ಕುಕನೂರು: ತಾಲೂಕಿನ ತಳಕಲ್ಲ ಗ್ರಾಮದ ಶ್ವೇತಾ ಸಾನಿ 625ಕ್ಕೆ 621 ಅಂಕ ಪಡೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ.
ಶ್ವೇತಾ ತಳಕಲ್ಲ ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಅಭ್ಯಾಸ ಮಾಡಿದ್ದಾಳೆ. ಶ್ವೇತಾ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ. ಜತೆಗೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಶ್ವೇತಾ ಕನ್ನಡ 125, ಇಂಗ್ಲೀಷ್ 100, ಹಿಂದಿ 98, ಗಣಿತ 98, ವಿಜ್ಞಾನ 100, ಸಮಾಜ ವಿಜ್ಞಾನ 100 ಅಂಕ ಪಡೆದಿದ್ದಾಳೆ. 625ಕ್ಕೆ 621 ಅಂಕ ಪಡೆದು 99.36% ಪ್ರತಿಶತ ಗಳಿಸಿದ್ದಾಳೆ. ಜಿಲ್ಲೆಗೆ ಮಾಧ್ಯಮ ಹೊರತು ಪಡಿಸಿದರೆ ದ್ವಿತೀಯ ಸ್ಥಾನದಲ್ಲಿರುವ ಶ್ವೇತಾ ಕನ್ನಡ ಮಾಧ್ಯಮ ಪರಿಗಣಿಸಿದರೆ ಜಿಲ್ಲೆಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನದಲ್ಲಿದ್ದಾಳೆ.ಬಡ ಕುಟುಂಬದ ವಿದ್ಯಾರ್ಥಿನಿ:
ಶ್ವೇತಾಳ ತಂದೆ ಗೋವಿಂದಪ್ಪ ಶಿವಪ್ಪ ಸಾನಿ ಗೌಂಡಿ ಕೆಲಸ ಮಾಡುತ್ತ ಬದುಕು ಸಾಗಿಸುತ್ತಿದ್ದಾರೆ. ಮಗಳು ಶ್ವೇತಾಗೆ ಉನ್ನತ ವ್ಯಾಸಂಗ ಕೊಡಿಸುವ ಹಂಬಲ ಹೊಂದಿದ್ದಾರೆ. ಶ್ವೇತಾಳ ತಾಯಿ ಅರುಣಾ ಸಾನಿ ಖಾಸಗಿ ಶಾಲೆ ಶಿಕ್ಷಕಿಯಾಗಿದ್ದು, ಮಗಳನ್ನು ಉನ್ನತ ವ್ಯಾಸಂಗ ಮಾಡಿಸಿ ಸರ್ಕಾರಿ ಹುದ್ದೆ ಕೊಡಿಸುವ ಹಂಬಲ ಹೊಂದಿದ್ದಾರೆ.ನನಗೆ ಹಿಂದಿ ವಿಷಯದಲ್ಲಿ ಇನ್ನೂ ಎರಡು ಅಂಕ ಬರುವ ವಿಶ್ವಾಸವಿದೆ. ಎರಡು ಅಂಕ ಕಡಿಮೆ ಕೊಟ್ಟಿದ್ದಾರೆ ಎಂಬ ಕೊರಗು ನನಗಿದೆ. ಇನ್ನೂ ಎರಡು ಅಂಕ ಹಿಂದಿ ವಿಷಯದಲ್ಲಿ ನನಗೆ ಬಂದರೆ ಆ ವಿಷಯ ಸಹ ನೂರಕ್ಕೆ ನೂರು ಆಗುತ್ತದೆ. ಮರು ಪರಿಶೀಲನೆಗೆ ಹಿಂದಿ ಭಾಷೆ ವಿಷಯ ಹಾಕಿಸಿ ಇನ್ನೂ ಎರಡು ಅಂಕ ಪಡೆಯುವೇ ಅನ್ನುತ್ತಾರೆ 99.36% ಪ್ರತಿಶತ ಗಳಿಸಿರುವ ಶ್ವೇತಾ.
ನಮ್ಮ ಮಗಳು ಮನೆಯ ಬಡತನ ಸ್ಥೀತಿ ಕಂಡು ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಹೊಂದಿದ್ದಳು. ನಿತ್ಯ ತಾನೇ ಅಭ್ಯಾಸದಲ್ಲಿ ತೊಡಗಿ ಉತ್ತಮ ಅಂಕ ಪಡೆದಿದ್ದಾಳೆ. ಆಕೆಗೆ ಉನ್ನತ ವ್ಯಾಸಂಗ ಮಾಡಿಸಲು ನಾವು ಸಿದ್ದರಿದ್ದೇವೆ. ಗೌಂಡಿ ಕೆಲಸ ಮಾಡುತ್ತಾ ಕುಟುಂಬ ಸಾಗಿಸುತ್ತಾ ಇದ್ದೇವೆ ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವ ಆಸೆ ಇದೆ ಎಂದು ಶ್ವೇತಾ ಪಾಲಕರಾದ ಗೋವಿಂದಪ್ಪ ಹಾಗೂ ಅರುಣಾ ತಿಳಿಸಿದ್ದಾರೆ.
ಶ್ವೇತಾಳ ಸತತ ಪ್ರಯತ್ನದಿಂದ ಈ ಸಾಧನೆ ಸಾಧ್ಯಯಾಗಿದೆ. ಶಾಲೆಯಲ್ಲೂ ಸಹ ಎಲ್ಲ ಶಿಕ್ಷಕ ವೃಂದದೊಂದಿಗೆ ಕಲಿಕೆಯಲ್ಲಿ ತಲ್ಲೀನರಾಗಿರುತ್ತಿದ್ದಳು. ಆಕೆಯ ಸಾಧನೆ ಹರ್ಷ ತಂದಿದೆ ಎಂದು ತಳಕಲ್ಲ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ವೀರಪ್ಪ ಸಜ್ಜನ ತಿಳಿಸಿದ್ದಾರೆ.