ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಚಿಕ್ಕರಸಿನಕೆರೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀಕಾಲಭೈರವೇಶ್ವರ ಸ್ವಾಮಿ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.ರಥೋತ್ಸವಕ್ಕೆ ಶ್ರೀಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಸತ್ಯ, ಧರ್ಮದಿಂದ ನಡೆದಾಗ ಮಾತ್ರ ನಾವು ಮುಕ್ತಿ ಕಾಣಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರು ದ್ವೇಷ-ಅಸೂಯೆಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ಇತಿಹಾಸ ಪ್ರಸಿದ್ಧ ಚಿಕ್ಕರಸಿನಕೆರೆ ಕಾಲಭೈರವೇಶ್ವರಸ್ವಾಮಿ ರಥೋತ್ಸವಕ್ಕೆ ವಿವಿಧ ಕಡೆಗಳಿಂದ ಭಕ್ತಾದಿಗಳು ಆಗಮಿಸಿ ತಮ್ಮ ಕಷ್ಟಕಾರ್ಪಾಣ್ಯಗಳು ಈಡೇರಿಸಿಸುವಂತೆ ಪ್ರಾರ್ಥಿಸಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ನಾನು ಬಸಪ್ಪನಲ್ಲಿ ಪ್ರಾರ್ಥಿಸುತ್ತೇನೆ ಎಂದರು.ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಪುರುಪೋತ್ತಮಾನಂದನಾಥ ಸ್ವಾಮೀಜಿ, ಪ್ರಸನ್ನನಾಥ ಸ್ವಾಮೀಜಿ ರಥೋತ್ಸವದಲ್ಲಿ ಪೂಜೆಯಲ್ಲಿ ಭಾಗವಹಿಸಿದ್ದರು.
ರಥೋತ್ಸವಕ್ಕೂ ಮುನ್ನ ಕಾರ್ಕಹಳ್ಳಿ ಬಸವೇಶ್ವರ, ಬುಳ್ಳಕೆಂಪನದೊಡ್ಡಿ ನಿಶಾನಿ ಕಂಭ, ಮುಟ್ಟನಹಳ್ಳಿ ಏಳೂರಮ್ಮ, ಕಾಳಮ್ಮ, ಚಿಕ್ಕಸಿನಕೆರೆ ಹೊನ್ನಾರತಿ ಪೂಜೆಗಳು, ಛತ್ರಿ-ಚಾಮರಗಳು, ನಂದಿ ಕಂಭಗಳು ರಥದ ಬಳಿಗೆ ಆಗಮಿಸಿದವು. ತುಸು ಹೊತ್ತು ರಥದ ಮುಂಭಾಗ ದುಬ್ಬಾರೆ, ತಮಟೆ, ನಗಾರಿಗಳ ಸದ್ದಿಗೆ ಜನರು ಕುಣಿತ ಹಾಕಿದರು.ನಂತರ ರಥೋತ್ಸವಕ್ಕೆ ಚಾಲನೆ ಸಿಕ್ಕಿತು. ಇದಲ್ಲದೇ ಡೊಳ್ಳುಕುಣಿತ, ಪೂಜಾಕುಣಿತ, ದೊಣ್ಣೆವರಸೆ, ವೀರಗಾಸೆ, ಗಾರುಡಿಗೊಂಬೆಗಳ ಕುಣಿತವನ್ನೂ ಹಮ್ಮಿಕೊಳ್ಳಲಾಗಿತ್ತು. ರಥವನ್ನು ವಿವಿಧ ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿತ್ತು. ರಥದ ಮಧ್ಯ ಭಾಗದಲ್ಲಿ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಕಾಲಭೈರವೇಶ್ವರಸ್ವಾಮಿ ದೇವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿತ್ತು.
ಈ ವೇಳೆ ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ರಥವನ್ನು ಎಳೆದರು. ಗ್ರಾಮದ ಮಹಿಳೆಯರು ರಸ್ತೆಯುದ್ದಕ್ಕೂ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು. ಭಕ್ತರಿಗೆ ಪಾನಕ, ಮಜ್ಜಿಗೆಯನ್ನು ವಿತರಣೆ ಮಾಡಲಾಯಿತು.ರಥದಲ್ಲಿ ಇರಿಸಲಾದ ಶ್ರೀಕಾಲಭೈರವೇಶ್ವರ ಸ್ವಾಮಿ ವಿಗ್ರಹಕ್ಕೆ ಭಕ್ತಾದಿಗಳು ಹಣ್ಣು-ಹವನ ಎಸೆದು ಭಕ್ತಿಪೂರ್ವವಾಗಿ ನಮನ ಸಲ್ಲಿಸಿದರು. ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು. ಯಾವುದೇ ಅಹಿತರಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.