ಸಾರಾಂಶ
ಬಳ್ಳಾರಿ: ಅಯೋಧ್ಯೆಯಲ್ಲಿ ಸೋಮವಾರ ಶ್ರೀರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ನಗರದ ಶ್ರೀ ವಾಸವಿ ವಿದ್ಯಾಲಯದಲ್ಲಿ ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಮಕ್ಕಳಿಗೆ ವೇಷಭೂಷಣ ಹಾಗೂ ಶ್ರೀರಾಮನಾಮ ಸ್ಮರಣೆ ಕಾರ್ಯಕ್ರಮ ಜರುಗಿತು.ಸುಮಾರು 500 ವರ್ಷಗಳ ಬಳಿಕ ಬಾಲರಾಮ ತನ್ನ ಜನ್ಮಭೂಮಿಯಲ್ಲಿ ಪ್ರತಿಷ್ಠಾಪಿತನಾಗುತ್ತಿದ್ದಾನೆ. ಮರ್ಯಾದಾ ಪುರುಷೋತ್ತಮ, ಭಾರತದ ಸಾಂಸ್ಕೃತಿಕ ಧರೋಹರ, ಜಾನಕಿರಾಮ, ಧಶರಥರಾಮನ ಪ್ರಾಣ ಪ್ರತಿಷ್ಠಾಪನೆ ಅಯೋಧ್ಯೆಯಲ್ಲಿ ನಡೆಯಲಿದ್ದು, ಇದು ವಿಶ್ವದಲ್ಲೇ ಅತ್ಯಂತ ಅಪರೂಪದ ಸಾಂಸ್ಕೃತಿಕ ಪುನರುತ್ಥಾನದ ಜೀವಂತ ಅನುಭವವಾಗಿದೆ ಎಂದು ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಅಧ್ಯಕ್ಷ ಜಯಪ್ರಕಾಶ್ ಜೆ. ಗುಪ್ತಾ ತಿಳಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭದ ಕ್ಷಣವನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ರಾಮಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ದೇವರ ಧ್ಯಾನ, ಜಪಗಳನ್ನು ಮಾಡಿ ಪುನೀತರಾಗುತ್ತಾರೆ ಎಂದರು. ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್‌ನ ಪದಾಧಿಕಾರಿಗಳಾದ ಪೋಲಾ ಬಸವರಾಜ್, ಪಿ.ಎನ್. ಸುರೇಶ್, ಬಿಂಗಿ ಸುರೇಶ್, ಸದಸ್ಯರಾದ ಪಿ.ಜಿ. ಗುಪ್ತಾ, ಮುದುಗಲ್ ಸುಭಾಷ್, ವೆಂಕಟೇಶ್, ಮುಖ್ಯಗುರು ವೀರೇಶ್ ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಪಾಲ್ಗೊಂಡಿದ್ದರು.ಶಾಲೆಯ ಸಹಶಿಕ್ಷಕಿ ಜ್ಯೋತಿ ಅವರು ಶ್ರೀ ರಾಮನ ಶ್ಲೋಕಗಳನ್ನು ಪಠಿಸಿದರು. ಬಸವರಾಜೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಮಕ್ಕಳು ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತನ ವೇಷಾಧಾರಿಗಳಾಗಿ ಗಮನ ಸೆಳೆದರು. ಶಾಲೆಯ 9ನೇ ತರಗತಿ ವಿದ್ಯಾರ್ಥಿ ವೃಶಾಂಕ್ ತಯಾರಿಸಿದ ರಾಮಮಂದಿರ ಪ್ರತಿಕೃತಿ ಗಮನ ಸೆಳೆಯಿತು.