ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಐಮಂಗಲ ಗ್ರಾಮದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 26 ವಿದ್ಯಾರ್ಥಿನಿಯರು ವಾಂತಿ ಮತ್ತು ಭೇದಿಯಿಂದ ಅಸ್ವಸ್ಥಗೊಂಡಿದ್ದು ಕಲುಷಿತ ಆಹಾರ ಅಥವಾ ನೀರಿನ ಸೇವನೆಯಿಂದ ಈ ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.ವಸತಿ ಶಾಲೆಯಲ್ಲಿ 267 ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದು ಗುರುವಾರ ಮಧ್ಯಾಹ್ನ ಎಂದಿನoತೆ ಆಹಾರ ಸೇವನೆ ಮಾಡಿದ್ದಾರೆ. ರಾತ್ರಿ ಅನ್ನ, ಮುದ್ದೆ ಈರೆಕಾಯಿ ಮತ್ತು ತರಕಾರಿ ಸಾಂಬಾರು ಸೇವನೆ ಮಾಡಿದ್ದು ರಾತ್ರಿಯಿಂದಲೇ ಒಬ್ಬೊಬ್ಬರಾಗಿ ಅನಾರೋಗ್ಯಕ್ಕೆ ತುತ್ತಾಗತೊಡಗಿದ್ದಾರೆ. ಇದರ ಮಾಹಿತಿ ಪಡೆದ ಶಿಕ್ಷಕರು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಇಡ್ಲಿ ಸಾಂಬಾರು ಸೇವನೆಯ ನಂತರ ಅನೇಕ ವಿದ್ಯಾರ್ಥಿನಿಯರು ವಾಂತಿ, ಭೇದಿ, ಆಯಾಸಕ್ಕೆ ಒಳಗಾಗಿದ್ದಾರೆ.
ಈ ಘಟನೆಯಿಂದ ಎಚ್ಚೆತ್ತ ವಸತಿ ಶಾಲೆಯ ಶಿಕ್ಷಕರು ತಕ್ಷಣ ಸ್ಥಳೀಯ ಆರೋಗ್ಯ ಇಲಾಖೆಯ ನೆರವು ಪಡೆದು ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಶಿಬಿರ ತೆರೆದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದ ವಿದ್ಯಾರ್ಥಿನಿಯರನ್ನು ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ವಿದ್ಯಾರ್ಥಿಗಳು ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಕಲುಷಿತ ಆಹಾರ ಅಥವಾ ನೀರಿನ ಸೇವನೆಯಿಂದ ಹೀಗಾಗಿರಬಹುದು ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಿ.ವಿಜಯ್ ತಿಳಿಸಿದ್ದಾರೆ.
ಮಕ್ಕಳ ರಕ್ತ, ಮೂತ್ರ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಬಂದ ನಂತರವಷ್ಟೇ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಜಯಮ್ಮ ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ವಿಚಾರ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿ ಮಕ್ಕಳಿಗೆ ಧೈರ್ಯವಾಗಿರುವಂತೆ ಹೇಳಿದರು. ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಘಟನೆಯ ಸುದ್ದಿ ತಿಳಿದ ತಕ್ಷಣ ಉಪವಿಭಾಗಾಧಿಕಾರಿ ಕಾಂತರಾಜ್, ಹಿರಿಯೂರು ತಹಶೀಲ್ದಾರ್ ಎಂ.ಸಿದ್ದೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಉಪತಹಶೀಲ್ದಾರ್ ಹೆಚ್.ಸತೀಶ್‌ಕುಮಾರ್, ಕಂದಾಯ ನಿರೀಕ್ಷಕ ಎ.ಜಗದೀಶ್, ಗ್ರಾಮ ಆಡಳಿತಾಧಿಕಾರಿಗಳು, ವಸತಿ ಶಾಲೆಯ ಶಿಕ್ಷಕರುಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಪರಿಶೀಲಿಸಿದರು.