ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸುವ ಭಾವದಂತೆ ಸಿದ್ದಗಂಗೆ ಶ್ರೀಗಳು ಇದ್ದರು.
ಲಕ್ಷ್ಮೇಶ್ವರ: ಸಮೀಪದ ಹೂವಿನಶಿಗ್ಲಿ ವಿರಕ್ತಮಠದಲ್ಲಿ ಸಿದ್ದಗಂಗಾ ಲಿಂ. ಶಿವಕುಮಾರ ಸ್ವಾಮಿಗಳ 7ನೇ ಪುಣ್ಯಸ್ಮರಣೆಯನ್ನು ದಾಸೋಹ ದಿನವನ್ನಾಗಿ ಆಚರಿಸಲಾಯಿತು.
ಈ ವೇಳೆ ಚನ್ನವೀರ ಸ್ವಾಮಿಗಳು ಮಾತನಾಡಿ, ಸಿದ್ದಗಂಗಾ ಶ್ರೀಗಳು ನಡೆದಾಡುವ ದೇವರು. ಶಿಕ್ಷಣದ ರೂವಾರಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ಸಿದ್ಧಗಂಗೆ ಎಂಬ ಪವಿತ್ರ ಸ್ಥಳದಲ್ಲಿ ನೆಲೆ ನಿಂತು ಆಧುನಿಕ ಬಸವಣ್ಣರಾಗಿ ರೂಪುಗೊಂಡಿದ್ದು ಇತಿಹಾಸ. ಶರಣರು ಲೋಕದಂತೆ ಬಾರರು. ಇರರು. ಹೋಗರು, ಪುಣ್ಯದಂತೆ ಬಂದು ಜ್ಞಾನವನ್ನು ನೀಡಿ ಕೀರ್ತಿ ಭಾಜನರಾಗಿ ಪೂಜಿಸಲ್ಪಡುತ್ತಿದ್ದಾರೆ. ಶ್ರೀಗಳು ನಮ್ಮನ್ನು ಅಗಲಿದ ದಿನವನ್ನು ದಾಸೋಹ ದಿನವೆಂದು ಆಚರಿಸುತ್ತಿರುವುದು ಸೂಕ್ತವಾಗಿದೆ ಎಂದರು.ಈ ವೇಳೆ ಮಹಾದೇವ ಬಿಷ್ಟಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸುವ ಭಾವದಂತೆ ಸಿದ್ದಗಂಗೆ ಶ್ರೀಗಳು ಇದ್ದರು. ಹಾಗೆಯೇ ಹೂವಿನಶಿಗ್ಲಿಯ ಲಿಂ. ನಿರಂಜನ ಶ್ರೀಗಳು ಅವರ ಮಾರ್ಗದರ್ಶನದಂತೆ ಮಠ ಕಟ್ಟಿ ಗುರುಕುಲ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದರು. ಅದನ್ನೇ ಅತ್ಯುತ್ತಮ ರೀತಿಯಲ್ಲಿ ಇಂದಿನ ಚನ್ನವೀರ ಶ್ರೀಗಳು ಮುಂದುವರಿಸಿಕೊಂಡು ಉತ್ತಮ ರೀತಿಯಲ್ಲಿ ಸಾಗುತ್ತಿರುವುದು ನಮ್ಮ ಪುಣ್ಯ ಎಂದರು.
ಕಾರ್ಯಕ್ರಮದಲ್ಲಿ ಗುರುಕುಲ ಶಿಕ್ಷಣ ಸಂಸ್ಥೆಯ ಗುರು ಬಳಗ ಹಾಗೂ ವಿದ್ಯಾರ್ಥಿಗಳು ಶ್ರೀಮಠದ ವಟುಗಳು, ಹೂವಿನಶಿಗ್ಲಿ ಹಾಗೂ ಕಲಿವಾಳ ಗ್ರಾಮದ ಸದ್ಭಕ್ತರು ಶ್ರೀಮಠದ ಆರ್.ಎಸ್. ಪಾಟೀಲ, ನಿಂಗಪ್ಪ ಕಳ್ಳಿಮನಿ ಹಾಗೂ ಇತರರು ಭಾಗವಹಿಸಿದ್ದರು. ಡಾ. ಎನ್.ವಿ. ನಾಗರಹಳ್ಳಿ ಪ್ರಾರ್ಥನೆ ಸಲ್ಲಿಸಿದರು. ಶ್ರೀಗಳು ನೋಟ್‌ಬುಕ್, ಪೆನ್ನು ವಿತರಿಸಿದರು. ಪಿ.ಎಚ್. ಪಾಟೀಲ ನಿರೂಪಿಸಿ, ವಂದಿಸಿದರು.