ಸಾರಾಂಶ
ಈ ವೇಳೆ ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗಾ ಮಾತನಾಡಿ, ಶುಭಾ ಸತೀಶ್ ಅವರು ನಮ್ಮ ತಂಡದ ನಾಯಕಿಯಾಗಿದ್ದು, ಮೈಸೂರಿನವರೇ ಮೈಸೂರು ತಂಡವನ್ನು ಮುನ್ನಡೆಸುತ್ತಿರುವುದು ಖುಷಿಯ ಸಂಗತಿ.
ಕನ್ನಡಪ್ರಭ ವಾರ್ತೆ ಮೈಸೂರು
ಚೊಚ್ಚಲ ಮಹಾರಾಣಿ ಟ್ರೋಫಿ ಕೆಎಸ್ಸಿಎ ಟಿ20 ಪಂದ್ಯಾವಳಿಗಾಗಿ ಭಾರತ ತಂಡದ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ಶುಭಾ ಸತೀಶ್ ಅವರನ್ನು ಮೈಸೂರು ವಾರಿಯರ್ಸ್ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಘೋಷಿಸಲಾಯಿತು.ನಗರದ ರೀಜೆಂಟಾ ಸೆಂಟ್ರಲ್ ಜವಾಜಿ ಹೊಟೇಲ್ ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶುಭಾ ಸತೀಶ್ ಅವರಿಗೆ ನಾಯಕತ್ವದ ಜಬಾವ್ದಾರಿ ವಹಿಸುವುದರೊಂದಿಗೆ ತಂಡದ ಇತರೆ ಆಟಗಾರರನ್ನು ಪರಿಚಯಿಸಲಾಯಿತು.ಇದೇ ಮೊದಲ ಬಾರಿಗೆ ಟಿ20 ಮಾದರಿಯಲ್ಲಿ ಮಹಿಳೆಯರಿಗೆ ಮಹಾರಾಣಿ ಟ್ರೋಫಿ ಟೂರ್ನಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಆ.5 ರಿಂದ 10 ರವರೆಗೆ ಬೆಂಗಳೂರಿನ ಹೊರವಲಯದ ಆಲೂರಿನ ಮೈದಾನದಲ್ಲಿ ಆಯೋಜಿಸಿದ್ದು, ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಟೂರ್ನಿಯಲ್ಲಿ ಪರಸ್ಪರ ಸೆಣೆಸಲಿವೆ.ಈ ವೇಳೆ ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗಾ ಮಾತನಾಡಿ, ಶುಭಾ ಸತೀಶ್ ಅವರು ನಮ್ಮ ತಂಡದ ನಾಯಕಿಯಾಗಿದ್ದು, ಮೈಸೂರಿನವರೇ ಮೈಸೂರು ತಂಡವನ್ನು ಮುನ್ನಡೆಸುತ್ತಿರುವುದು ಖುಷಿಯ ಸಂಗತಿ ಎಂದು ಹೇಳಿದರು.ನಾಯಕಿ ಶುಭಾ ಸತೀಶ್ ಮಾತನಾಡಿ, ನಮ್ಮ ತಂಡದ ಸಂಯೋಜನೆ ಬಹಳ ಉತ್ತಮವಾಗಿದೆ. ಎಲ್ಲರೂ ಒಳ್ಳೆಯ ಆಟಗಾರರಾಗಿದ್ದು, ಈ ತಂಡವನ್ನು ಮುನ್ನಡೆಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಆರ್ ಸಿಬಿ ಮಹಿಳಾ ತಂಡದಲ್ಲಿ ಆಡಿರುವ ಅನುಭವವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ ಎಂದು ತಿಳಿಸಿದರು.ತಂಡದ ಮುಖ್ಯ ಕೋಚ್ ಕರುಣಾ ಜೈನ್ ಮಾತನಾಡಿ, ನಮಗೆ ಬೇಕಾಗಿರುವ ತಂಡವೇ ಸಿಕ್ಕಿದೆ. ಈ ಟೂರ್ನಿಯಲ್ಲಿ ಯಶಸ್ಸು ಗಳಿಸುವ ವಿಶ್ವಾಸವಿದೆ. ಮೈಸೂರಿನಲ್ಲಿ ಆಟಗಾರರಿಗೆ ತರಬೇತಿ ನೀಡಲು ಉತ್ತಮ ವಾತಾವರಣ ಇರುವುದರಿಂದ ಇಲ್ಲೇ ನಮ್ಮ ತಂಡದ ಆಟಗಾರರು ತರಬೇತಿ ಪಡೆಯುತ್ತಿದ್ದಾರೆ ಎಂದರು.ಇದೇ ವೇಳೆ ಮೈಸೂರು ವಾರಿಯರ್ಸ್ ತಂಡದ ಗೀತೆಯ ವಿಡಿಯೋ ಬಿಡುಗಡೆಗೊಳಿಸಲಾಯಿತು. ಈ ಹಾಡಿಗೆ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ನಂತರ ಮೈಸೂರಿನ ಕೇರ್ಗಳ್ಳಿಯ ಕಸ್ತೂರ್ ಬಾ ಗಾಂಧಿ ಬಾಲಿಕಾ ವಿದ್ಯಾಲಯಕ್ಕೆ ಕ್ರೀಡಾ ಸಲಕರಣೆಯನ್ನು ವಿತರಿಸಲಾಯಿತು.ಮೈಸೂರು ವಾರಿಯರ್ಸ್ ತಂಡ:ಶುಭಾ ಸತೀಶ್ (ನಾಯಕಿ), ಸಹನಾ ಪಿ. ಪವಾರ್, ಪೂಜಾ ಕುಮಾರಿ, ಶಿಶಿರಾ ಗೌಡ, ರೋಹಿತಾ ಚೌಧರಿ, ವಂದಿತಾ ಕೆ. ರಾವ್, ದೀಕ್ಷಿತಾ ಜೆ. ಹೊನ್ನುಶ್ರೀ, ಎನ್.ಜಿ. ಪ್ರಕೃತಿ, ತನ್ವಿ ಎಸ್. ರಾಜ್, ಶ್ರೇಯಾ ಪೊಟೆ, ರಚಿತಾ ಹತ್ವಾರ್, ಕಿಂಜಲ್ ಪಟೇಲ್, ಅಲಂ ಫರಿಹಾ ಸೈಯದ್, ಎ. ರೂಹಿ, ಕುಸುಮಾ ಗೌಡ, ಸಿಲ್ಕಿನ್ ಪಟೇಲ್.