ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಅಧ್ಯಯನ ಮಾಡಿದ್ದಲ್ಲಿ ಶ್ರೀಕೃಷ್ಣನ ಮಹತ್ವ ಬಗ್ಗೆ ಅರಿವಾಗುತ್ತದೆ. ಆ ದಿಸೆಯಲ್ಲಿ ಶ್ರೀಕೃಷ್ಣನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಚಿಂತಕರಾದ ಚಿ.ನಾ.ಸೋಮೇಶ್ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ‘ಶ್ರೀಕೃಷ್ಣ ಜನ್ಮಾಷ್ಟಮಿ’ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ಶ್ರೀಕೃಷ್ಣ ಒಂದು ರೀತಿ ವಿಶಿಷ್ಟ ಚೇತನರಾಗಿದ್ದು, ವಿಶ್ವದ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಶ್ರೀಕೃಷ್ಣನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಹೆಚ್ಚಿನ ಗೌರವ ಮತ್ತು ಭಕ್ತಿ ಇದೆ. ಶ್ರೀಕೃಷ್ಣನ ವೇಷದಲ್ಲಿ ಮಕ್ಕಳನ್ನು ಕಾಣುತ್ತೇವೆ. ಜೊತೆಗೆ ಶ್ರೀಕೃಷ್ಣನನ್ನು ಮಹಾಭಾರತದಲ್ಲಿ ಸಾರಥಿಯಾಗಿ ನೋಡುತ್ತೇವೆ ಎಂದರು. ಮಹಾಭಾರತದಲ್ಲಿ ಶ್ರೀಕೃಷ್ಣನ ಬಗ್ಗೆ ಒಳ್ಳೆಯ ಸಂದೇಶ ತಿಳಿಯುತ್ತೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ನೀಡಿದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಶ್ರೀಕೃಷ್ಣ ಸಾರಿದ್ದಾರೆ ಎಂದು ಸೋಮೇಶ್ ಅವರು ನುಡಿದರು. ಜೀವನವು ನಿಂತ ನೀರಾಗದೆ ಹರಿವ ನೀರಿನಂತೆ ಬದುಕನ್ನು ಮುನ್ನಡೆಸಬೇಕು. ಉತ್ತಮ ಬದುಕು ರೂಪಿಸಿಕೊಳ್ಳಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಮಹಾಭಾರತದಲ್ಲಿ ಶ್ರೀಕೃಷ್ಣನ ಸಂದೇಶಗಳು ಒಳ್ಳೆಯ ಚಿಂತನೆ ಒಳಗೊಂಡಿದೆ ಎಂದು ಚಿ.ನಾ.ಸೋಮೇಶ್ ಅವರು ಪ್ರತಿಪಾದಿಸಿದರು.ಭರತ ಖಂಡದಲ್ಲಿ ಇಡೀ ವೇದಾಂತವನ್ನು ಸುಲಲಿತವಾಗಿ ತಲುಪಿಸಿದವರು ಶ್ರೀಕೃಷ್ಣ ಎಂದರೆ ತಪ್ಪಾಗಲಾರದು. ತತ್ವಶಾಸ್ತ್ರ ಸೇರಿದಂತೆ ಹಲವು ಜ್ಞಾನವನ್ನು ಹೊಂದಿದ್ದ ಶ್ರೀಕೃಷ್ಣರು ಇಡೀ ಭರತ ಖಂಡದಲ್ಲಿ ತಮ್ಮದೇ ಆದ ಇತಿಹಾಸ ಹೊಂದಿದ್ದಾರೆ ಎಂದು ವಿವರಿಸಿದರು. ಗೋಕುಲದಲ್ಲಿ ಆಟವಾಡಿಕೊಂಡು ಬೆಳೆದ ಶ್ರೀಕೃಷ್ಣ ಅವರ ಸಂದೇಶಗಳನ್ನು ತಿಳಿದುಕೊಳ್ಳಬೇಕು. ಶ್ರೀಕೃಷ್ಣನಿಂದ ತಾಳ್ಮೆ ಕಲಿಯುವಂತಾಗಬೇಕು ಎಂದರು.ತಹಸೀಲ್ದಾರರಾದ ಶ್ರೀಧರ ಅವರು ಮಾತನಾಡಿ, ಶ್ರೀಕೃಷ್ಣನ ಆದರ್ಶ ಗುಣಗಳು ಸಾರ್ವಕಾಲೀಕವಾಗಿದ್ದು, ಶ್ರೀಕೃಷ್ಣರ ಮನಸ್ಸು ಮತ್ತು ಚಿಂತನೆಗಳು ಪ್ರೇರಣೆಯಾಗಿದೆ ಎಂದರು. ಮನಸ್ಸು ನೆಮ್ಮದಿಯಾಗಿದ್ದಾಗ ನಕಾರಾತ್ಮಕ ಯೋಚನೆಗೆ ಜಾಗ ಇರುವುದಿಲ್ಲ, ಆ ನಿಟ್ಟಿನಲ್ಲಿ ಶ್ರೀಕೃಷ್ಣರ ಬದುಕು ಒಂದು ರೀತಿ ಮಾದರಿ ಎಂದು ಅವರು ನುಡಿದರು. ಕಂಚಿಕಾಮಾಕ್ಷಿ ದೇವಾಲಯ ಸಮಿತಿಯ ಗೌರವ ಅಧ್ಯಕ್ಷರಾದ ಜಿ.ವಿ.ರವಿಕುಮಾರ್ ಅವರು ಮಾತನಾಡಿ ಶ್ರೀಕೃಷ್ಣನ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಶ್ರೀಕೃಷ್ಣರು ಭಕ್ತಿಯ ಶಕ್ತಿಯಾಗಿ ಬರುತ್ತಾರೆ ಎಂದು ತಿಳಿಸಿದರು. ಜೀವನದಲ್ಲಿ ಮಾನವೀಯ ಮೌಲ್ಯ ಮತ್ತು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ದ್ವೇಷ, ಅಸೂಯೆ, ಅಸಹನೆ, ಅಸಹಿಷ್ಣುತೆ ಇರಬಾರದು. ಒಳ್ಳೆಯದನ್ನು ರೂಡಿಸಿಕೊಳ್ಳಬೇಕು ಎಂದರು. ಪ್ರಿಯಾ ರವಿಕುಮಾರ್ ಅವರು ಮಾತನಾಡಿ, ರಾಷ್ಟ್ರದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟ ಹಾಗೂ ವಿಶೇಷವಾಗಿ ಭಕ್ತಿಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಕಂಚಿ ಕಾಮಾಕ್ಷಮ್ಮ ದೇವಾಲಯ ಸಮಿತಿಯ ಉಪಾಧ್ಯಕ್ಷರಾದ ಜಗದೀಶ್ ಅವರು ಮಾತನಾಡಿ ದೇಶ ವಿದೇಶಗಳಲ್ಲಿ ಶ್ರೀಕೃಷ್ಣನ ಅಧ್ಯಯನ ಮಾಡಿದ್ದಾರೆ. ಶ್ರೀಕೃಷ್ಣ ಜಗತ್ಪ್ರಸಿದ್ದ ಮೇರು ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಸೂಯೆ ನಾಶ ಆಗಬೇಕು ಎಂದು ಶ್ರೀಕೃಷ್ಣರು ಬದುಕಿನುದ್ದಕ್ಕೂ ಸಾರಿದ್ದಾರೆ ಎಂದು ನುಡಿದರು. ಬ್ಲಾಸಂ ಶಾಲೆಯ ಮುಖ್ಯೋಪಾಧ್ಯಾಯರಾದ ಅನಸೂಯ ಮಾತನಾಡಿ ಪ್ರತಿಯೊಬ್ಬರೂ ಕಷ್ಟದಲ್ಲಿದ್ದಾಗ ಶ್ರೀಕೃಷ್ಣನನ್ನು ಸ್ಮರಿಸುತ್ತೇವೆ. ಆದ್ದರಿಂದ ರಾಷ್ಟ್ರದಲ್ಲಿ ಶ್ರೀಕೃಷ್ಣರಿಗೆ ತನ್ನದೇ ಆದ ಮಹತ್ವದ ಸ್ಥಾನವಿದೆ ಎಂದು ಹೇಳಿದರು. ಕಂಚಿ ಕಾಮಾಕ್ಷಮ್ಮ ದೇವಾಲಯ ಸಮಿತಿಯ ಅಧ್ಯಕ್ಷರಾದ ಜಿ.ಎಲ್.ದಾಸ್, ಉಪಾಧ್ಯಕ್ಷರಾದ ಪೆರುಮಾಳ್, ಗೌರವಾಧ್ಯಕ್ಷರಾದ ಜಿ.ಜಿ.ಬಾಲಕೃಷ್ಣ, ಪವನ್ ಜಿ.ಬಿ., ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಅನಿಲ್ ಎಚ್.ಟಿ., ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.