ಸಾರಾಂಶ
ಬಸವರಾಜ ನಂದಿಹಾಳ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿದೇಶದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದರೆ ಇನ್ನೊಂದೆಡೆ ಬೇಸಿಗೆ ಬಿಸಿಲಿನ ಪ್ರಖರತೆಯಿಂದಾಗಿ ಜನರು ತಂಪು ಪಾನಿಯ ಕಡೆಗೆ ಹೋಗುತ್ತಿರುವುದು ಕಂಡುಬರುತ್ತಿದೆ. ಬಸವನಬಾಗೇವಾಡಿ ಪಟ್ಟಣದಲ್ಲಿ ಬುಧವಾರ ೩೩ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಶಿವರಾತ್ರಿ ಅಮವಾಸ್ಯೆ ಕಳೆದ ನಂತರ ಬಿಸಿಲು ಆರಂಭವಾಗುತ್ತದೆ. ಇನ್ನೂ ಏಪ್ರಿಲ್ ತಿಂಗಳು ಬಂದಿಲ್ಲ. ಈಗ ಬಿಸಿಲಿನ ಪ್ರಖರತೆ ಜೋರಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಬಿಸಿಲಿನ ಪ್ರಖರತೆ ಇನ್ನೂ ಹೆಚ್ಚಾಗುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಮುಂಗಾರು-ಹಿಂಗಾರು ಮಳೆ ಪ್ರಮಾಣ ಕಡಿಮೆಯಾಗಿದೆ. ಈಗಾಗಲೇ ಬಿರು ಬಿಸಿಲಿನಿಂದ ಕೆರೆ-ಕಟ್ಟೆಗಳು ಖಾಲಿಯಾಗಿ ಹೋಗಿರುತ್ತಿದ್ದವು. ಆದರೆ, ಅಖಂಡ ತಾಲೂಕಿನಲ್ಲಿ ಕಾಲುವೆ ಮೂಲಕ ನೀರು ಬಿಟ್ಟಿದ್ದರಿಂದಾಗಿ ಕೆರೆಯಲ್ಲಿ ನೀರು ಕಾಣುತ್ತಿವೆ. ಇದೇ ರೀತಿಯಲ್ಲಿ ಬಿರು ಬಿಸಿಲು ಮುಂದುವರಿದರೆ ಮುಂಬರುವ ದಿನಗಳಲ್ಲಿ ಈ ನೀರು ಖಾಲಿಯಾಗುವ ಸಾಧ್ಯತೆ ಇದೆ. ಈ ಸಲ ಸಾಮಾನ್ಯಕ್ಕಿಂತಲೂ ಹೆಚ್ಚು ತಾಪಮಾನ ಇರುತ್ತದೆ ಎಂದು ಈಗಾಗಲೇ ಹವಾಮಾನ ತಜ್ಞರು ಹೇಳಿದ್ದಾರೆ.ನೆರಳಿಗೆ ಮೊರೆ:
ಬಿಸಿಲಿನ ಅಬ್ಬರಕ್ಕೆ ಜನರು ತಂಪು ಪಾನಿಯ, ಐಸ್‌ಕ್ರೀಂ, ಎಳುನೀರು, ಲಸ್ಸಿ, ಶರಬತ್ತು, ಕಲ್ಲಂಗಡಿ ಸೇರಿದಂತೆ ತಂಪು ಪಾನಿಯಗಳಿಗೆ ಮೊರೆಹೋಗುತ್ತಿದ್ದಾರೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಲಸ್ಸಿ, ಶರಬತ್ತು, ವಿವಿಧ ಹಣ್ಣಿನ ಜ್ಯೂಸ್ ಅಂಗಡಿ, ಎಳುನೀರು ಅಂಗಡಿಗಳು ಹೆಚ್ಚು ತಲೆಎತ್ತುತ್ತವೆ. ಜನರು ಮಧ್ಯಾಹ್ನ ವೇಳೆಯಲ್ಲಿ ಹೆಚ್ಚು ಹೊರಗಡೆ ಬರುವುದು ಕಡಿಮೆ. ಆದಷ್ಟು ಹೆಚ್ಚು ನೆರಳಲ್ಲಿ ಇರಲು ಬಯಸುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಮುಂಜಾಗ್ರತಾ ಕ್ರಮ ವಹಿಸಬೇಕಿದೆ.ಕಲ್ಲಂಗಡಿ ಬೆಲೆ ಹೆಚ್ಚಳ:
ಈ ಸಲ ಕಲ್ಲಂಗಡಿ ಹಣ್ಣು ಸೇರಿದಂತೆ ಬಹುತೇಕ ಎಲ್ಲ ಹಣ್ಣುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಕಲ್ಲಂಗಡಿ ₹೩೦ ರಿಂದ ೮೦ ರವರೆಗೆ ಮಾರಾಟವಾಗುತ್ತಿವೆ. ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಅಂಚೆ ಕಚೇರಿ ಮುಂಭಾಗ ಕಲ್ಲಂಗಡಿ ಹಣ್ಣಿನ ಮಾರಾಟ ಕಳೆದ ಒಂದು ವಾರದಿಂದ ನಿರಂತರವಾಗಿ ನಡೆಯುತ್ತಿದೆ. ತೆಲಗಿ ರಸ್ತೆಯಲ್ಲಿ ಜನರು ಲಸ್ಸಿ ಕುಡಿಯಲು ನಿಂತಿರುವುದು ಪ್ರತಿನಿತ್ಯ ಕಂಡುಬರುತ್ತದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ತಂಪು ಪಾನಿಯ ಅಂಗಡಿಗಳಲ್ಲಿ ಜನರು ಕಂಡುಬರುತ್ತಿದ್ದಾರೆ.ವಿಜಯಪುರ ರಸ್ತೆಯಲ್ಲಿ ಕಲ್ಲಂಗಡಿ ವ್ಯಾಪಾರ ಮಾಡುತ್ತಿರುವ ಸಂಗಮೇಶ ಸಂಗಮದ ಅವರನ್ನು ಮಾತನಾಡಿಸಿದಾಗ, ನಾನು ಸ್ವಂತ ವಾಹನ ಹೊಂದಿದ್ದೇನೆ. ವಿಜಯಪುರದಿಂದ ನಾನು ತರಕಾರಿ ಸೇರಿದಂತೆ ವಿವಿಧ ಮಾಲುಗಳನ್ನು ಪಟ್ಟಣಕ್ಕೆ ತರುತ್ತೇನೆ. ಒಂದು ಸಲ ನನಗೆ ಯಾವುದೇ ಮಾಲು ತರಲು ಬಾಡಿಗೆ ಸಿಗದೇ ಇದ್ದಾಗ ಒಂದು ಟನ್ ಕಲ್ಲಂಗಡಿ ತಂದು ನನ್ನ ತಾಯಿ, ಮನೆಯವರ ನೆರವಿನೊಂದಿಗೆ ಕಲ್ಲಂಗಡಿ ವ್ಯಾಪಾರ ಆರಂಭಿಸಿದೆ. ಉತ್ತಮವಾಗಿ ವ್ಯಾಪಾರವಾಗುತ್ತಿದೆ. ಇದರಿಂದ ಒಂದು ವಾರದಲ್ಲಿ ಎರಡು ಟನ್ ಕಲ್ಲಂಗಡಿ ಹಣ್ಣ ಮಾರಾಟ ಮಾಡಿದೆ. ಇಂದು ಬುಧವಾರ ಮತ್ತೆ ಒಂದು ಟನ್ ಕಲ್ಲಂಗಡಿ ಹಣ್ಣು ತಂದಿದ್ದೇನೆ. ಇದರಲ್ಲಿ ಜವಾರಿ ಕಲ್ಲಂಗಡಿ ಹಣ್ಣು ಇರುವುದು ವಿಶೇಷ. ಪ್ರತಿಯೊಂದಕ್ಕೆ ₹೫೦ರಂತೆ ಮಾರಾಟ ಮಾಡುತ್ತಿರುವುದಾಗಿ ಹೇಳಿದರು.
---ದಿನಕ್ಕೆ ₹೬ ಸಾವಿರ ವ್ಯಾಪಾರ
ತೆಲಗಿ ರಸ್ತೆಯಲ್ಲಿ ಲಸ್ಸಿ ಮಾರಾಟ ಮಾಡುವ ವ್ಯಾಪಾರಿ ಮಹಾಂತೇಶ ಅವರನ್ನು ಮಾತನಾಡಿಸಿದಾಗ, ನಾನು ಪ್ರತಿವರ್ಷ ಬೇಸಿಗೆ ದಿನದಲ್ಲಿ ಲಸ್ಸಿ ವ್ಯಾಪಾರ ಮಾಡುತ್ತಾ ಬಂದಿದ್ದೇನೆ. ಪ್ರತಿವರ್ಷವೂ ನನ್ನ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಹೆಚ್ಚು ಜನರು ನಾನು ತಯಾರು ಮಾಡುವ ಲಸ್ಸಿ ಇಷ್ಟಪಡುತ್ತಾರೆ. ದಿನಕ್ಕೆ ನಾನು ಅಂದಾಜು ₹೬ ಸಾವಿರ ವ್ಯಾಪಾರ ಮಾಡುತ್ತೇನೆ ಎಂದು ಹೇಳಿದರು.