ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಶನಿವಾರ ನಿತಿನ್ಸ್ ನಾದಾಮೃತ ಸ್ಕೂಲ್ ಆಫ್ ಮ್ಯೂಸಿಕ್ 11ನೇ ವಾರ್ಷಿಕೋತ್ಸವ, 6ನೇ ರಾಜು ಗಾನಲಹರಿ ಕಾರ್ಯಕ್ರಮ ಶನಿವಾರ ಜರುಗಿತು.ಖ್ಯಾತ ಗಾಯಕಿ ಶುಭಾ ರಾಘವೇಂದ್ರ ಅವರಿಗೆ ಅನಂತಸ್ವಾಮಿ ಗಾನರತ್ನ, ಪಂಡಿತ ಭೀಮಾಶಂಕರ್ ಬಿದನೂರು ಅವರಿಗೆ ರಾಜು ನಾದರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.ಗೌರವ ಅತಿಥಿಯಾಗಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಮಾತನಾಡಿ, ಮೈಸೂರು ಅನಂತಸ್ವಾಮಿ ಹಾಗೂ ರಾಜು ಅನಂತಸ್ವಾಮಿ ಅವರ ಪರಂಪರೆಯನ್ನು ನಿತಿನ್ ರಾಜಾರಾಂ ಶಾಸ್ತ್ರಿ ಮುಂದುವರೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.ರಾಜು ಅನಂತಸ್ವಾಮಿ ಬಗ್ಗೆ ಮಾತನಾಡುವಾಗ ಭಾವುಕನಾಗುತ್ತೇನೆ. ಆತ ಸಂಗೀತದಲ್ಲಿ ಶಿಸ್ತಾಗಿದ್ದ. ಆದರೆ ಜೀವನದಲ್ಲಿ ಶಿಸ್ತು ಇರಲಿಲ್ಲ. ಅದೊಂದೆ ಇದ್ದರೆ ಆತ ಬಹುಕಾಲ ನಮ್ಮ ನಡುವೆ ಇರುತ್ತಿದ್ದ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಧ್ವನಿ ಫೌಂಡೇಷನ್ಸ್ ಸಂಸ್ಥಾಪಕಿ ಡಾ. ಶ್ವೇತಾ ಮಡಪ್ಪಾಡಿ ಮಾತನಾಡಿ, ನಿತಿನ್ ಸುಗಮ ಸಂಗೀತದ ಜೊತೆ ಜೊತೆಗೆ ಇತರೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕು. ಅದರಲ್ಲೂ ಸುಗಮ ಸಂಗೀತ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು.ಮುಖ್ಯ ಅತಿಥಿಯಾಗಿದ್ದ ಸುಗಮ ಸಂಗೀತ ಹಾಗೂ ಚಲನಚಿತ್ರ ಹಿನ್ನಲೆ ಗಾಯಕಿ ಶ್ರೀರಕ್ಷಾ ಪ್ರಿಯರಾಮ್ ಮಾತನಾಡಿ, ಎಂಎಸ್‌ಐಎಲ್ ಸ್ಪರ್ಧೆಯಿಂದ ಈ ಹಂತದವರೆಗೆ ನಿತಿನ್ ಬೆಳೆದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ನಿತಿನ್ ಹೊಸ ಹೊಸ ಪ್ರಯೋಗಗ ಳನ್ನು ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಇತ್ತೀಚೆಗೆ ನಾದಬ್ರಹ್ಮದಲ್ಲಿ ನಡೆಸಿದ ಅನಂತಯಾನ- ಅಶ್ವತ್ಥ್ಗಗಾನ ಕಾರ್ಯಕ್ರಮ ಭಾರಿ ಮನ್ನಣೆ ಗಳಿಸಿತು. ತನ್ನ ಸುಗಮ ಸಂಗೀತ ಚಟುವಟಿಕೆಗಳಿಂದಲೇ ಅಪಾರವಾದ ಅಭಿಮಾನ ಬಳಗ ಸಂಪಾದಿಸಿದ್ದಾರೆ ಎಂದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ವಿಶೇಷ ಆಹ್ವಾನಿತರಾಗಿದ್ದರು. ಖ್ಯಾತ ಗಾಯಕರಾದ ಬಿ.ವಿ. ಶ್ರೀನಿವಾಸ್, ನಾಗಚಂದ್ರಿಕಾ ಭಟ್, ಸಿ.ಎಂ. ನರಸಿಂಹಮೂರ್ತಿ ಇದ್ದರು. ನಿತಿನ್ ರಾಜಾರಾಂ ಶಾಸ್ತ್ರಿ ಸ್ವಾಗತಿಸಿದರು. ಜಿ.ಎನ್. ಮಂಜುನಾಥ್ ನಿರೂಪಿಸಿದರು. ಅಮೃತಾ ನಿತಿನ್ ವಂದಿಸಿದರು.ನಂತರ ಮೈಸೂರು ಅನಂತಸ್ವಾಮಿ ಹಾಗೂ ರಾಜು ಅನಂತಸ್ವಾಮಿ ಅವರ ಸಂಯೋಜನೆಯ ಗೀತೆಗಳನ್ನು ವಿದ್ಯಾಲಯದ ವಿದ್ಯಾರ್ಥಿಗಳು. ಅತಿಥಿ ಗಾಯಕರು ಹಾಡಿದರು. ಪುರುಷೋತ್ತಮ ಕಿರಗಸೂರು- ಕೀ ಬೋರ್ಡ್, ಪ್ರದೀಪ್ ಕಿಣ್ಗಾಲ್- ಗಿಟಾರ್, ಭೀಮಾಶಂಕರ ಬಿದನೂರು- ತಬಲ, ವಿನಯ್ ರಂಗಧೋಲಳ್- ರಿದಂ ಪ್ಯಾಡ್ ಸಾಥ್ ನೀಡಿದರು.