ಸಾರಾಂಶ
ರಾಮಭಕ್ತರು ಸೋಮವಾರಪೇಟೆ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಹಾತ್ಮಗಾಂಧಿ ಪ್ರತಿಮೆ ಸಮೀಪ ಪಾನಕ ವಿತರಿಸಲಾಯಿತು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಶ್ರೀ ಅಂಜನೇಯ ಮತ್ತು ರಾಮಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪಟ್ಟಣದ ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜೆ ನೆರವೇರಿಸಲಾಯಿತು.ರಾಮಭಕ್ತರು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಹಾತ್ಮಗಾಂಧಿ ಪ್ರತಿಮೆ ಸಮೀಪ ಪಾನಕ ವಿತರಿಸಲಾಯಿತು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಶ್ರೀ ಅಂಜನೇಯ ಮತ್ತು ರಾಮಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.ಶ್ರೀರಾಮಮಂದಿರದಲ್ಲಿ ಗಣಪತಿ ಹೋಮ, ಶ್ರೀರಾಮತಾರಕ ಹೋಮ, ವಿಶೇಷ ಪೂಜೆ, ಭಜನೆ, ಅನ್ನದಾನ ಏರ್ಪಡಿಸಲಾಗಿತ್ತು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಅವರು ಪೂಜೋತ್ಸವದಲ್ಲಿ ಭಾಗವಹಿಸಿದ್ದರು.
ಪಟ್ಟಣದ ಶ್ರೀ ಗಣಪತಿ, ಬಸವೇಶ್ವರ, ಸೋಮೇಶ್ವರ, ವೆಂಕಟೇಶ್ವರ ಸೇರಿದಂತೆ ಗ್ರಾಮೀಣ ಭಾಗದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು.ಅಬ್ಬೂರುಕಟ್ಟೆ ಜಂಕ್ಷನ್‍ನಲ್ಲಿ ರಾಮಭಕ್ತರು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ಎಲ್‍ಇಡಿ ಪರದೆಯಲ್ಲಿ ಬಿತ್ತರಿಸಲಾಯಿತು. ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಲೋಕಾರ್ಪಣೆ ಮತ್ತು ಬಾಲರಾಮನ ಪ್ರಾಣಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಅರಸಿನಕುಪ್ಪೆ-ಸಿದ್ಧಲಿಂಗಪುರದ ಶ್ರೀಮಂಜುನಾಥಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ರಾಮತಾರಕ ಹೋಮ ಮತ್ತು ವಿಶೇಷ ಪೂಜೆಗಳು ನೆರವೇರಿದವು.ಕ್ಷೇತ್ರದ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು. ನಂತರ ದೇವಾಲಯದ ಭಕ್ತಾದಿಗಳಿಂದ ರಾಮ ಕೀರ್ತನೆ, ರಾಮನಾಮ ಜಪ ಮತ್ತು ಭಜನಾ ಕಾರ್ಯಕ್ರಮಗಳು ನಡೆದವು. ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಯಾದ ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನದಾನವನ್ನು ಏರ್ಪಡಿಸಲಾಗಿತ್ತು.ದೇವಾಲಯದ ಪದಾಧಿಕಾರಿಗಳು, ಭಕ್ತವೃಂದ, ಅರಸಿನಕುಪ್ಪೆ, ಬಸಿರುಕುಪ್ಪೆ ಮತ್ತು ಸಿದ್ಧಲಿಂಗಪುರ ಸುತ್ತಮುತ್ತಲಿನ ಗ್ರಾಮಸ್ಥರು ರಾಮನ ಪೂಜೆಯಲ್ಲಿ ಪಾಲ್ಗೊಂಡಿದ್ದರು.