ಸಾರಾಂಶ
ಜ.೨೨ರಂದು ಎಲ್ಲರೂ ತಮ್ಮ ಮನೆಗಳಲ್ಲಿ, ಅಂಗಡಿಗಳಲ್ಲಿ ವಾಹನಗಳಲ್ಲಿ ಹಾಗೂ ಕಚೇರಿಗಳಲ್ಲಿ ಬೆಳಗ್ಗಿನಿಂದಲೇ ಭಗವಧ್ವಜವನ್ನು ಹಾರಿಸಬೇಕು ಮತ್ತು ಶ್ರೀರಾಮ ಭಾವಚಿತ್ರವನ್ನಿರಿಸಿ ಪೂಜಿಸಬೇಕು. ಮಧ್ಯಾಹ್ನ ೧೨.೨೦ಕ್ಕೆ ಎಲ್ಲ ದೇವಸ್ಥಾನ, ಮಂದಿರಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಎಲ್ಲರೂ ಅದರಲ್ಲಿ ಪಾಲ್ಗೊಳ್ಳಬೇಕು ಎಂದು ವಿಹಿಂಪ, ಬಜರಂಗ ದಳ ಕರೆ ನೀಡಿದೆ.
ಕನ್ನಡಪ್ರಭವಾರ್ತೆ ಪುತ್ತೂರು
ಅಯೋಧ್ಯೆಯಲ್ಲಿ ಜ.೨೨ ರಂದು ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠೆಯು ಮಧ್ಯಾಹ್ನ ೧೨.೨೦ ರ ಶುಭಮುಹೂರ್ತದಲ್ಲಿ ನೆರವೇರಲಿದ್ದು, ಈ ಸಂದರ್ಭದಲ್ಲಿ ಪೂರ್ವಾಹ್ನ ೧೧ ಗಂಟೆಯಿಂದ ೧.೩೦ ಗಂಟೆಯವರೆಗೆ ಎಲ್ಲ ಹಿಂದೂಗಳು ತಮ್ಮ ವ್ಯವಹಾರ, ವಹಿವಾಟುಗಳಿಗೆ ಬಿಡುವು ನೀಡಿ ಸ್ಥಳೀಯ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ರಾತ್ರಿ ಮನೆಗಳಲ್ಲಿ ೨ನೇ ದೀಪಾವಳಿಯಂತೆ ದೀಪಾಲಂಕಾರ ಮಾಡುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕ್ಷತೆ ವಿತರಣೆಯ ಜಿಲ್ಲಾ ಸಂಯೋಜಕರಾದ ವಿಹಿಂಪ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಹಾಗೂ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ವಿಭಾಗ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಅವರು ಅಂದು ಎಲ್ಲರೂ ತಮ್ಮ ಮನೆಗಳಲ್ಲಿ, ಅಂಗಡಿಗಳಲ್ಲಿ ವಾಹನಗಳಲ್ಲಿ ಹಾಗೂ ಕಚೇರಿಗಳಲ್ಲಿ ಅಂದು ಬೆಳಗ್ಗಿನಿಂದಲೇ ಭಗವಧ್ವಜವನ್ನು ಹಾರಿಸಬೇಕು ಮತ್ತು ಶ್ರೀರಾಮ ಭಾವಚಿತ್ರವನ್ನಿರಿಸಿ ಪೂಜಿಸಬೇಕು. ಮಧ್ಯಾಹ್ನ ೧೨.೨೦ಕ್ಕೆ ಎಲ್ಲ ದೇವಸ್ಥಾನ, ಮಂದಿರಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಎಲ್ಲರೂ ಅದರಲ್ಲಿ ಪಾಲ್ಗೊಳ್ಳಬೇಕು, ಪ್ರಧಾನಿ ಮೋದಿಯವರ ಕರೆಯಂತೆ ಆ ದಿನ ರಾತ್ರಿ ಎಲ್ಲ ಹಿಂದೂ ಬಾಂಧವರು ಕನಿಷ್ಠ ಐದು ದೀಪಗಳನ್ನು ಬೆಳಗಿಸಿ ದೀಪಾವಳಿ ಆಚರಿಸಬೇಕು. ಅನಂತರ ಉತ್ತರಾಭಿಮುಖವಾಗಿ ಅಯೋಧ್ಯೆಯ ದಿಕ್ಕಿನಲ್ಲಿ ಆರತಿ ಬೆಳಗಿ ಶ್ರೀರಾಮನನ್ನು ಆರಾಧಿಸಬೇಕು ಎಂದರು.ಅಂದು ಪುತ್ತೂರು ನಗರದ ಪ್ರಮುಖ ಎರಡು ದೇವಾಲಯಗಳಾದ ಶ್ರೀಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಬೆಳಗ್ಗಿನಿಂದ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ. ಬೆಳಗ್ಗೆ ೧೧.೩೦ಕ್ಕೆ ಮಹಾಲಿಂಗೇಶ್ವರ ದೇವಾಲಯದಲ್ಲಿ ರಾಮತಾರಕ ಯಜ್ಞದ ಪೂರ್ಣಾಹುತಿ ನಡೆಯಲಿದೆ. ದೇವಾಲಯದಿಂದ ಹಮ್ಮಿಕೊಂಡಿರುವ ಅಶ್ವಯಾತ್ರೆಯ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಾಂತ ಸದಸ್ಯ ಅಜಿತ್ ರೈ ಹೊಸಮನೆ, ವಿಹಿಂಪ ಪುತ್ತೂರು ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ ಹಾಜರಿದ್ದರು.