ಬಳ್ಳಾರಿಯಲ್ಲಿ ವಿಜೃಂಭಣೆಯಿಂದ ನಡೆದ ಶ್ರೀಕೃಷ್ಣ ಜಯಂತ್ಯುತ್ಸವ

| Published : Aug 27 2024, 01:31 AM IST

ಸಾರಾಂಶ

ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಗಣಿಜಿಲ್ಲೆ ಬಳ್ಳಾರಿಯಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಬಳ್ಳಾರಿ: ವಿಷ್ಣು ಶ್ರೀಕೃಷ್ಣನಾಗಿ ಭೂಮಿಯ ಮೇಲೆ ಅವತರಿಸಿದ ಶುಭ ದಿನ ಎಂದೇ ನಂಬಲಾಗುವ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಗಣಿಜಿಲ್ಲೆ ಬಳ್ಳಾರಿಯಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ನಗರದ ಶ್ರೀಕೃಷ್ಣನ ದೇವಸ್ಥಾನಗಳಲ್ಲಿ ವಿಶೇಷ ಪೂಂಜಾ ಕೈಂಕರ್ಯಗಳು ನಡೆದವು. ನಗರದ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಕೃಷ್ಣ ಅವತಾರದ ಗೀತೆಗಳಿಗೆ ಚಿಣ್ಣರು ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತ್ಯುತ್ಸವಕ್ಕೆ ಸಂಸದ ಈ.ತುಕಾರಾಂ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬವಾಗಿದೆ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಕರೆಯಲಾಗುತ್ತಿದ್ದು, ದೇಶಾದ್ಯಂತ ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಶ್ರೀಕೃಷ್ಣನು ಜ್ಞಾನ ಮತ್ತು ಪ್ರೇಮದ ಸಂಕೇತವಾಗಿದ್ದಾನೆ. ಪ್ರತಿ ಮನುಷ್ಯ ತನ್ನ ಜ್ಞಾನವನ್ನು ವೃದ್ಧಿಸಿಕೊಳ್ಳುವ ಮೂಲಕ ಮನಸ್ಸು ಮತ್ತು ಬುದ್ಧಿಯ ಪರಿಪಕ್ವತೆ ಹೊಂದುತ್ತಾನೆ. ಇದು ಉತ್ತಮ ಜೀವನ ನಡೆಗೆ ಹಾದಿಯಾಗುತ್ತದೆ. ಮನುಷ್ಯ ಜೀವನ ಹೇಗಿರಬೇಕು. ಯಾವ ರೀತಿಯ ಉತ್ತಮ ನಡೆ-ನುಡಿ ಹೊಂದಬೇಕು. ಮೋಕ್ಷ ಸಂಪಾದಿಸುವುದು ಹೇಗೆ? ಎಂಬಿತ್ಯಾದಿ ಅನೇಕ ಸಂಗತಿಗಳನ್ನು ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ. ಭಗವದ್ಗೀತೆಯ ಬರುವ ಅನೇಕ ಧಾರ್ಮಿಕ ವಿಚಾರಗಳನ್ನು ಮನನ ಮಾಡಿಕೊಂಡು ಸತ್ಯದ ಹಾದಿಯಲ್ಲಿ ಸಾಗಬೇಕು. ಶ್ರೀಕೃಷ್ಣನ ನ್ಯಾಯ-ನೀತಿಯ ಸಾರವನ್ನು ಅಳವಡಿಸಿಕೊಳ್ಳಬೇಕು ಎಂದು ಸಂಸದ ಈ.ತುಕಾರಾಂ ಹೇಳಿದರು.

ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿ, ಭಗವದ್ಗೀತೆಯಲ್ಲಿ ಜೀವನದ ಸಾರಾಂಶ ಅಡಗಿದೆ. ಅವುಗಳನ್ನು ಭಕ್ತಿ ಭಾವನೆಯಿಂದ ಅನುಸರಿಸಿ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್. ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು.

ಸಮಾರಂಭದಲ್ಲಿ ಹಾಜರಿದ್ದ ಗಣ್ಯರು ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಎಸ್‌ಜಿಟಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಅಮಾತಿ ಬಸವರಾಜ ಶ್ರೀಕೃಷ್ಣನ ಜಯಂತಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮೇಯರ್ ನಂದೀಶ್ ಮುಲ್ಲಂಗಿ, ಮಾಜಿ ವಿಧಾನಪರಿಷತ್ ಸದಸ್ಯ ಕೆಎಸ್‌ಎಲ್ ಸ್ವಾಮಿ, ಮಹಾನಗರ ಪಾಲಿಕೆ ಸದಸ್ಯ ಹಾಗೂ ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಪಿ.ಗಾದೆಪ್ಪ, ಪಾಲಿಕೆ ಸದಸ್ಯರಾದ ಹನುಮಂತಪ್ಪ, ಗುಡಿಗಂಟಿ ಹನುಮಂತು, ಕಾಂಗ್ರೆಸ್ ಮುಖಂಡ ಹುಮಾಯೂನ್ ಖಾನ್, ಡಾ.ಗಾದಿಲಿಂಗನಗೌಡ, ಕಾಂಗ್ರೆಸ್‌ನ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ, ಚಿದಾನಂದಪ್ಪ, ಸುರೇಖಾ ಮಲ್ಲನಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಳ್ಳಾರಿಯ ಲಕ್ಮೀ ಕಲಾಕ್ಷೇತ್ರದ ಜಿಲಾನಿಬಾಷಾ ಅವರ ತಂಡದ ಸಮೂಹ ನೃತ್ಯವು ಗಮನ ಸೆಳೆಯಿತು.

ಮೆರವಣಿಗೆ: ಶ್ರೀ ಕೃಷ್ಣ ಜಯಂತ್ಯೋತ್ಸವ ಅಂಗವಾಗಿ ನಗರದಲ್ಲಿ ಶ್ರೀಕೃಷ್ಣ ಭಾವಚಿತ್ರದ ಮೆರವಣಿಗೆ ಜರುಗಿತು. ಮಹಾನಗರ ಪಾಲಿಕೆ ಕಚೇರಿ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಗಡಗಿ ಚೆನ್ನಪ್ಪ ವೃತ್ತ, ಸ್ಟೇಷನ್ ರಸ್ತೆ, ಹೆಚ್.ಆರ್.ಗವಿಯಪ್ಪ ವೃತ್ತದ ಮುಖಾಂತರ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದವರೆಗೆ ಸಾಗಿ ಬಂತು.

ಮೇಯರ್ ನಂದೀಶ್ ಮುಲ್ಲಂಗಿ ಸೇರಿದಂತೆ ಗೊಲ್ಲರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಗೊಲ್ಲ ಸಮುದಾಯದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.