ಸಿದ್ದಪ್ಪಾಜಿ ಕಂಡಾಯ ಉತ್ಸವ ಆಚರಣೆ

| Published : Dec 13 2024, 12:48 AM IST

ಸಾರಾಂಶ

ಕೊಳ್ಳೇಗಾಲ ಪಟ್ಟಣದ ಭೀಮನಗರ ಬಡಾವಣೆಯಲ್ಲಿ ಗುರುವಾರ ಕುರುಬನಕಟ್ಟೆ ಶ್ರೀಕ್ಷೇತ್ರದ ಘನನೀಲಿ ಸಿದ್ದಪ್ಪಾಜಿ ಕಂಡಾಯ ಉತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ಭೀಮನಗರ ಮತ್ತು ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯಲ್ಲಿ ಗುರುವಾರ ತಾಲೂಕಿನ ಕುರುಬನಕಟ್ಟೆ ಶ್ರೀಕ್ಷೇತ್ರದ ಘನನೀಲಿ ಸಿದ್ದಪ್ಪಾಜಿ ಕಂಡಾಯ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಭೀಮನಗರದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಶಬರಿಮಲೆಗೆ ತೆರಳುವ ಪೂಜೆಗೆ ಅಯ್ಯಪ್ಪಸ್ವಾಮಿ ಯಾತ್ರಿಕರು, ಬುಧವಾರ ಸಂಜೆ ಕುರುಬನಕಟ್ಟೆ ಶ್ರೀಕ್ಷೇತ್ರದ ಕಂಡಾಯಗಳನ್ನು ಬಡಾವಣೆಗೆ ಹೂ, ಹೊಂಬಾಳೆ ಪೂಜಾ ಕೈಂಕರ್ಯದೊಂದಿಗೆ ಬರಮಾಡಿಕೊಂಡು ಶ್ರೀ ಚೌಡಮ್ಮನಗುಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಂತೆಯೇ, ಮಧ್ಯಾಹ್ನ ಭೀಮನಗರದ ಶ್ರೀ ಚೌಡಮ್ಮನಗುಡಿ ಬೀದಿಯಿಂದ ಕಂಡಾಯಗಳ ಉತ್ಸವ ಆರಂಭಗೊಂಡಿತು. ಈ ವೇಳೆ ಅಯ್ಯಪ್ಪಸ್ವಾಮಿ ಭಕ್ತರು ಹಾಗೂ ನೀಲಗಾರರ ದಂಡು ಬಳಿಕ ಕಲ್ಲುಬಾವಿ ಬೀದಿ, ಪನ್ನಬೀದಿ, ಪಾಲ್‌ಚಾವಡಿ ಬೀದಿ, ಬಸವನಗುಡಿ ಬೀದಿ, ಸಿದ್ದಮಲ್ಲಯ್ಯಕೇರಿ, ಹೊಸ ಬೀದಿ ಮತ್ತು ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯಲ್ಲಿ ಸಂಜೆ 4 ಗಂಟೆವರೆಗೆ ತಮಟೆ ಮೇಳ ಮತ್ತು ಮಂಗಳವಾದ್ಯ ಸಮೇತ ಕಂಡಾಯಗಳ ಮೆರವಣಿಗೆ ನಡೆಸಿತು. ಈ ಸಂದರ್ಭ ಪ್ರತಿ ಮನೆಯಿಂದ ಕಂಡಾಯಗಳಿಗೆ ಹೂವು, ಹಣ್ಣು, ಕಾಯಿ ನೀಡಿ ನಿವಾಸಿಗಳು ಪೂಜೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರಾದ ಶಿವರಾಳ, ಸಿದ್ದರಾಜು, ಭಕ್ತಿ, ರಾಜು, ರಾಜೇಶ್, ರಾಜೇಂದ್ರ, ರವಿ, ಸುದೀಪ್(ಗುಂಡ), ಪ್ರಸಾದ್, ಪ್ರತಾಪ್, ಅಂಬಿ, ಚೇತನ್ ಸೇರಿದಂತೆ ಕುಟುಬನಕಟ್ಟೆ ತಮ್ಮಡಿ ಮಾಲಿಂಗ, ಭೀಮನಗರದ ಶ್ರೀ ಸಿದ್ದಪ್ಪಾಜಿ ದೇಗುಲದ ತಮ್ಮಡಿ ರಾಚಪ್ಪ, ಯಜಮಾನರಾದ ಚಿಕ್ಕಮಾಳಿಗೆ, ಸಿದ್ದಾರ್ಥ, ಕುಮಾರ್, ಶಿವಪ್ಪ, ಸನತ್ ಕುಮಾರ್, ಪಾಪಣ್ಣ, ನಾಗೇಶ್, ಲಿಂಗರಾಜು, ರಾಜಶೇಖರಮೂರ್ತಿ ಹಾಗೂ ಇತರ ಮುಖಂಡರು ಇದ್ದರು. ಇತ್ತ ಚೌಡಮ್ಮನಗುಡಿ ಆವರಣದಲ್ಲಿ ಏರ್ಪಡಿಸಿದ್ದ ಅನ್ನ ಸಂತರ್ಪಣೆಯಲ್ಲಿ ನೂರಾರು ಜನರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.