ಸಾರಾಂಶ
ಧಾರವಾಡ:
ಹುಬ್ಬಳ್ಳಿಯ ನೇಹಾ ಹತ್ಯೆ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಹತ್ಯೆ ತಡೆಯಲು ಶ್ರೀರಾಮಸೇನೆ ಸಹಾಯವಾಣಿ ಆರಂಭಿಸಿದ್ದಲ್ಲದೇ ಬುಧವಾರ ಯುವತಿಯರ ರಕ್ಷಣೆಗೆ ತ್ರಿಶೂಲ ದೀಕ್ಷೆ ನೀಡುವ ಮೂಲಕ ಹೊಸದೊಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.ವಿದ್ಯಾರ್ಥಿಗಳು, ನೌಕರಸ್ಥರು ಸೇರಿದಂತೆ ಮಹಿಳೆಯರು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಶ್ರೀರಾಮಸೇನೆ ಈ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಗರದ ವಿದ್ಯಾಗಿರಿ ಬಡಾವಣೆಯ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಿಳೆಯರು ಸ್ವಯಂ ರಕ್ಷಣೆ ಮಾಡಿಕೊಳ್ಳಲು 50ಕ್ಕೂ ಹೆಚ್ಚು ತ್ರಿಶೂಲ ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೀಳಗಿಯ ರಾಮಲಿಂಗೇಶ್ವರ ಸಂಸ್ಥಾನ ಮಠದ ಮಾತಾ ವಚನಶ್ರೀ, ಹಿಂದೂ ಮಹಿಳೆಯರು ಹಿಂದೂ ಸಂಸ್ಕೃತಿಯನ್ನು ಸರಿಯಾಗಿ ಪಾಲಿಸಿದರೆ ಯಾವುದೇ ಅನಾಹುತ ಸಂಭವಿಸುವುದಿಲ್ಲ. ದೌರ್ಜನ್ಯದ ಸಂದರ್ಭ ಬಂದರೆ ಈಗ ಮಹಿಳೆಯರಿಗೆ ವಿತರಿಸುವ ತ್ರಿಶೂಲವನ್ನು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಮಹಿಳೆಯರ ರಕ್ಷಣೆಯ ವಿಷಯದಲ್ಲಿ ಸರ್ಕಾರ ಮಾಡಬೇಕಾದ ಕಾರ್ಯವನ್ನು ಶ್ರೀರಾಮಸೇನೆ ಮಾಡುತ್ತಿದೆ ಎಂದರು.ಶಾಲೆ-ಕಾಲೇಜು, ನೌಕರಿ, ಮಾರುಕಟ್ಟೆ ಹೀಗೆ ಅನೇಕ ಸಂದರ್ಭಗಳಲ್ಲಿ ಮಹಿಳೆಯ ಸಮಾಜದಲ್ಲಿ ಭಾಗಿಯಾಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯ ಜತೆಗೆ ಅವರ ಕುಟುಂಬದವರು ಜತೆಗಿರಲು ಸಾಧ್ಯವಿಲ್ಲ. ಯುವಕರು ಮಹಿಳೆಯರನ್ನು ತಮ್ಮತ್ತ ಸೆಳೆಯಲು ಸಹಾಯ ರೂಪದಲ್ಲಿ ಪ್ರಯತ್ನಿಸುತ್ತಿದ್ದಾರೆ. ಆ ಸಹಾಯವನ್ನು ಮಹಿಳೆಯರು ತಿರಸ್ಕಾರ ಮಾಡಬೇಕು. ಈ ಮೂಲಕ ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಬಹುದು ಎಂದು ಹೇಳಿದರು.
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಮಾತನಾಡಿ, ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುತ್ತಿಲ್ಲ. ತ್ರಿಶೂಲ ದೀಕ್ಷಾ ನೀಡಲು ಕಾಳಿಯ ಆರಾಧನೆ ಅವಳ ಶಕ್ತಿ ಮಹಿಳೆಯರಲ್ಲಿ ಬರಲಿ ಎನ್ನುವ ಉದ್ದೇಶ ಹೊಂದಿದೆ. ಸುಮಾರು ಐದು ಇಂಚು ಉದ್ದದ ಈ ತ್ರಿಶೂಲವನ್ನು ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ತಮ್ಮೊಂದಿಗೆ ಒಯ್ಯಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. ಪರ್ಸ್ ಅಥವಾ ವ್ಯಾನಿಟಿ ಬ್ಯಾಗುಗಳಲ್ಲಿ ಇದನ್ನು ಇಟ್ಟುಕೊಳ್ಳಬಹುದು. ಆರು ಇಂಚಿಗೂ ಅಧಿಕ ಉದ್ದದ ತ್ರಿಶೂಲವನ್ನು ಮಾರಕಾಸ್ತ್ರ ಅಥವಾ ಆಯುಧವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಶ್ರೀರಾಮಸೇನೆ ಈ ತ್ರಿಶೂಲದ ಉದ್ದವನ್ನು ಐದು ಇಂಚಿಗೆ ಇಳಿಸಿದ್ದು, ತಮ್ಮ ಮೇಲೆ ದೌರ್ಜನ್ಯದ ಸಂದರ್ಭದಲ್ಲಿ ಮಾತ್ರ ತ್ರಿಶೂಲ ಬಳಸಲು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ತಮ್ಮ ಮೇಲೆ ಏಕಾಏಕಿ ದಾಳಿಯದಾಗ ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆಯೂ ತಿಳಿವಳಿಕೆ ನೀಡಲಾಯಿತು. ನ್ಯಾಯವಾದಿ ಸಚಿನ ಕುಲಕರ್ಣಿ ಮಹಿಳೆಯರಿಗೆ ಕಾನೂನು ಸಲಹೆ ನೀಡಿದರು. ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಟಕರ, ಗ್ರಾಮೀಣ ಅಧ್ಯಕ್ಷ ಮೈಲಾರ ಗುಡ್ಡಪ್ಪನರ, ಹುಬ್ಬಳ್ಳಿ ನಗರ ಉಪಾಧ್ಯಕ್ಷ ಗುಣಧರ ದಡೌತಿ, ಪುಟ್ಟು ಜೋಶಿ ಇದ್ದರು.