ಸಿದ್ದಾಪುರ ತಾಲೂಕು ಸಹಕಾರಿ ಸಂಘಕ್ಕೆ ₹5.55 ಕೋಟಿ ನಿಕ್ಕಿ ಲಾಭ

| Published : Jun 30 2025, 12:34 AM IST

ಸಿದ್ದಾಪುರ ತಾಲೂಕು ಸಹಕಾರಿ ಸಂಘಕ್ಕೆ ₹5.55 ಕೋಟಿ ನಿಕ್ಕಿ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

೭೮ ಸಾರ್ಥಕ ವಸಂತಗಳನ್ನು ಪೂರೈಸಿ ೭೯ನೇ ವರ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಸಿದ್ದಾಪುರ: ತಾಲೂಕಿನ ಅಡಿಕೆ ಬೆಳೆಗಾರರ ಹೆಮ್ಮೆಯ ಸಂಸ್ಥೆಯಾದ ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘವು ೭೮ ಸಾರ್ಥಕ ವಸಂತಗಳನ್ನು ಪೂರೈಸಿ ೭೯ನೇ ವರ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ೨೦೨೪-೨೫ನೇ ಸಾಲಿನಲ್ಲಿ ನಿಧಿಗಳನ್ನು ತೆಗೆದಿರಿಸಿದ ನಂತರ ಸಂಘವು ₹5.55 ಕೋಟಿ ನಿಕ್ಕಿ ಲಾಭ ಗಳಿಸಿದೆ. ಈ ಸಾಧನೆಗೆ ಸಂಘದ ಷೇರುದಾರ ಸದಸ್ಯರು, ನಿರ್ದೇಶಕರು, ಸಿಬ್ಬಂದಿ ಶ್ರಮ ಮತ್ತು ಸಹಕಾರದಿಂದ ಸಾಧ್ಯವಾಗಿದೆ ಎಂದು ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.

ಅವರು ಪಟ್ಟಣದ ಟಿಎಂಎಸ್ ಸಭಾ ಭವನದಲ್ಲಿ ನಡೆದ ೭೮ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಸಂಘವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವಲ್ಲಿ ಸಹಕರಿಸಿ ಎಂದರು.

ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಸಹಕಾರಿ ಕ್ಷೇತ್ರದಲ್ಲಿ ನಮ್ಮ ಜಿಲ್ಲೆ ಹೆಸರುವಾಸಿ. ಸಂಘಗಳ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿ ಹಾಗೂ ಷೇರು ಸದಸ್ಯರ ನಡುವಿನ ಸಂಪರ್ಕ ಉತ್ತಮವಾಗಿದ್ದರೆ ಅಭಿವೃದ್ಧಿಯಾಗುತ್ತದೆ. ಏನೇ ತೊಂದರೆ ತೊಡಕುಗಳಿದ್ದರೂ ಆಡಳಿತ ಸಮಿತಿ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಆಡಳಿತ ಮಂಡಳಿ ಕೂಡ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಡಕೆ ಬೆಳೆಗಾರರನ್ನು ಕಾಡುತ್ತಿರುವ ಎಲೆಚುಕ್ಕೆ ರೋಗದ ಅಧ್ಯಯನ ನಡೆಸಿ, ಅದಕ್ಕೆ ಸೂಕ್ತ ಔಷಧಿ ಕಂಡುಹಿಡಿಯಲು ರಾಜ್ಯ ಸರ್ಕಾರ ₹೫೦ ಕೋಟಿ ಮೀಸಲಿರಿಸಿದೆ. ಅಂತೆಯೇ ಅಗತ್ಯವಾದ ಕೃಷಿ ಉಪಕರಣ, ಗೊಬ್ಬರಗಳನ್ನು ಸಹಾಯಧನದಲ್ಲಿ ನೀಡಲಾಗುತ್ತಿದೆ ಎಂದರು.

ಕೆಲವೊಂದು ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಆರ್ಥಿಕ ಅಪರಾತಪರಾ ನಡೆದಿರುವ ಬಗ್ಗೆ ಕೇಳಿದ್ದೇನೆ. ಕೆಲವೊಂದು ಜನರಿಂದ ಸಂಘದ ಹೆಸರಿಗೆ ಮಸಿ ಬಳಿಯುವ ಕೆಲಸವಾಗುತ್ತಿದೆ. ಕಡಿಮೆ ಆದಾಯದ ರೈತರಿಗೆ ತೊಂದರೆಯಾಗುತ್ತಿದೆ. ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಬ್ರಿಟಿಷ್ ಆಡಳಿತದಂತೆ ವರ್ತಿಸುತ್ತಿದ್ದಾರೆ. ಯಾರು ಏನು ಕೇಳ್ತಾರೋ ಅದನ್ನು ಕೊಡುತ್ತಾರೆ. ಅವರಿಗೆ ಸಂಘಗಳ ಷೇರುದಾರರ ಕಷ್ಟ, ನೋವು ಗೊತ್ತಿಲ್ಲ. ನಂಬಿಕೆ, ವಿಶ್ವಾಸದ ಮೇಲೆ ನಡೆಯುವ ಸಹಕಾರಿ ವ್ಯವಸ್ಥೆಯಲ್ಲಿ ಮಾನವೀಯತೆ ಬೇಕು. ಏನಾದರೂ ವ್ಯತ್ಯಾಸವಿದ್ದರೆ ಕುಳಿತು, ಚರ್ಚಿಸಿ, ಸಂಘವನ್ನು ಸರಿದಾರಿಗೆ ತರುವ ಪ್ರಯತ್ನವಾಗಬೇಕು ಎಂದರು.

ಸಭೆಯಲ್ಲಿ ಸಂಘದ ಹಿರಿಯ ಸದಸ್ಯರನ್ನು, ತಾಲೂಕಿನಲ್ಲಿ ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಗೌರವ ಡಾಕ್ಟರೇಟ್ ಪಡೆದ ಜಿ.ಜಿ. ಹೆಗಡೆ ಬಾಳಗೋಡು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯ ಕಾರ್ಯಸೂಚಿಯನ್ನು ವ್ಯವಸ್ಥಾಪಕ ಸತೀಶ ಹೆಗಡೆ ನಿರ್ವಹಿಸಿದರು.

ಸಂಘದ ಉಪಾಧ್ಯಕ್ಷ ಎಂ.ಜಿ. ನಾಯ್ಕ ಹಾದ್ರಿಮನೆ ಸ್ವಾಗತಿಸಿದರು. ಸಂಘದ ನಿರ್ದೇಶಕ ಜಿ.ಎಂ. ಭಟ್ ಕಾಜಿನಮನೆ ವಂದಿಸಿದರು. ಸಂಘದ ಉಪ ವ್ಯವಸ್ಥಾಪಕ ಪ್ರಸನ್ನ ಭಟ್ಟ ಕೆರೆಹೊಂಡ, ಜಿ.ಜಿ. ಹೆಗಡೆ ಬಾಳಗೋಡು ನಿರೂಪಿಸಿದರು.

ಗುಂಪುಗಾರಿಕೆ ಬೇಡ- ಭೀಮಣ್ಣ ನಾಯ್ಕ:

ಸಹಕಾರಿ ಸಂಘಗಳ ಚುನಾವಣೆಯಲ್ಲಿ ಗುಂಪುಗಾರಿಕೆ ಬೇಡ. ಗುಂಪುಗಾರಿಕೆ ಮಾಡುವುದರಿಂದ ಸಂಘದ ಅಭಿವೃದ್ಧಿಗೆ ತೊಡಕಾಗುವದು ಮಾತ್ರವಲ್ಲ, ಸಂಘವನ್ನು ಕಟ್ಟಿದ ಹಿರಿಯರ ಆಶಯಕ್ಕೆ ಚ್ಯುತಿ ಮಾಡಿದಂತಾಗುತ್ತದೆ. ಚುನಾವಣೆಯಲ್ಲಿ ಒನ್ ಮ್ಯಾನ್ ಶೋ ಮಾಡಬೇಡಿ. ಸಾಧಕ- ಬಾಧಕಗಳನ್ನು ಅರ್ಥಮಾಡಿಕೊಂಡು, ಸಂಘದ ಬೆಳವಣಿಗೆಗೆ ತಕ್ಕುದಾದುದನ್ನು ಅರ್ಥಮಾಡಿಕೊಂಡು, ನಿಜವಾದ ಸಹಕಾರಿ ತತ್ವದಂತೆ ಚುನಾವಣೆಯಲ್ಲಿ ಪಾಲ್ಗೊಳ್ಳಿ. ಏನಾದರೂ ಲೋಪವಾದರೆ ಸಾವಿರಾರು ರೈತರಿಗೆ ಕಷ್ಟ ಎದುರಾಗುತ್ತದೆ. ಸಂಸ್ಥೆಯ ಭವಿಷ್ಯ ನಿರ್ಧರಿಸುವ ಜವಾಬ್ದಾರಿ ಸಂಘದ ಮತದಾರರ ಮೇಲಿದೆ.