ರಾಜ್ಯಕ್ಕೆ ಅನ್ಯಾಯ ಮಾಡಿದ್ದು ಸಿದ್ದು ಮತ್ತು ಡಾ। ಸಿಂಗ್‌: ಬೊಮ್ಮಾಯಿ

| Published : Feb 08 2024, 01:31 AM IST

ರಾಜ್ಯಕ್ಕೆ ಅನ್ಯಾಯ ಮಾಡಿದ್ದು ಸಿದ್ದು ಮತ್ತು ಡಾ। ಸಿಂಗ್‌: ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ರಾಜ್ಯ ಸರ್ಕಾರದ ಪ್ರತಿಭಟನೆ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗಿನ ‘ಮುಖಾಮುಖಿ’ಇದು.

ವಿಜಯ್ ಮಲಗಿಹಾಳ

ಕನ್ನಡಪ್ರಭ ವಾರ್ತೆ ಬೆಂಗಳೂರು

ನನ್ನ ತೆರಿಗೆ, ನನ್ನ ಹಕ್ಕು ಅಭಿಯಾನ ಆರಂಭಿಸಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಷ್ಟ್ರದ ಗಮನ ಸೆಳೆದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಹಾಗೂ ರಾಜ್ಯ ಬಿಜೆಪಿಯ ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ವಿರುದ್ಧವೂ ಹರಿಹಾಯ್ದಿದ್ದಾರೆ. ಖುದ್ದು ಆರ್ಥಿಕ ವಿಷಯದಲ್ಲಿ ಪರಿಣತರಾಗಿರುವ ಬೊಮ್ಮಾಯಿ ಅವರು ಯಡಿಯೂರಪ್ಪ ಅವರು ಪ್ರತಿ ಬಾರಿ ಬಜೆಟ್ ಮಂಡಿಸುವ ಪ್ರಕ್ರಿಯೆಯಲ್ಲೂ ಅದರ ಹಿಂದಿನ ಶಕ್ತಿಯಾಗಿ ಕೆಲಸ ಮಾಡಿದ್ದರು. ಬಳಿಕ ತಾವೂ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದ್ದರು. ಇದೀಗ ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...*ಈಗ ಏಕಾಏಕಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದಿರುವುದು ಯಾಕೆ?-ಹಿಂದಿನ ಯುಪಿಎ ಸರ್ಕಾರದ ಅವಧಿಗಿಂತ ಹೆಚ್ಚು ಅನುದಾನ ಮೋದಿ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದರೂ ಪ್ರತಿಭಟನೆಗೆ ಇಳಿದಿರುವುದು ರಾಜಕೀಯವಲ್ಲದೇ ಮತ್ತೇನೂ ಅಲ್ಲ. ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ, ರಾಜ್ಯದ ಜನರ ದೃಷ್ಟಿಯಲ್ಲಿ ಪ್ರಧಾನಿ ಮೋದಿ ಅವರನ್ನು ವಿಲನ್ ರೀತಿ ಬಿಂಬಿಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಸತ್ಯವನ್ನು ಮರೆಮಾಚಿ ಸುಳ್ಳಿನ ಆಧಾರದ ಮೇಲೆ ಹೀಗೆ ಮಾಡುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ಬರಗಾಲ ಬಿದ್ದಿದೆ. ಬರ ಪರಿಹಾರ ನೀಡಿಲ್ಲ. ಯಾವ ನೈತಿಕತೆ ಇಟ್ಟುಕೊಂಡು ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ‌? ನಾಚಿಕೆಯಾಗಬೇಕು.*ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಈಗ ಉದ್ಭವಿಸಿರುವ ಬೆಳವಣಿಗೆಗೆ ಹಣಕಾಸು ಆಯೋಗವೇ ಕಾರಣವಲ್ಲವೇ? -ತೆರಿಗೆ ಸಂಗ್ರಹ ಮತ್ತು ಹಂಚಿಕೆ ವಿಚಾರದಲ್ಲಿ ಐದು ವರ್ಷಗಳಿಗೊಮ್ಮೆ ಸಂವಿಧಾನಬದ್ಧವಾಗಿ ಹಣಕಾಸಿನ ಆಯೋಗ ರಚನೆಯಾಗುತ್ತದೆ. ಇದಕ್ಕೂ ಮತ್ತು ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ. ಅದು ಒಂದು ಸ್ವಾಯತ್ತ ಸಂಸ್ಥೆ. ಕಾಲಕಾಲಕ್ಕೆ ಕೆಲವು ಮಾನದಂಡಗಳನ್ನು ಇಟ್ಟುಕೊಂಡು ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಐದು ವರ್ಷಗಳಿಗೊಮ್ಮೆ ಅನುದಾನ ಹಂಚಿಕೆ ನಿರ್ಧಾರ ಮಾಡುವ ಎರಡು ವರ್ಷಗಳಿಗೂ ಮೊದಲೇ ಎಲ್ಲ ರಾಜ್ಯಗಳಿಗೆ ತೆರಳಿ ಮಾಹಿತಿ ಕಲೆಹಾಕುತ್ತದೆ. ಬಡತನ, ಜಸಂಖ್ಯೆ ತಲಾ ಆದಾಯ ಎಲ್ಲವನ್ನು ಪರಿಗಣನೆ ಮಾಡುತ್ತದೆ. ಈಗಾಗಲೇ ಎರಡು ವರ್ಷಗಳ ಮುಂಚೆಯೇ 16ನೇ ಹಣಕಾಸಿನ ಆಯೋಗ ತನ್ನ ಕೆಲಸ ಆರಂಭಿಸಿದೆ.*15ನೇ ಹಣಕಾಸು ಆಯೋಗದ ಅನುಸಾರ ಕೇಂದ್ರ ತೆರಿಗೆಯಲ್ಲಿ ಕರ್ನಾಟಕದ ಪಾಲು ಶೇ.4.71ರಿಂದ ಶೇ.3.64ಕ್ಕೆ ಇಳಿಕೆಯಾಗಿದ್ದು ಸುಳ್ಳೇ?-ಇಳಿಕೆಯಾಗಿರುವುದಕ್ಕೆ ಮಾನದಂಡಗಳು ಬದಲಾಗಿರುವುದು ಕೂಡ ಕಾರಣವಾಗುತ್ತದೆ. ಆಗ ತನ್ನ ವರದಿ ರಚಿಸುವ ವೇಳೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು. ಆದರೆ, ಅವರು ಆಯೋಗವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ರಾಜ್ಯದ ವಾಸ್ತವ ಸ್ಥಿತಿಗತಿಯನ್ನು ಸರಿಯಾಗಿ ಮುಂದಿಡಲಿಲ್ಲ.*ಅಂದರೆ, ಇದಕ್ಕೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಣೆ ಹೊರಬೇಕೆ?

-ಹೌದು. ಇ‍ವತ್ತು ತೆರಿಗೆ ಪಾಲು ಕಡಮೆಯಾಗಿದ್ದರೆ ಅದಕ್ಕೆ ಸಿದ್ದರಾಮಯ್ಯ ಅವರೇ ಹೊಣೆ ಹೊರಬೇಕು. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಈಗ ಕೇಂದ್ರ ಸರ್ಕಾರದ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ಸ್ವತಃ ಹಣಕಾಸು ವಿಷಯದಲ್ಲಿ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರಿಗೆ ರಾಜ್ಯದ ಬಗ್ಗೆ ಕಾಳಜಿ ಇದ್ದಿದ್ದರೆ ಆಗ ಆಯೋಗದ ಮುಂದೆ ಎಲ್ಲ ಅಂಕಿ-ಅಂಶಗಳನ್ನೂ ಮಂಡಿಸಬಹುದಿತ್ತು. ರಾಜ್ಯದ ವಾಸ್ತವ ಆರ್ಥಿಕ ಸ್ಥಿತಿಯನ್ನು ಬಿಂಬಿಸಲು ವಿಫಲವಾಗಿ ಹಣಕಾಸಿನ ಆಯೋಗಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸೋತಿದ್ದರಿಂದ ರಾಜ್ಯಕ್ಕೆ ಹಿನ್ನಡೆಯಾಗಿದೆ.*ಹಣಕಾಸು ಆಯೋಗ ತನ್ನ ವರದಿ ಕೊಟ್ಟ ಬಳಿಕವೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅದನ್ನು ಬದಲಾವಣೆ ಮಾಡಲು ಸಲಹೆ ನೀಡಬಹುದಿತ್ತು ಎಂಬ ಮಾತನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಹೇಳಿದ್ದಾರಲ್ಲ?-ಆಯೋಗ ಒಂದು ಬಾರಿ ತನ್ನ ವರದಿ ಕೊಟ್ಟ ಬಳಿಕ ಅದರಲ್ಲಿ ಬದಲಾವಣೆ ಮಾಡಲು ಅವಕಾಶವಿಲ್ಲ. ಹೀಗೆ ಎಲ್ಲ ರಾಜ್ಯಗಳೂ ಕೇಳತೊಡಗಿದರೆ ಆ ವರದಿಯ ಮಹತ್ವವೇ ಉಳಿಯುವುದಿಲ್ಲ. ಜತೆಗೆ ಕಾರ್ಯಗತಗೊಳಿಸುವುದೂ ಸಾಧ್ಯವಿಲ್ಲ. ಇದು ಕಾಮನ್ ಸೆನ್ಸ್‌.*ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕಡಮೆ ಹಣ ನೀಡಿದೆ ಎಂದು ಮುಖ್ಯಮಂತ್ರಿಗಳು ಪದೇ ಪದೇ ಆಪಾದಿಸುತ್ತಿದ್ದಾರಲ್ಲ?-ನೋಡಿ, 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ 1,16,828 ಕೋಟಿ ರು. ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ಅವಧಿ 2026ರವರೆಗೆ ಇದ್ದು, ಒಟ್ಟು 2.5 ಲಕ್ಷ ಕೋಟಿ ರು.ಗಳಿಗೂ ಮೀರಿ ತೆರಿಗೆಯ ಹಂಚಿಕೆ ಬರಲಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ 14ನೇ ಹಣಕಾಸಿನ ಶಿಫಾರಸ್ಸಿಗಿಂತ 1,51,309 ಕೋಟಿ ರು.ಗಳಿಗೂ ಹೆಚ್ಚು.

*ಕೇಂದ್ರ ವಿಧಿಸುವ ಸೆಸ್‌ ಮತ್ತು ಸರ್‌ಚಾರ್ಜ್‌ನಲ್ಲಿ ರಾಜ್ಯಗಳಿಗೂ ಪಾಲು ನೀಡಬೇಕು ಎಂಬ ವಾದವನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ?-ಸೆಸ್ ಮತ್ತು ಸರ್‌ಚಾರ್ಜ್ ಮೀಸಲಿಟ್ಟಿದ್ದು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ. ಇಷ್ಟು ದಿನ ಇದರ ಬಗ್ಗೆ ಮೌನವಿದ್ದು ಈಗ ರಾಜಕಾರಣಕ್ಕಾಗಿ ಪ್ರಸ್ತಾಪ ಮಾಡುತ್ತಿದ್ದಾರೆ. ಜಿಎಸ್‌ಟಿಯಲ್ಲಿರುವ ಸೆಸ್ ಮತ್ತು ಸರ್‌ಚಾರ್ಜ್ 2026ಕ್ಕೆ ಮುಗಿಯಲಿದ್ದು, ಆಗ ಅದು ತೆರಿಗೆಯಾಗಿ ಪರಿವರ್ತನೆಯಾಗಲಿದೆ. ಆ ವೇಳೆ ರಾಜ್ಯದ ಪಾಲು ಶೇ.50ರಷ್ಟು ಸಿಗಲಿದೆ. ಇದರಲ್ಲಿಯೂ ರಾಜಕಾರಣ ಮಾಡುವುದು ಮೂರ್ಖತನ.*ಈಗಿನ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಹೋಲಿಸಿದರೆ ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಹೆಚ್ಚು ಅನುದಾನ ಹರಿದು ಬಂದಿತ್ತೆ?-ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ 82 ಸಾವಿರ ಕೋಟಿ ರು. ಮಾತ್ರ ರಾಜ್ಯಕ್ಕೆ ಬಂದಿದೆ. ಈಗಿನ ಎನ್‌ಡಿಎ ಸರ್ಕಾರದಲ್ಲಿ 2.82 ಲಕ್ಷ ಕೋಟಿ ರು. ಲಭಿಸಿದೆ. ಅಂದರೆ, ಎರಡು ಲಕ್ಷ ಕೋಟಿ ರು. ಹೆಚ್ಚು ಬಂದಂತಾಯಿತು. ರಾಜ್ಯಕ್ಕೆ ಅನ್ಯಾಯ ಮಾಡಿದವರು ಮನಮೋಹನ್ ಸಿಂಗ್ ಮತ್ತು ಸಿದ್ದರಾಮಯ್ಯ. ಮೊದಲು ರಾಜ್ಯಗಳಿಗೆ ಶೇ.32ರಷ್ಟು ಅನುದಾನ ಬರುತ್ತಿತ್ತು. ಮೋದಿ ಅವರು ಅದನ್ನು ಶೇ.42ಕ್ಕೆ ಹೆಚ್ಚಿಸಿದರು.*ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಹರಿದು ಬರುವ ಅನುದಾನವೊಂದೇ ಅಭಿವೃದ್ಧಿಯ ಮಾನದಂಡವಾಗುತ್ತದೆಯೇ?-ಮೋದಿ ಸರ್ಕಾರದಿಂದ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ರಾಜ್ಯದ 60 ಲಕ್ಷ ಜನರು ಆರೋಗ್ಯ ಸೌಲಭ್ಯ ಪಡೆದಿದ್ದಾರೆ. ಮುದ್ರಾ ಯೋಜನೆ ಅಡಿಯಲ್ಲಿ 60 ಲಕ್ಷ ಯುವಕರಿಗೆ ಬ್ಯಾಂಕ್ ಸಾಲ ನೀಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಗಳನ್ನು ಮೋದಿ ಸರ್ಕಾರ ನೀಡಿದೆ. ಯುಪಿಎ ‌ಅವಧಿಯಲ್ಲಿ 85 ಕಿ.ಮೀ. ರೈಲ್ವೆ ವಿದ್ಯುದೀಕರಣ ಆಗಿತ್ತು. ನಮ್ಮ ಅವಧಿಯಲ್ಲಿ 3500 ಕಿ.ಮೀ.ನಷ್ಟು ರೈಲ್ವೆ ವಿದ್ಯುದೀಕರಣ ಆಗಿದೆ. ಮುಖ್ಯವಾಗಿ ಕಾಂಗ್ರೆಸ್ಸಿನ ಒಟ್ಟು 65 ವರ್ಷಗಳ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ 6500 ಕೀ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಲಾಗಿತ್ತು. ಮೋದಿ ಸರ್ಕಾರದ ಅವಧಿಯಲ್ಲಿ 13,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗಿದೆ. ಇದು ನಿಜವಾದ ಅಭಿವೃದ್ಧಿ.*ಕೇಂದ್ರ ಸರ್ಕಾರದ ಅನ್ಯಾಯದಿಂದ ಕರ್ನಾಟಕಕ್ಕೆ 2017-18ರಿಂದ ಒಟ್ಟು 1.87 ಲಕ್ಷ ಕೋಟಿ ರು. ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಹೇಳುತ್ತಿದೆಯಲ್ಲ?-ಇದು ಶುದ್ಧ ಸುಳ್ಳು. ತಪ್ಪು ಮಾಹಿತಿ ನೀಡಿದ್ದಾರೆ.*ಕೇಂದ್ರ ಸರ್ಕಾರ ತಾನು ನೀಡಿದ ವಾಗ್ದಾನದಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವನ್ನು ಇದುವರೆಗೆ ನೀಡಿಲ್ಲವಲ್ಲ?-ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ ಬಜೆಟ್‌ನಲ್ಲಿ ಮೀಸಲಿಟ್ಟಿರುವ 5,300 ಕೋಟಿ ರು.ಗಳನ್ನು ಪಡೆಯಲು ರಾಜ್ಯ ಸರ್ಕಾರದಿಂದ ಸೂಕ್ತ ರೀತಿಯಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಆದರೆ, ಇದುವರೆಗೆ ಈ ಕೆಲಸ ಆಗಿಲ್ಲ.*ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಾಗಿರುವ ಹಣ ಹೊಂದಿಸುವುದು ಕಷ್ಟವಾಗಿದ್ದರಿಂದ ಕೇಂದ್ರ ಸರ್ಕಾರದತ್ತ ಬೆರಳು ತೋರುತ್ತಿದೆಯಂತೆ?-ಸಮಸ್ಯೆ ಇಲ್ಲೇ ಇದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ವಿಫಲವಾಗಿರುವ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಆರ್ಥಿಕವಾಗಿ ತ್ರಿಶಂಕು ಸ್ಥಿತಿಯಲ್ಲಿ ಇಟ್ಟು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಮೊದಲು ತಮ್ಮ ಸರ್ಕಾರದ ಆರ್ಥಿಕ ದುಸ್ಥಿತಿಯನ್ನು ಒಪ್ಪಿಕೊಳ್ಳಬೇಕು. ಎಲ್ಲವೂ ಸರಿಯಿದ್ದರೆ ಎಲ್ಲ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಬೇಕು.*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಆರ್ಥಿಕ ಪ್ರಗತಿಯೇ ಸರಿಯಿಲ್ಲ ಎನ್ನುತ್ತಾರಲ್ಲ?-ಈಗಿನ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸರಾಸರಿ ಶೇ.6.01ರಷ್ಟು ಹಣದುಬ್ಬರ ಇದ್ದರೆ, ಹಿಂದಿನ ಯುಪಿಎ ಸರ್ಕಾರದ ಸಂದರ್ಭದಲ್ಲಿ ಶೇ.12ರಷ್ಟಿತ್ತು. ಅದೇ ರೀತಿ ದೇಶ ಮತ್ತು ರಾಜ್ಯದಲ್ಲಿ ಸರಾಸರಿ ಆದಾಯ ಹೆಚ್ಚಾಗಿದೆ. ಆರ್ಥಿಕ ಪ್ರಗತಿ ಹೆಚ್ಚಾಗಿದೆ. ವಿದೇಶಿ ಬಂಡವಾಳ ಅತಿ ಹೆಚ್ಚು ಹರಿದು ಬರುತ್ತಿದೆ. ಹಲವಾರು ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ದೀನ ದಲಿತರಿಗೆ‌ ಜನಪರ ಯೋಜನೆಗಳನ್ನು ಕೇಂದ್ರ ಸರ್ಕಾರ ನಿರಂತರ ಕೊಡುತ್ತಾ ಬಂದಿದೆ. ಆದರೂ ಸಿದ್ದರಾಮಯ್ಯ ಅವರು ಮೋದಿ ಸರ್ಕಾರದ ಆರ್ಥಿಕ ಪ್ರಗತಿ ಸರಿಯಿಲ್ಲ ಎನ್ನುತ್ತಾರೆ. ಅರೆಬರೆ ಗ್ಯಾರಂಟಿಗಳನ್ನು ಕೊಟ್ಟಿರುವ ಸಿದ್ದರಾಮಯ್ಯ ಒಂದು ಕಡೆಯಾದರೆ, ಎಲ್ಲಿಯೂ ವಿಫಲವಾಗದಿರುವ ಮೋದಿ ಗ್ಯಾರಂಟಿ ಇನ್ನೊಂದು ಕಡೆ. ಇದೇ ಸತ್ಯ.*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ತಿಂಗಳಲ್ಲಿ ಮಂಡಿಸುವ ಬಜೆಟ್‌ ಸ್ವರೂಪ ಹೇಗಿರಬಹುದು?-ಸಿದ್ದರಾಮಯ್ಯ ಅವರು 14 ಬಾರಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿರುವ ಖ್ಯಾತಿ‌ ಇದ್ದರೂ ಕೂಡ ಗ್ಯಾರಂಟಿ ಸುಳಿಯಲ್ಲಿ ಅವರು ಸಿಕ್ಕು ಆರ್ಥಿಕತೆಯ ಸಬಲೀಕರಣ ಮಾಡುವ ಎಲ್ಲ ಅವಕಾಶಗಳನ್ನು ಗಾಳಿಗೆ ತೂರಿದ್ದಾರೆ. ಇದರಿಂದಾಗಿ ಆರ್ಥಿಕ ಸಂಕಷ್ಟ, ಅಭಿವೃದ್ಧಿಯ ಶೂನ್ಯತೆ ಮತ್ತು ಆರ್ಥಿಕ ನಿರ್ವಹಣೆಯ ಪಾರದರ್ಶಕದ ಕೊರತೆಯಲ್ಲದೇ, ಖಜಾನೆ ನಿರ್ವಹಣೆಯಲ್ಲಿ ವಿಫಲವಾಗಿದೆ. ಸರ್ಕಾರ ಕೇವಲ ಏಳು ತಿಂಗಳಲ್ಲಿ ಖಜಾನೆ ಖಾಲಿ ಮಾಡಿರುವುದು ರಾಜ್ಯದ ಆರ್ಥಿಕತೆಗೆ ಮುಂದಿನ ಹಲವು ವರ್ಷಗಳಲ್ಲಿ ಇದರ ದುಷ್ಪರಿಣಾಮ ಉಂಟಾಗಲಿದೆ.