ಕನ್ನಡಪ್ರಭ ವಾರ್ತೆ ತಾಳಿಕೋಟೆ

ಚುನಾವಣೆ ಆಯೋಗ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಪ್ರಕ್ರಿಯೆ ಪ್ರಾರಂಭವಾಗಿರುವುದು ಸಂತಸ ತಂದಿದೆ. ಈ ಪ್ರಕ್ರಿಯೆಯಲ್ಲಿ ಅರ್ಹ ಮತದಾರರಿಗೆ ಬೆಲೆ ದೊರೆಯಲಿದೆ ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗದೇವರು ಹೇಳಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪ್ರಾರಂಭಿಸುವ ಕುರಿತು ಮಂಗಳವಾರ ಶ್ರೀಮಠಕ್ಕೆ ಆಗಮಿಸಿದ ತಾಲೂಕು ತಹಶೀಲ್ದಾರ್‌ ಹಾಗೂ ಸಿಬ್ಬಂದಿಗೆ ಆಶೀರ್ವದಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗಿಯಾಗುವುದರೊಂದಿಗೆ ಹೆಸರು ನೋಂದಣಿಗೆ ಮುಂದಾಗಬೇಕು. ಭಾರತ ದೇಶದ ಸಂವಿಧಾನದಲ್ಲಿ ನಿರ್ಣಯಿಸಿದಂತೆ ಪ್ರಕ್ರಿಯೆಯನ್ನು ಚುನಾವಣೆ ಆಯೋಗ ಮಾಡಿದೆ ಎಂದ ಅವರು, ಜಾತಿ, ಮತ, ಪಂಥ, ಧರ್ಮ ಎಲ್ಲವನ್ನು ಹೊರತು ಪಡಿಸಿ ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಭಾಗಿಯಾಗಬೇಕು. ಇಲ್ಲವಾದಲ್ಲಿ ವೋಟರ್ ಐಡಿ ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ಮುಂದೆ ಪಜೀತಿಗೆ ಈಡಾಗಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ, ತಹಶೀಲ್ದಾರ್‌ ವಿನಯಾ ಹೂಗಾರ ಮಾತನಾಡಿ, ಎಸ್‌ಐಆರ್ ನಿಂದ ಅರ್ಹ ಮತದಾರರ ಪಟ್ಟಿ ಡಿಲೀಟ್ ಆಗುವುದಿಲ್ಲ. ಯಾರ ಹೆಸರನ್ನೂ ತಗೆಯುವುದಿಲ್ಲ. ಎಸ್‌ಐಆರ್ ಸಮಯದಲ್ಲಿ ನೀಡುವ ಪ್ರತಿ ನಮೂನೆ ತುಂಬಿ ಸಹಿ ಮಾಡಿ ಸಲ್ಲಿಸುವುದು ಕಡ್ಡಾಯವಾಗಿದೆ ಒಂದು ವೇಳೆ ಅರ್ಜಿ ತುಂಬಿ ಮರಳಿಸದಿದ್ದರೆ ಅವರ ಹೆಸರು ಡಿಲೀಟ್ ಆಗುತ್ತದೆ. ಮನೆ ಮನೆಗೆ ಬಿಎಲ್‌ಓ ಗಳಿಗೆ ಬೂತ್ ಮಟ್ಟದ ಅರ್ಜಿಗಳನ್ನು ತುಂಬಿ ಮರಳಿಸಬೇಕು ಮನೆಗಳನ್ನು ಬದಲಾವಣೆ ಮಾಡಿದ್ದಲ್ಲಿ ಮತ ನಿಮ್ಮ ಮತ ಎಲ್ಲಿದೆಯೋ ಅಲ್ಲಿಯ ಬಿಎಲ್‌ಓ ಗಳನ್ನು ಸಂಪರ್ಕಿಸಬೇಕೆಂದರು.

ಬಿಎಲ್‌ಓ ಗಳು ಮನೆಗೆ ಬಂದಾಗ ಅರ್ಜಿ ತುಂಬಿಕೊಟ್ಟರೆ ಸಾಕು ಯಾವ ದಾಖಲೆ ಸಲ್ಲಿಸಬೇಕಾಗಿಲ್ಲ ಎಸ್‌ಐಆರ್ ಪ್ರತಿ ೧೦ ವರ್ಷಗಳಿಗೊಮ್ಮೆ ನಡೆಯುವ ಚುನಾವಣಾ ಆಯೋಗದ ಸಂವಿಧಾನಿತ ಪ್ರಕ್ರಿಯೆ. ಈ ಹಿಂದೆ ೨೦೦೨ರಲ್ಲಿ ನಡೆದಿತ್ತು. ಅರ್ಹರನ್ನು ಮತಪಟ್ಟಿಯಲ್ಲಿ ಉಳಿಸುವುದು ಹಾಗೂ ಅನರ್ಹ ಮತಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡುವುದೇ ಇದರ ಉದ್ದೇಶವಾಗಿದೆ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದರು.


ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಹಿತಿಗಾಗಿ ಸಾರ್ವಜನಿಕರು ಚುನಾವಣೆ ಆಯೋಗದ ಅಧಿಕೃತ ಜಾಲತಾಣಗಳಲ್ಲಿ ಅಥವಾ ವಿಜಯಪುರ ಜಿಲ್ಲಾ ವೆಬ್ ಪೋರ್ಟಲ್‌ಗೆ ಭೇಟಿ ನೀಡಬಹುದು ಎಂದು ತಿಳಿಸಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕು ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿ ದೂರವಾಣಿ ಸಂಖ್ಯೆ ೦೮೩೫೬-೨೬೬೦೮೪ ಹಾಗೂ ಮೋ.೯೧೦೮೭೯೭೬೬೧ಗೆ ಕರೆ ಮಾಡಿ ಅಗತ್ಯ ಮಾಹಿತಿ ಮತ್ತು ಸಲಹೆ ಪಡೆದುಕೊಳ್ಳಬಹುದಾಗಿದೆ ಎಂದರು.

ಸುಪರ್‌ವೈಸರ್‌ ರಾಜುಸಿಂಗ್ ವಿಜಾಪೂರ ಮಾತನಾಡಿ ಎಸ್‌ಐಆರ್ ವೇಳೆ ಸತ್ತವರ ಮಾಹಿತಿಯನ್ನು ತುಂಬಿ ಕೊಡಬೇಡಿ ಒಂದುವೇಳೆ ಅಂತವರ ಹೆಸರನ್ನು ನೊಂದಾಯಿಸಲು ಮುಂದಾದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಮಯದಲ್ಲಿ ಖಾಸ್ಗತೇಶ್ವರಮಠದ ಉಸ್ತುವರಿಯಾದ ಮುರುಘೇಶ ವಿರಕ್ತಮಠ, ಕಂದಾಯ ನಿರೀಕ್ಷಕ ವಿನೋದ ಸಿಂದಗಿ, ಬಿಎಲ್‌ಓ ಗಳಾದ ಜೈಬೂನಬಿ ಮಕಾಂದಾರ, ವಿಜಯಲಕ್ಷ್ಮೀ ಲಾಹೋರಕರ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಬಸವರಾಜ ಕಟ್ಟಿಮನಿ, ಚುನಾವಣಾ ಸಹಾಯಕರಾದ ಮುನ್ನಾ ಅತ್ತಾರ, ಇತರರು ಉಪಸ್ಥಿತರಿದ್ದರು.