆ. ಅತ್ಯಂತ ಪ್ರಾಚೀನ ಎನಿಸಿದ ಸನಾತನ ಭಾರತದ ಪುನರುಜ್ಜೀವನದ ಸಂಕೇತವಾಗಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನೂತನ ಭವ್ಯಮಂದಿರ ತಲೆ ಎತ್ತಲಿದೆ. ಪರಕೀಯರ ಬರ್ಬರ ದಾಳಿಯ ಕುರುಹುಗಳೆಲ್ಲಾ ಈಗಾಗಲೇ ನಶಿಸಿವೆ. ಬಾಬರನ ಸೇನಾಧಿಪತಿ ಮೀರ್ ಬಾಖಿಯಿಂದ ಧ್ವಂಸಗೊಂಡ ಅಯೋಧ್ಯಾ ಮಂದಿರವಿದ್ದ ಪಾವನ ‘ಜನ್ಮಭೂಮಿ’ಯಲ್ಲಿಯೇ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಕೋಟಿ ಕೋಟಿ ಹಿಂದೂ ಜನಮನದ ಪುಣ್ಯಧಾಮವೆನಿಸಲಿದೆ. ಮುಂಬರುವ ಸೂರ್ಯೋದಯಗಳ ಸಂಗಾತಿಯಾಗಿ ಸೂರ್ಯವಂಶದ ಪ್ರಭು ಶ್ರೀ ರಾಮಚಂದ್ರನ ಸುಂದರ ಮಂದಿರ ಚಂದಿರನ ಶೀತಲ ಕಿರಣಗಳಲ್ಲಿ ಪ್ರತಿಫಲನಗೊಳ್ಳಲಿದೆ.
ವಾರಾಣಸಿ, ಮಥುರಾ, ಬೋಧಗಯಾದಂತೆ ಅಯೋಧ್ಯೆ ನಿಜಕ್ಕೂ ವಿಶ್ವಪಾರಂಪರಿಕ ತಾಣ ಎನ್ನುವುದರಲ್ಲಿ ಸಂಶಯವಿಲ್ಲ. ಆದಿಕವಿ ವಾಲ್ಮೀಕಿ ಮಹರ್ಷಿಗಳು ವರ್ಣಿಸಿದ ಅಯೋಧ್ಯೆ, ಮಿಥಿಲೆ ನಂದಿಗ್ರಾಮ, ಚಿತ್ರಕೂಟ, ದಂಡಕಾರಣ್ಯ, ಕಿಷ್ಕಿಂದೆ, ರಾಮೇಶ್ವರ, ಲಂಕೆ- ಹೀಗೆ ಇವೆಲ್ಲವೂ ಯಥಾವತ್ತಾಗಿ ಇಂದಿಗೂ ಅದೇ ನಾಮಾವಳಿಯಿಂದ ತುಂಬಿ ನಿಂತಿವೆ. ಇಕ್ಷ್ವಾಕು ವಂಶಾವಳಿಯಲ್ಲಿ ದಾಶರಥಿಯಾಗಿ ಮೆರೆದ ಶ್ರೀರಾಮಚಂದ್ರ ಶ್ರೀ ಮಹಾವಿಷ್ಣುವಿನ ಏಳನೇ ಅವತಾರ ಎಂಬ ನಂಬಿಕೆ, ಆ ಬಳಿಕ ಸರಿದು ಬಂದ ಶ್ರೀಕೃಷ್ಣವತಾರದ ದ್ವಾಪರಯುಗದ ಮಜಲನ್ನು ದಾಟಿ ನಿಂತಿದೆ; ಈಗ ವರ್ತಮಾನದ ಕಾಲಘಟ್ಟದಲ್ಲಿ ಮಹೋನ್ನತ ಪ್ರಚಲಿತ ವರ್ತಮಾನವಾಗಿ ಮಂದಿರದ ಉದ್ಘಾಟನೆ ಘಟಿಸುತ್ತಿದೆ. ಇಲ್ಲಿನ ಇನ್ನೊಂದು ವೈಶಿಷ್ಟ್ಯವೆಂದರೆ ಅಯೋಧ್ಯೆಯ ಮಂದಿರದಲ್ಲಿ ಶ್ರೀರಾಮ ಪ್ರತಿಷ್ಠೆಯ ಈ ಐತಿಹಾಸಿಕತೆಯಲ್ಲಿ ಪೌರಾಣಿಕ ನಂಬಿಕೆ, ಚರಿತ್ರೆಯ ಪದರದಲ್ಲಿ ಘನೀಕೃತಗೊಂಡ ಕಥೆ, ವ್ಯಥೆಗಳು ಜತೆಗೇ ಹೊಸತನ, ವೈಜ್ಞಾನಿಕತೆ ಹಾಗೂ ಸಮಗ್ರ ಅಭಿವೃದ್ಧಿಯ ಯೋಜನೆಗಳು ಮೇಳೈಸಿ ‘ತ್ರಿವೇಣಿ ಸಂಗಮ’ಎನಿಸಿದೆ.ಜಗತ್ತಿನ ಇತಿಹಾಸದ ಸಿಂಹಾವಲೋಕನಗೈದಾಗ, ಹಿಂದೂ ಸಂಸ್ಕೃತಿ, ಸಭ್ಯತೆ ಹಾಗೂ ನಂಬಿಕೆಗಳ ಸಮಕಾಲೀನ ಎನಿಸಿದ ಗ್ರೀಕ್, ರೋಮನ್, ಈಜಿಪ್ಟ್, ಮೆಸಪೊಟೇಮಿಯಾ ಸುಮೇರಿಯನ್-ಹೀಗೆ ಹತ್ತು ಹಲವು ಸಂಸ್ಕೃತಿಗಳು ಇಂದು ಕೇವಲ ಪಳಿಯುಳಿಕೆಯ ಪದರಗಳು ಎನಿಸಿವೆ. ಆದರೆ ಭಾರತೀಯ ಸಂಸ್ಕೃತಿಯ ಮೌಲ್ಯಗಳು, ನಂಬಿಕೆಗಳು ಹಾಗೂ ಸನಾತನ ಸಂಸ್ಕೃತಿ ಸಮಗ್ರ ಪುನರುತ್ಥಾನ ‘ಸಂವಾದಿ’ ಎನಿಸಿದೆ ಹಾಗೂ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಬೆಳಕು ತುಂಬಿಕೊಂಡಿದೆ. ಜತೇ ಜತೆಗೇ ೧೫೨೮ರಿಂದ ಹಿಂದು ಸಮುದಾಯದ ನಿರಂತರ ಹೋರಾಟದ ಫಲಶ್ರುತಿ ಎನಿಸಿ ಬಾಬ್ರಿ ಮಸೀದಿ (ಮಂದಿರ ಕೆಡಹಿ ನಿರ್ಮಾಣಗೊಂಡ ಕಟ್ಟಡದ ಮೂಲಹೆಸರು ’ಜನ್ಮಸ್ಥಾನ್ ಮಸ್ಜೀದ್’)ಇಂದು ತೆರವುಗೊಂಡು ಅದೇ ವಿವಾದಿತ ಜನ್ಮಸ್ಥಾನದಲ್ಲಿ ಸುಂದರ ಮಂದಿರ ತಲೆ ಎತ್ತುತ್ತಿದೆ. ‘ಧರ್ಮೋ ರಕ್ಷತಿ ರಕ್ಷಿತಃ’ ಅಂತೆಯೇ, ‘ಸತ್ಯ ಮೇವ ಜಯತೇ’ ಎಂಬ ಘೋಷವಾಕ್ಯಗಳ ಶಬ್ದ ಶಬ್ದವೂ ಇಲ್ಲಿ ಅನುರಣಿಸಿದುದು ರೋಚಕ ಸಂಗತಿಯೇ ಹೌದು. ಮೊಗಲರ ದಬ್ಬಾಳಿಕೆ, ಆ ಬಳಿಕ ಬ್ರಿಟೀಶರ ಒಡೆದು ಆಳುವ ನೀತಿಯ, ಅಡಳಿತದ ಕಾಲಚಕ್ರ ಪರಿಭ್ರಮಣೆಗೊಳ್ಳುತ್ತಾ, ಸ್ವಾತಂತ್ರ್ಯ ರವಿಯುದಯದ ಈ ನೆಲದಲ್ಲಿ ಒದಗಿದುದು ಪ್ರಚಲಿತ ಇತಿಹಾಸ.
ಈ ಕಾಲಘಟ್ಟದಲ್ಲಿಯೇ, ಬಹುಸಂಖ್ಯಾಕ ಹಿಂದುಗಳ ರಾಷ್ಟ್ರದಲ್ಲಿಯೇ ೧೯೪೭ರಿಂದ ೨೦೧೯ರವೆರೆಗಿನ ಹೋರಾಟ, ನಿರಂತರ ಯತ್ನ ಉಲ್ಲೇಖನೀಯ ಹಾಗೂ ಕೊನೆಗೂ ೨೦೧೯ರಲ್ಲಿ ಸರ್ವೋಚ್ಛ ನ್ಯಾಯಲಯದ ತೀರ್ಪಿನ ಸಾಲಿನಲ್ಲೇ ಮಂದಿರ ಮರುನಿರ್ಮಾಣದ ಅರುಣೋದಯದ ಬೆಳಕು ಮೂಡಿದುದು ಮುಂಬರುವ ತಲೆಮಾರುಗಳಿಗೆ ಅಚ್ಚರಿಯ, ಚಿಂತನೆಯ ಬಿಂದುಗಳು.ಯಾವುದೇ ವಸ್ತು ಸುಲಭವಾಗಿ ದೊರಕಿದಲ್ಲಿ ಅದರ ಮೌಲ್ಯ, ಸತ್ವ ಅಷ್ಟೊಂದು ಮಹತ್ವ ತುಂಬಿಕೊಳ್ಳುವುದಿಲ್ಲ. ಬದಲಾಗಿ, ನಿರಂತರ ಯತ್ನದ ಫಲಶ್ರುತಿಯೆನಿಸಿ ಯಾವುದೇ ಉದ್ದೇಶ ಪೂರ್ತಿಗೊಂಡಾಗ ಆಗ, ಮಾತ್ರ ಅದರ ಎತ್ತರ ಬಿತ್ತರ ಅಗಾಧ ಎನಿಸುತ್ತದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ, ವಿದೇಶಿ ದಾಳಿಕೋರರ ಬರ್ಬರತೆಯಿಂದ ವಿನಾಶಗೊಂಡ ನೂರಾರು ದೇವ ಮಂದಿರಗಳ ಕಳಶಗಳು ಮರಳಿ, ನಳ ನಳಿಸಲು ಹೋರಾಟದ ಅನಿವಾರ್ಯತೆ ಒದಗಿ ಬಂದುದು ‘ಸೆಕ್ಯುಲರ್ ಇಂಡಿಯಾ’ದ ವಿಪರ್ಯಾಸ! ಅದರಲ್ಲಿಯೂ ಮುಖ್ಯವಾಗಿ ಅಯೋಧ್ಯೆ, ಮಥುರಾ ಹಾಗೂ ವಾರಾಣಸಿಯ ದೇವ ಮಂದಿರಗಳ ಮೂಲಸ್ಥಿತಿಗೆ ವಿಶ್ವಹಿಂದು ಪರಿಷತ್ ಪಟ್ಟುಹಿಡಿಯಿತು. ಅವುಗಳ ಪೈಕಿ ಅಯೋಧ್ಯೆಯ ಜನ್ಮಸ್ಥಾನದ ೨.೭೭ಎಕ್ರೆ ನಿವೇಶನದಲ್ಲಿದ್ದ ೩ ಗುಂಬಜಗಳ ಹಳೆಯ ಕಟ್ಟಡದ ವಿರುದ್ಧ ಹೋರಾಟದ ಕಾವು ತೀವ್ರಗೊಳ್ಳುತ್ತಾ ರಾಷ್ಟ್ರವ್ಯಾಪೀ ಮಾತ್ರವಲ್ಲ, ಜಗದಗಲ ಪಸರಿಸಲಾರಂಬಿಸಿತು. ಶ್ರೀರಾಮ ಶಿಲಾ ಪೂಜನದ ಮೂಲಕ, ರಥಯಾತ್ರೆಯ ವಿಜೃಂಭಿತ ಕಾರ್ಯದಲ್ಲಿ, ರಾಮ ಜ್ಯೋತಿಯಾತ್ರೆ, ಶ್ರೀ ರಾಮ ಪಾದುಕೆ- ಹೀಗೆ ಸರಣಿ ಹೋರಾಟದಲ್ಲಿ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳಕ್ಕೆ ಹಿಂದೂ ಸಮಾಜವೇ ಬೆಂಗಾವಲಾಗಿ ನಿಂತಿತು. ೧೯೯೨ ದಶಂಬರ ೬ರ ನಿರ್ನಾಮ ಹಾಗೂ ಇದೀಗ ೨೦೨೪ರ ಜನವರಿ ೨೨ರ ನಿರ್ಮಾಣ ಅದೊಂದು ವಿಶಿಷ್ಟ ಇತಿಹಾಸ! ‘ಪ್ರಚಲಿತ ಚರಿತ್ರೆ ಕಳೆದ ನಿನ್ನೆಗಳ ರಾಜಕೀಯ’ ಎಂಬ ನಾಣ್ನುಡಿಯಂತೆ ಶ್ರೀರಾಮ ಜನ್ಮಭೂಮಿ ಹೋರಾಟ ನೇರವಾಗಿ ರಾಜಕೀಯ ಏರು ಪೇರುಗಳಲ್ಲಿಯೂ ಪ್ರತಿಫಲನಗೊಳ್ಳುತ್ತಾ ಸಾಗಿತು. ಸೆಕ್ಯುಲರಿಸಂ, ತುಷ್ಟೀಕರಣ ಇಂತಹ ಧೋರಣೆಗೆ ಸೆಟೆದು ನಿಂತು ಹಿಂದೂ ‘ಮತ ಶಕ್ತಿ’ಯೂ ರಾಜಕೀಯ ಸ್ಥಿತ್ಯಂತರಗಳ ಮೂಲಕ ಘನೀಕೃತಗೊಂಡಿತು. ಹಳ್ಳಿಯಿಂದ-ದಿಲ್ಲಿಯವರಗೆ ಆಡಳಿತದ ಚುಕ್ಕಾಣೆಯಲ್ಲಿಯೂ, ಪಕ್ಷಗಳ ಮೇಲಾಟದಲ್ಲಿಯೂ ‘ಶ್ರೀರಾಮ ಜನ್ಮಭೂಮಿ ಮುಕ್ತಿ ಆಂದೋಲನ’ ಹೆದ್ದೆರೆಯಾಗಿ ಮುನ್ನುಗ್ಗಿದುದು ಪ್ರಚಲಿತ ಇತಿಹಾಸ. ಮಾತ್ರವಲ್ಲ ಭವಿಷ್ಯಕ್ಕೂ ಅನತಿ ದೂರದವರಗೆ ರಾಮಮಂದಿರದ ಶಿಖರ ಜ್ಯೋತಿ ಕಾಣಿಸುವ ಸಾಧ್ಯತೆ ಇದೆ.
ಉತ್ತರ ಪ್ರದೇಶದ ಸಾಂಸ್ಕೃತಿಕ ನಗರಿಯಾಗಿ ಮಾತ್ರವಲ್ಲದೆ ಅಯೋಧ್ಯೆಯ ಮಂದಿರ, ’ರಾಮ ರಾಜ್ಯ’ದ ಅರ್ಥಾತ್ ಸುಖೀರಾಜ್ಯದ ಪರಿಕಲ್ಪನೆಗೆ ಸಂವಾದಿಯಾಗಿ ಬೆಳೆಯುತ್ತಿದೆ. ಒಂದು ಕಾಲದ ಬಡತನದ ಜೋಂಪಡಿಗಳ ಉತ್ತರ ಪ್ರದೇಶಕ್ಕೆ ನವಚೈತನ್ಯದ ಈ ಸುಂದರ ಮಂದಿರ ಸಮರ್ಪಕ ಉತ್ತರ ನೀಡುತ್ತಿದೆ. ಪ್ರವಾಸೋದ್ಯಮ, ಕೈಗಾರಿಕೆ, ಸಾಂಸ್ಕೃತಿಕ ಹಿರಿಮೆ, ಅಂತಾರಾಷ್ಟ್ರೀಯ ವಿಮಾನಯಾನ ಹಾಗೂ ರಾಷ್ಟ್ರೀಯ ರೈಲು, ರಸ್ತೆ, ಸಂಪರ್ಕ ಸಾಧನೆ, ವೈಜ್ಞಾನಿಕ ಪ್ರಗತಿ, ಕೃಷಿ ಶಿಕ್ಷಣ-ಹೀಗೆ ಹಲವು ಮುಖಗಳ ಪ್ರಗತಿಯ ಸೋಪಾನಗಳು ಸರಯೂ ನದೀ ಸೋಪಾನಗಳಂತೆ ಕಂಗೊಳಿಸುತ್ತಿವೆ. ಶ್ರೀ ರಾಮ ಜನ್ಮಭೂಮಿಯ ಸಾಲು ಸಾಲು ಹಣತೆಗಳೊಂದಿಗೆ ‘ವಿಕಸಿತ ಭಾರತ’ದ ಭವಿಷ್ಯದ ಜ್ಯೋತಿಗಳು ಮುಂಬರುವ ತಲೆಮಾರುಗಳಿಗೂ ಹೊನ್ನಕಿರಣ ಬೀರಲಿ ಎಂಬುದಾಗಿ ಶುಭ ಹಾರೈಸೋಣ, ಪ್ರಾರ್ಥಸೋಣ.ಲೇಖಕರು: ಡಾ.ಪಿ.ಅನಂತಕೃಷ್ಣ ಭಟ್