ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವಕ್ಕೆ ಸಂಭ್ರಮದ ತೆರೆ

| Published : Jun 11 2024, 01:32 AM IST

ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವಕ್ಕೆ ಸಂಭ್ರಮದ ತೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ವಿವಿಧ ಭಾಗ ಸೇರಿದಂತೆ ತಮಿಳುನಾಡು, ಆಂಧ್ರ, ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಧಾವಿಸಿ ಬಂದ ಭಕ್ತರ ಮೊಗದಲ್ಲಿ ಅದೇನೋ ಉತ್ಸಾಹ, ಹಲವು ವರ್ಷದ ನಂತರ ಸೋಸಲೆ ವ್ಯಾಸರಾಜರ ಮಠ ಹಮ್ಮಿಕೊಂಡಿದ್ದ ಶ್ರೀಮನ್ ನ್ಯಾಯಸುಧಾ ಮಂಗಳ ಮಹೋತ್ಸವ ಕಳೆದ 9 ದಿನಗಳ ಕಾಲ ನವ ನವೋನ್ಮೇಷಿ ಆಗಿದ್ದು ಇತಿಹಾಸದಲ್ಲಿ ಹೊಸ ಅಧ್ಯಾಯಗಳನ್ನೇ ಬರೆಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಸೋಸಲೆ ಶ್ರೀ ವ್ಯಾಸರಾಜ ಮಠ ಮತ್ತು ಶ್ರೀ ವ್ಯಾಸತೀರ್ಥ ವಿದ್ಯಾಪೀಠ ಹಮ್ಮಿಕೊಂಡಿದ್ದ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವಕ್ಕೆ ಸೋಮವಾರ ಸಂಜೆ ಧನ್ಯತೆಯ ತೆರೆ ಬಿತ್ತು.

ಕಳೆದ 9 ದಿನಗಳಿಂದ ಕೃಷ್ಣಮೂರ್ತಿಪುರಂನ ವಿದ್ಯಾಪೀಠ- ಜೆ.ಪಿ. ನಗರದ ವಿಠ್ಠಲಧಾಮದಲ್ಲಿ ಹತ್ತಾರು ವಿದ್ವತ್ ಗೋಷ್ಠಿ, ವಿದ್ವಜ್ಜನರ ಸಮ್ಮಿಲನ, ಪಾಂಡಿತ್ಯ ಪ್ರದರ್ಶನ, ಮುಕ್ತ ಪ್ರಶ್ನೋತ್ತರ, ಮಹತ್ತರ ಗ್ರಂಥಗಳ ಬಗ್ಗೆ ಚರ್ಚೆ, ಆಚಾರ್ಯ ಮಧ್ವರು, ಜಯತೀರ್ಥರು, ಶ್ರೀ ವ್ಯಾಸರಾಜರ ಕೃತಿಗಳ ಅವಲೋಕನ ಮತ್ತು ಸಮಗ್ರ ವಿಚಾರ ಮಥನ- ಸುಧಾ ವಿದ್ಯಾರ್ಥಿಗಳಿಗೆ ನಾಡಿನ ಹಲವು ಪಂಡಿತರಿಂದ ನೇರಾ ನೇರ ಪ್ರಶ್ನೆ, ಇದಕ್ಕೆ ಸಾಕ್ಷಿಯಾದ ಹತ್ತಾರು ಮಹತ್ವದ ಪೀಠಗಳ ಯತಿಗಳು, ಹಂಸಕ್ಷೀರ ನ್ಯಾಯದಂತೆ ಅಂಕ ನೀಡಿದ ವಿದ್ಯಾಪೀಠಗಳ ಕುಲಪತಿ, ಪ್ರಾಚಾರ್ಯರು ಒಂದು ಜ್ಞಾನ ಲೋಕವನ್ನೇ ಸೃಷ್ಟಿ ಮಾಡಿಬಿಟ್ಟಿದ್ದರು.

ಭಕ್ತಿ, ಭಾವದ ಸಮುದಾಯಕ್ಕೆ ಹಲವು ಮಠಗಳ ಸನ್ಯಾಸಿಗಳು ನೆರವೇರಿಸಿದ ಸಂಸ್ಥಾನ ಪ್ರತಿಮೆಗಳ ಪೂಜೆ, ಗುರುಗಳಿಂದ ನೇರ ತೀರ್ಥ, ಫಲ, ಮಂತ್ರಾಕ್ಷತೆ ಪಡೆಯುವ ಸುಸಮಯ, ತಮ್ಮ ತಮ್ಮ ಮನೆತನದ ಪೀಠಾಧೀಶರಿಂದ ಅನುಗ್ರಹ ಹೊಂದುವ ಘಳಿಕೆ, ಉತ್ತರಾದಿ ಮಠ, ಮುಳಬಾಗಿಲು ಶ್ರೀಪಾದರಾಜರ ಮಠ, ಮಂತ್ರಾಲಯ, ಪೇಜಾವರ, ಪಲಿಮಾರು, ಅದಮಾರು, ಸೋದೆ, ಕಣ್ವ- ಹೀಗೆ ದಿನದಿಂದ ದಿನಕ್ಕೆ ಯತಿಗಳ ಸಮಾಗಮ ಕಳೆಗಟ್ಟಿದ್ದು, ಅವರ ಆಶೀರ್ವಚನ ಕೇಳಿ ಆತ್ಮಾನಂದ ಅನುಭವಿಸಿದ್ದು- ಬಣ್ಣಿಸಲು ಅಸದಳ.

ಕರ್ನಾಟಕದ ವಿವಿಧ ಭಾಗ ಸೇರಿದಂತೆ ತಮಿಳುನಾಡು, ಆಂಧ್ರ, ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಧಾವಿಸಿ ಬಂದ ಭಕ್ತರ ಮೊಗದಲ್ಲಿ ಅದೇನೋ ಉತ್ಸಾಹ, ಹಲವು ವರ್ಷದ ನಂತರ ಸೋಸಲೆ ವ್ಯಾಸರಾಜರ ಮಠ ಹಮ್ಮಿಕೊಂಡಿದ್ದ ಶ್ರೀಮನ್ ನ್ಯಾಯಸುಧಾ ಮಂಗಳ ಮಹೋತ್ಸವ ಕಳೆದ 9 ದಿನಗಳ ಕಾಲ ನವ ನವೋನ್ಮೇಷಿ ಆಗಿದ್ದು ಇತಿಹಾಸದಲ್ಲಿ ಹೊಸ ಅಧ್ಯಾಯಗಳನ್ನೇ ಬರೆಯಿತು.

ಶ್ರೀನಿವಾಸ ಕಲ್ಯಾಣ ಸಂಪನ್ನಗೊಂಡಿತು:

ಸೋಮವಾರ ಸಂಜೆ ಬೆಂಗಳೂರಿನ ಶ್ರೀವಾರಿ ಫೌಂಡೇಷನ್ ತಂಡದಿಂದ ಶ್ರೀನಿವಾಸ ಕಲ್ಯಾಣ ಸಂಪನ್ನಗೊಂಡಿತು. ನೂರಾರು ಭಕ್ತರು ಶ್ರೀನಿವಾಸ- ಪದ್ಮಾವತಿ ಕಲ್ಯಾಣಕ್ಕೆ ಸಾಕ್ಷಿಯಾದರು. ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಠದ ದಿವಾನರಾದ ಪಂಡಿತ ಬ್ರಹ್ಮಣ್ಯ ಆಚಾರ್ಯ, ಡಿ.ಪಿ. ಅನಂತಾಚಾರ್ಯ, ಡಿ.ಪಿ. ಮಧುಸೂದನಾಚಾರ್ಯ ಮೊದಲಾದವರು ಇದ್ದರು.

ಸುಧಾಮಂಗಳ ಮಹೋತ್ಸವ ಎಂದರೆ ಅದು 10 ಘಟಿಕೋತ್ಸವಕ್ಕೆ ಸಮ. 9 ದಿನಗಳ ಕಾರ್ಯಕ್ರಮ ವಿಜೃಂಭಿಸಿ ಸಾರ್ಥಕತೆ ಮೆರೆದಿದೆ. 4 ಜನ ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಸುಧಾ ಪರೀಕ್ಷೆ ಎದುರಿಸಿ ಸುಧಾ ಪಂಡಿತರೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದರ ಕೀರ್ತಿ ಸೋಸಲೆ ಶ್ರೀಗಳಿಗೆ ಸಲ್ಲುತ್ತಿದೆ. ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಈ ವೈಭವಕ್ಕೆ ನಾಡಿನ ವಿವಿಧ ಪ್ರಖ್ಯಾತ ಮಠಾಧೀಶರು ಸಾಕ್ಷಿ ಆಗಿದ್ದು, ಸಾವಿರಾರು ಭಕ್ತರು ಸಂಗಮಿಸಿ ಧನ್ಯತೆ ಮೆರೆದಿದ್ದು ಮಠದ ಪರಂಪರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

- ಡಿ.ಪಿ. ಮಧುಸೂದನಾಚಾರ್ಯ, ಗೌರವ ಕಾರ್ಯದರ್ಶಿ, ವ್ಯಾಸತೀರ್ಥ ವಿದ್ಯಾಪೀಠ