ಕನ್ನಡಪ್ರಭ ವಾರ್ತೆ ಮೈಸೂರು

ಸಿದ್ದರಾಮಯ್ಯ ರೆಡಿಯಾದ ಮನೆಗೆ ಎಂಟ್ರಿ ಕೊಟ್ಟವರು. ಹೀಗಾಗಿ, ಡಿ. ದೇವರಾಜ ಅರಸು ಅವರಷ್ಟು ಸವಾಲನ್ನು ಅವರು ಎದುರಿಸಬೇಕಾಗಲಿಲ್ಲ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಹೇಳಿದರು.

ಕಾಂಗ್ರೆಸ್ ಭವನದಲ್ಲಿ ನಗರ ಮತ್ತು ಜಿಲ್ಲಾ ಸಮಿತಿಯು ಮಂಗಳವಾರ ಆಯೋಜಿಸಿದ್ದ ಸಿದ್ದರಾಮಯ್ಯ 79ನೇ ಹುಟ್ಟುಹಬ್ಬ ಪ್ರಯುಕ್ತ ಪೊಲಿಟಿಕಲ್ ಮಾರ್ಚ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1969ರ ಕಾಂಗ್ರೆಸ್ ನ ಆಂತರಿಕ ಬೆಳವಣಿಗೆಯಿಂದ ಎರಡು ಭಾಗ ಆಯ್ತು. ಡಿ. ದೇವರಾಜು ಅರಸು ಅವರು ದಿಟ್ಟ ನಿರ್ಧಾರ ತೆಗೆದುಕೊಂಡರು. ಪರಿಣಾಮ ತುಂಬಾ ನೋವು ಅನುಭವಿಸಿದರು. ಆದರೆ, ಸಿದ್ದರಾಮಯ್ಯ ರೆಡಿಯಾಗಿದ್ದ ಮನೆಗೆ ಎಂಟ್ರಿ ಕೊಟ್ಟವರು. ಅವರಿಗೆ ಆ ಸನ್ನಿವೇಶಗಳು ಎದುರಾಗಲಿಲ್ಲ ಎಂದರು.

ಐದು ವರ್ಷ ಕಾಲ ರಾಜ್ಯವನ್ನು ಆಳಿದ ಸಿದ್ದರಾಮಯ್ಯ ನಂತರ ನಡೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನಭವಿಸಿದರು. ಕಾಂಗ್ರೆಸ್ ನಾಯಕರನ್ನು ಸೋಲಿಸಲು ಈ ಜನುಮದಲ್ಲಿ ವಿರೋಧ ಪಕ್ಷಗಳಿಗೆ ಆಗದು. ಅದು ಕಾಂಗ್ರೆಸ್ ಒಳಗೆ ಇರುವ ಕೆಲವರು ಕಾರಣ. 2018ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರದೇ ಇರಲು ಕಾಂಗ್ರೆಸ್ ನಾಯಕರೇ ಕಾರಣ ಹೊರತು ವಿರೋಧ ಪಕ್ಷದವರಲ್ಲ ಎಂದರು.

ಸಿದ್ದರಾಮಯ್ಯ ಪಕ್ಷಕ್ಕಾಗಿ ದುಡಿಯಬೇಕು


ಸಿದ್ದರಾಮಯ್ಯ ಅವರು ನನ್ನ ಕೆಲಸ ಮುಗಿಯಿತು ಎಂದು ಸುಮ್ಮನೆ ಇರದೇ, ವಿಶ್ರಾಂತಿ ಪಡೆಯದೇ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಕೆಪಿಎ ಕಾಯ್ದೆ ಜಾರಿಗೊಳಿಸಬೇಕು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಮೇಲಿಂದ ನೇತಾಡುವ ಕಾಂಗ್ರೆಸ್ ಆಗದೇ ತಳಮಟ್ಟದಿಂದ ಪಕ್ಷ‌ ಬೆಳೆಯಬೇಕು. ಪಕ್ಷದತ್ತ ಜನರನ್ಮು ಸೆಳೆಯುವ ಶಕ್ತಿ‌ ಸಿದ್ದರಾಮಯ್ಯ ಅವರಿಗೆ ಅವಕಾಶ ಇದ್ದು, ಅವರ ಬೆನ್ನಿಗೆ ನಾವೆಲ್ಲ ನಿಲ್ಲಬೇಕಿದೆ. ಸಿದ್ದರಾಮಯ್ಯ ಈಗ ಇನ್ನಷ್ಟು ಸಕ್ರಿಯ ಆಗಬೇಕು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಕಾಂಗ್ರೆಸ್ ಗೆ ಶಕ್ತಿ ತುಂಬಬೇಕು. ಕಾಂಗ್ರೆಸ್ ಹೈಕಮಾಂಡ್ ಅವರನ್ನು ನಂಬಿ ಮುಖ್ಯಮಂತ್ರಿ ಮಾಡಿದೆ. ಅವರು ಅದನ್ನು ಉಳಿಸಿಕೊಂಡು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸೇರಿ ಪಕ್ಷ ಕಟ್ಟಬೇಕು. 2028ರ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಆ ಶಕ್ತಿ ಸಿದ್ದರಾಮಯ್ಯ ಅವರಲ್ಲಿ ಇದೆ ಎಂದರು.

ಡಿ.ಕೆ. ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಡಿಕೆಶಿ ಅವರಲ್ಲಿ ಏನೆ ಲೋಪದೋಷಗಳು ಕಂಡು ಬಂದರೂ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಎಲ್ಲಾ ನಾಯಕರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತು, ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಅವರು ತಿಳಿಸಿದರು.

ಇದೇ ವೇಳೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ಮೈಸೂರು ಕಾಂಗ್ರೆಸ್ ತುರ್ತುನಿಧಿ ಲೋಕಾರ್ಪಣೆ ಮಾಡಿದರು. ಸಿದ್ದರಾಮಯ್ಯ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಭೋವಿ ನಿಗಮದ ಅಧ್ಯಕ್ಷ ರಾಮಪ್ಪ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಎಂ. ಶಿವಣ್ಣ, ಪ್ರಕಾಶ್, ಪುಷ್ಪಲತಾ ಚಿಕ್ಕಣ್ಣ, ಅಶೋಕ್, ಭಾಸ್ಕರ್, ರವಿ, ಗಿರೀಶ್ ಮೊದಲಾದವರು ಇದ್ದರು.

----

ಕೋಟ್....

ಸಿದ್ದರಾಮಯ್ಯ ಇಂದಿನ ಯುವಜನರಿಗೆ ಮಾದರಿ. ರಾಜಕೀಯ ನಾಯಕರಿಗೂ ಅವರು‌ ಮಾದರಿ. ವೈಚಾರಿಕವಾಗಿ ಎಂದೂ ರಾಜಿ ಆಗದ ವ್ಯಕ್ತಿ ಅವರಾಗಿದ್ದಾರೆ.

- ಯು.ಟಿ. ಖಾದರ್, ಆರೋಗ್ಯ ಸಚಿವರು

----

ಸಿದ್ದರಾಮಯ್ಯ ಬದುಕಿನಲ್ಲಿ ಕ್ರೂರವಾದ ಎರಡು ದಿನಗಳಲ್ಲಿ ಒಂದು ಅವರ ಮಗ ರಾಕೇಶ್ ತೀರಿಕೊಂಡಿದ್ದು, ಇನ್ನೊಂದು 2018ರ ಚುನಾವಣೆ ಬಳಿಕ ಜೆಡಿಎಸ್ ಗೆ ಬೆಂಬಲ ಘೋಷಿಸಿದ್ದು. ವಿಪಕ್ಷಗಳು 2018ರ ಚುನಾವಣೆ ಬಳಿಕ ಕಾಂಗ್ರೆಸ್ ಒಳಗೇ ಕೆಲವರನ್ನು ಎತ್ತಿಕಟ್ಟಿ‌ ಸಿದ್ದರಾಮಯ್ಯ ಅವರಿಗೆ ಕಾಟ‌ಕೊಟ್ಟರು. ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಸಿದ್ದರಾಮಯ್ಯ ಮತ್ತೆ ಅದೇ ಸ್ಥಾನ ಏರಿ ನಿಷ್ಠುರವಾಗಿ ಕಾಂಗ್ರೆಸ್ ಅನ್ನು ಮುನ್ನಡೆಸಿದರು.

- ಕೆ.ಆರ್. ರಮೇಶ್ ಕುಮಾರ್, ಮಾಜಿ ಸ್ಪೀಕರ್