ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಆವರಣದಲ್ಲಿ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ. ೩ರಂದು ಆಯೋಜಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಹೇಳಿದರು.
ಸಿದ್ದಾಪುರ: ತಾಲೂಕಿನ ಗ್ರಾಮೀಣ ಭಾಗದ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಆವರಣದಲ್ಲಿ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ. ೩ರಂದು ಆಯೋಜಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಆಯ್ಕೆಯಾಗಿದ್ದಾರೆ. ಸಮ್ಮೇಳನಕ್ಕೆ ಸರ್ಕಾರದ ಯಾವುದೇ ಅನುದಾನ ಬರುತ್ತಿಲ್ಲ. ಸಮ್ಮೇಳನಕ್ಕೆ ಅಂದಾಜು ₹೩ ಲಕ್ಷ ಅಗತ್ಯವಿದ್ದು, ಸಾರ್ವಜನಿಕರ, ಸಂಘ-ಸಂಸ್ಥೆಗಳ ಹಾಗೂ ದಾನಿಗಳ ಸಹಕಾರದಿಂದ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದರು.ಜ. ೩ರಂದು ಬೆಳಗ್ಗೆ ೮ಕ್ಕೆ ಧ್ವಜಾರೋಹಣ ಹಾಗೂ ೮.೩೦ಕ್ಕೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಬೆಳಗ್ಗೆ ೧೦ಕ್ಕೆ ಸಮ್ಮೇಳನವನ್ನು ಸಾಹಿತಿ ಡಾ. ಅಣ್ಣಪ್ಪ ಎನ್. ಮಳೀಮಠ ಶಿವಮೊಗ್ಗ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿ ಆಡುವರು. ಶಾಸಕ ಭೀಮಣ್ಣ ನಾಯ್ಕ ಹೊಸ ಪುಸ್ತಕ ಬಿಡುಗಡೆ ಮಾಡುವರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾತಃಸ್ಮರಣೀಯ ದ್ವಾರಗಳನ್ನು ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಪುಸ್ತಕ ಮಳಿಗೆ ಉದ್ಘಾಟಿಸುವರು. ಜಿ.ಜಿ. ಹೆಗಡೆ ಬಾಳಗೋಡ ಧ್ವಜ ಹಸ್ತಾಂತರಿಸುವರು. ಗಣ್ಯರು, ಸಾಹಿತಿಗಳು, ಜನಪ್ರತಿನಿಧಿಗಳು ಉಪಸ್ಥಿತರಿರುವರು.
ಮಧ್ಯಾಹ್ನ ೧೨.೩೦ರಿಂದ ಸಿದ್ದಾಪುರ ತಾಲೂಕು ಗ್ರಾಮೀಣ ಜೀವನ ಮತ್ತು ಪರಿಸರ ಹಾಗೂ ಸಿದ್ದಾಪುರ ತಾಲೂಕು ಸಮಕಾಲೀನ ಕನ್ನಡ ಸಾಹಿತ್ಯದ ಸಾಹಿತ್ಯ ಗೋಷ್ಠಿ ಹಾಗೂ ಕವಿಗೋಷ್ಠಿ, ಮಧ್ಯಾಹ್ನ ೪ರಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸಂಜೆ ೫.೩೦ರಿಂದ ಜಿಲ್ಲಾ ಕಸಾಪ ಬಿ.ಎನ್. ವಾಸರೆ ಅಧ್ಯಕ್ಷತೆಯಲ್ಲಿ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಸಾಹಿತಿ ಶ್ರೀಧರ ಬಳಗಾರ ಮಾತನಾಡುವರು. ಆನಂತರ ಸಂಜೆ ೭ರಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಪಿ. ಹೆಗಡೆ ಗೋಳಗೋಡ ಉದ್ಘಾಟಿಸುವರು. ದಿವಾಕರ ನಾಯ್ಕ ಹೆಮ್ಮನಬೈಲ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ವಾಜಗದ್ದೆ ದುರ್ಗಾವಿನಾಯಕ ದೇವಸ್ಥಾನದ ಮೊಕ್ತೇಸರ ಎಸ್.ಎಂ. ಹೆಗಡೆ ಪೆಟೇಸರ, ಯುವಕ ಸಂಘದ ಸದಸ್ಯ ಗಣೇಶ ಹೆಗಡೆ ಮತ್ತಿಗಾರ, ಸಿ.ಎಸ್. ಗೌಡರ್, ಪ್ರಶಾಂತ ಶೇಟ್, ಗಣೇಶ ಭಟ್ಟ, ಟಿಕೆಎಂ ಆಜಾದ್ ಇತರರಿದ್ದರು.