ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಳವಳ್ಳಿ ಶ್ರೀಮಂಟೇಸ್ವಾಮಿ ಮಠದಿಂದ ದೈವಾರ್ಷಿಕ ಪದ್ಧತಿ ಪ್ರಕಾರ ಕೆ.ಆರ್‌.ನಗರದ ಕಪ್ಪಡಿ ಕ್ಷೇತ್ರದಲ್ಲಿ ಫೆ.೧೫ರಿಂದ ಒಂದು ತಿಂಗಳವರೆಗೆ ನಡೆಯಲಿರುವ ಧರ್ಮಗುರು ಮಂಟೇಸ್ವಾಮಿ ಅವರ ಶಿಷ್ಯ ರಾಚಪ್ಪಾಜಿ ಜಾತ್ರಾ ಮಹೋತ್ಸವಕ್ಕೆ ಮಂಟೇಸ್ವಾಮಿ ರಾಚಪ್ಪಾಜಿ ಮಠಾಧೀಪತಿ ಎಂ.ಎಲ್ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಅವರು ತಾಲೂಕಿನ ಬಿಜಿಪುರ ಮಂಟೇಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಧರೆಗೆ ದೊಡ್ಡವರು ಮಂಟೇಸ್ವಾಮಿ ಕಂಡಾಯ, ರಾಚಪ್ಪಾಜಿ ಸತ್ತಿಗೆ ಸೇರಿದಂತೆ ಕೊಂಬು ಬಿಂಕು ಬಿರುದುಗಳೊಂದಿಗೆ ಕಪ್ಪಡಿ ಕ್ಷೇತ್ರಕ್ಕೆ ತೆರಳಿದರು.

ಮಳವಳ್ಳಿ ಮಂಟೇಸ್ವಾಮಿ ಬಸವಪ್ಪನ ಜೊತೆಗೂಡಿ ಮೂಲ ಮಂಟೇಸ್ವಾಮಿ ಗದ್ದುಗೆಗೆ ಪೂಜೆ ಸಲ್ಲಿಸಿದ ಮಠಾಧಿಪತಿಗಳು ಕಪ್ಪಡಿ ಕ್ಷೇತ್ರಕ್ಕೆ ಹೊರಡುತ್ತಿದ್ದಂತೆ ಸಾರ್ವಜನಿಕರು ಹೂವಿನ ಹಾರಹಾಕಿ ಶುಭ ಕೋರಿದರು. ಮಂಟೇಸ್ವಾಮಿ ಮಠದಿಂದ ಮುಟ್ಟನಹಳ್ಳಿ ಶ್ರೀ ದೊಡ್ಡಮ್ಮತಾಯಿ ದೇವಸ್ವಾನದವರೆಗೆ ಸಿದ್ದಲಿಂಗರಾಜೇ ಅರಸ್ ಅವರು ಸಹಸ್ರಾರು ಸಂಖ್ಯೆಯಲ್ಲಿ ಮೆರವಣಿಗೆ ಜೊತೆ ಹೆಜ್ಜೆ ಹಾಕಿದರು. ಶ್ರೀ ತೋಪಿನ ದೊಡ್ಡಮ್ಮ ತಾಯಿ ಗದ್ದುಗೆಗೆ ಪೂಜೆ ಸಲ್ಲಿಸಿ ಕಪ್ಪಡಿ ಕ್ಷೇತ್ರದ ಕಡೆಗೆ ಹೊರಟರು.

ಫೆ.೧೪ರಂದು ಮೈಸೂರಿನ ಸಿದ್ದಲಿಂಗರಾಜೇ ಅರಸ್ ಅವರ ನಿವಾಸದಲ್ಲಿ ಮಳವಳ್ಳಿ ಮಂಟೇಸ್ವಾಮಿ ಬಸವಪ್ಪನವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿದೆ. ಫೆ.೧೫ರಂದು ಕಪ್ಪಡಿ ಕ್ಷೇತ್ರಕ್ಕೆ ಕಂಡಾಯ, ಸತ್ತಿಗೆ, ಮಠಾಧೀಪತಿಗಳು ಬಿಂಕು ಬಿರುದುಗಳೊಂದಿಗೆ ಆಗಮಿಸುವರು. ರಾಚಪ್ಪಾಜಿ ಹಾಗೂ ಜನ್ನಾಜಮ್ಮ ಗದ್ದುಗೆಗೆ ಪೂಜೆ ಸಲ್ಲಿಸುವುದರ ಮೂಲಕ ಕಪ್ಪಡಿ ಜಾತ್ರೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಸಿದ್ದಲಿಂಗರಾಜೇ ಅರಸ್ ಮಾತನಾಡಿ, ಧರ್ಮಗುರು ಶ್ರೀ ಮಂಟೇಸ್ವಾಮಿ ಅವರು ನೀಲಗಾರರ ಪರಂಪರೆಯನ್ನು ಸ್ಥಾಪಿಸಿ, ಕರ್ನಾಟಕದಲ್ಲಿ ತಮ್ಮ ಅನುಯಾಯಿಗಳ ಪೈಕಿ ಸಕಾರಾತ್ಮಕ ಬದಲಾವಣೆಯನ್ನು ತಂದಂತಹ ಬಹುಮುಖ್ಯವಾದ ಸಾಮಾಜಿಕ ಚಳುವಳಿಗೆ ನಾಂದಿ ಹಾಡಿದರು. ಸಮಾನತೆ, ಜಾತ್ಯಾತೀತತೆ, ಒಗ್ಗಟ್ಟು, ಸಹಕಾರ, ಸಮಾಜ ಸೇವೆ, ಸಹಿಷ್ಣುತೆ, ಸರಳತೆ, ನಮ್ರತೆ ಹಾಗೂ ನೈತಿಕತೆಗಳು ನಮ್ಮ ಪರಂಪರೆಯ ಬಹಳ ಮುಖ್ಯವಾದ ಆದರ್ಶಗಳಾಗಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸಲಾಗುತ್ತಿದೆ ಎಂದರು.