ಸಾರಾಂಶ
- ಪಾಲಿಕೆಗೆ ₹200 ಕೋಟಿ, ದಾವಣಗೆರೆ-ಜಗಳೂರು ಆಸ್ಪತ್ರೆಗಳು, ವೃತ್ತಿ ರಂಗಭೂಮಿ ರಂಗಾಯಣ ಅಭಿವೃದ್ಧಿಗೆ ಅನುದಾನ ಘೋಷಣೆ
- ಕೃಷಿ, ಕೈಗಾರಿಕೆ, ಉದ್ಯೋಗ, ಪ್ರವಾಸೋದ್ಯಮ ಬಗ್ಗೆ ಚಕಾರ ಎತ್ತಿಲ್ಲ । ಪಟೇಲರ ಕನಸಿನ ಜಿಲ್ಲೆ ಮತ್ತೆ ಕಡೆಗಣಿಸಿದ ಸಿದ್ದರಾಮಯ್ಯ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಪಾಲಿಕೆಗೆ ₹200 ಕೋಟಿ ವಿಶೇಷ ಅನುದಾನ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳ ಸ್ಥಾಪನೆ, ಕೊಂಡಜ್ಜಿಯ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಮೂಲಸೌಕರ್ಯ, ಜಗಳೂರು ತಾಲೂಕಿನ ಕೆರೆಗಳನ್ನು ತುಂಬಿಸುವ, ಸೂರಗೊಂಡನಕೊಪ್ಪದಲ್ಲಿ ವಸತಿ ಶಾಲೆ, ಬಂಜಾರ ಕಸೂತಿ ತರಬೇತಿ ಕೇಂದ್ರ,..ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯಲ್ಲಿ ದಾಖಲೆಯ 16ನೇ ಬಜೆಟ್ ಶುಕ್ರವಾರ ಮಂಡಿಸಿದ್ದಾರೆ. ಈ ಬಾರಿ ದಾವಣಗೆರೆ ಜಿಲ್ಲೆಯನ್ನು ಕಡೆಗಣಿಸದೇ ಅಷ್ಟೋ ಇಷ್ಟೋ ಸ್ಪಂದಿಸಿದ್ದಾರೆ. ಪ್ರಮುಖ ಬೇಡಿಕೆ, ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ. ಕೆಲವೊಂದಷ್ಟಾದರೂ ಲಾಭ ಸಿಕ್ಕಿದೆ ಅಂತಾ ಅಂದುಕೊಂಡು ಸುಮ್ಮನಾಗುವ ಪರಿಸ್ಥಿತಿಯಲ್ಲಿ ದಾವಣಗೆರೆ ಜಿಲ್ಲೆಯ ಜನರಿದ್ದಾರೆ. ದಾವಣಗೆರೆ ಪಾಲಿಕೆಗೆ ವಿಶೇಷ ಅನುದಾನ, ಇ-ಆಫೀಸ್ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕಲೆ, ಸುರಕ್ಷತೆ ಹೀಗೆ ಜಿಲ್ಲೆಗೆ ಕೊಟ್ಟಿದ್ದು ಯಾವುದನ್ನೂ ಅಲ್ಲಗೆಳೆಯುವಂತಿಲ್ಲ. ಆದರೆ, ಕೊಡಬೇಕಾಗಿದ್ದ ನಿರೀಕ್ಷೆಗಳ ಮೂಟೆ ಮಾತ್ರ ಇಂದಿಗೂ ಕರಗಿಲ್ಲ ಎಂಬುದು ಅಷ್ಟೇ ಸತ್ಯ.
ಜಿಲ್ಲೆಗೆ ದಕ್ಕಿದ್ದೇನು?:ಸಿಎಂ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್‌ನಲ್ಲಿ ದಾವಣಗೆರೆ ಜಿಲ್ಲಾಸ್ಪತ್ರೆ, ಜಗಳೂರು ತಾಲೂಕು ಆಸ್ಪತ್ರೆ ಸೇರಿದಂತೆ ಇತರೆ ಜಿಲ್ಲೆಗಳ 8 ತಾಲೂಕು ಆಸ್ಪತ್ರೆಗಳನ್ನು ₹650 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲು ಅನುದಾನ ಮೀಸಲಿಟ್ಟಿದ್ದಾರೆ. ಬಂಜಾರ ಸಮುದಾಯದ ಪುಣ್ಯಕ್ಷೇತ್ರವಾದ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಒಂದು ವಸತಿ ಶಾಲೆಯನ್ನು ಕ್ರೈಸ್ಟ್‌ನಿಂದ ಸ್ಥಾಪಿಸುವುದಾಗಿ ಸಿಎಂ ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾರೆ. ಲಂಬಾಣಿ ಜನಾಂಗದ ಕಸೂತಿ ತರಬೇತಿ ಕೇಂದ್ರ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ. ಹೊಸ ತಾಲೂಕು ಕೇಂದ್ರವಾದರೂ ಸೌಲಭ್ಯಗಳು, ಕಚೇರಿಗಳೇ ಇಲ್ಲದೇ ಎಲ್ಲದಕ್ಕೂ ಬಹುತೇಕ ಹೊನ್ನಾಳಿ ತಾಲೂಕು ಕೇಂದ್ರವನ್ನೇ ಅವಲಂಬಿಸಿರುವ ನ್ಯಾಮತಿಯಲ್ಲಿ ಪ್ರಜಾಸೌಧ ನಿರ್ಮಿಸುವ ಘೋಷಣೆಯಾಗಿದೆ.
ಕೆರೆಗಳ ತುಂಬಿಸಲು ಅನುದಾನ:ಹರಿಹರ ತಾಲೂಕಿನ ಕೊಂಡಜ್ಜಿ ಪರಿಸರದಲ್ಲಿ ವೃತ್ತಿ ರಂಗಭೂಮಿ ರಂಗಾಯಣದಲ್ಲಿ ₹3 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ, ವೃತ್ತಿ ರಂಗಾಯಣ ಸಮುಚ್ಛಯ ಹಾಗೂ ಥಿಯೇಟರ್ ಮ್ಯೂಸಿಯಂ ಸ್ಥಾಪಿಸಲುದ್ದೇಶಿಸಲಾಗಿದೆ. ಜಗಳೂರು ತಾಲೂಕಿನ 30 ಕೆರೆಗಳನ್ನು ತುಂಬಿಸುವ ಘೋಷಣೆ ಮಾಡಲಾಗಿದೆ. ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ, ಗೋವಿನಕೋವಿ, ಹನುಮಸಾಗರ ಕೆರೆಗಳನ್ನು ತುಂಬಿಸಲು ಸಹ ಅನುದಾನ ಕಾಯ್ದಿರಿಸಲಾಗಿದೆ.
ರೈಲ್ವೆ ಇಲಾಖೆ ಸಹಯೋಗದಲ್ಲಿ ತುಮಕೂರು- ಚಿತ್ರದುರ್ಗ- ದಾವಣಗೆರೆ ಸೇರಿದಂತೆ 9 ವಿವಿಧ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿ 6ನೇ ತರಗತಿಯಿಂದ 12ನೇ ತರಗತಿವರೆಗೆ ವಸತಿ ಶಾಲೆಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ.ಎಐ ವಿದ್ಯುನ್ಮಾನ ಕ್ಯಾಮರಾ ಅಳವಡಿಕೆ:
ದಾವಣಗೆರೆ ಸೇರಿದಂತೆ ಬಳ್ಳಾರಿ, ಮೈಸೂರು, ಬೆಂಗಳೂರು ಕೇಂದ್ರ ವಲಯಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳನ್ನು ಸ್ಥಾಪಿಸಲಾಗುವುದು. ಪ್ರಸ್ತುತ ರಾಜ್ಯದಲ್ಲಿ ಐದು ಕಡೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳು ಕಾರ್ಯನಿರ್ವಹಿಸುತ್ತಿದ್ದು, ಮಧ್ಯ ಕರ್ನಾಟಕದ ದಾವಣಗೆರೆಯ, ಬಳ್ಳಾರಿಯಲ್ಲೂ ಇಂತಹ ಘಟಕ ಆರಂಭವಾಗಲಿವೆ. ರಾಜ್ಯದಲ್ಲಿ ವಾಹನ ಸಂಚಾರವನ್ನು ಮೇಲ್ವಿಚಾರಣೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪತ್ತೆ, ನಿಯಂತ್ರಿಸಲು ದಾವಣಗೆರೆ ಸೇರಿದಂತೆ ಇತರೆ 9 ಜಿಲ್ಲೆಗಳ ಒಟ್ಟು 60 ಸ್ಥಳಗಳಲ್ಲಿ ₹50 ಕೋಟಿ ವೆಚ್ಚದಲ್ಲಿ ಎಐ ಆಧಾರಿತ ವಿದ್ಯುನ್ಮಾನ ಕ್ಯಾಮರಾ ಅಳವಡಿಕೆಗೆ ಸರ್ಕಾರ ಮುಂದಾಗಿದೆ.- - -
ಬಾಕ್ಸ್* ಸರ್ಕಾರಕ್ಕೆ ಭಾರ ಎನಿಸಿದ ಜಿಲ್ಲೆ ಕನಸುಗಳು! 1) ಮೆಕ್ಕೆಜೋಳದ ಕಣಜ ದಾವಣಗೆರೆಯಲ್ಲಿ ಮೆಕ್ಕೆಜೋಳ ಸಂಸ್ಕರಣಾ ಕೇಂದ್ರ, ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ, ಕೃಷಿ ಮತ್ತು ತೋಟಗಾರಿಕೆ ಕಾಲೇಜುಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಬಜೆಟ್‌ನಲ್ಲಿ ಘೋಷಿಸಿಲ್ಲ.2) ವಿಮಾನ ನಿಲ್ದಾಣ, ಜವಳಿ ಪಾರ್ಕ್, ಟ್ರಕ್ ಟರ್ಮಿನಲ್, ಐಟಿ ಬಿಟಿ, ಜಿಲ್ಲೆಯ ಜೀವನಾಡಿ ಭದ್ರಾ ನಾಲೆಗಳ ಆಧುನೀಕರಣ ಇರಲಿ, ನಾಲೆಯಲ್ಲಿನ ಹೂಳು, ಗಿಡಗಂಟೆ, ಮುಳ್ಳುಗಿಡ ತೆರವಿಗೂ ಅನುದಾನ ಇಟ್ಟಿಲ್ಲ.
3) ಒಂದು ಕಾಲದ ಕರ್ನಾಟಕದ ಮ್ಯಾಂಚೆಸ್ಟರ್‌ನಲ್ಲಿ ಕೈಗಾರಿಕೆ ಮಂಜೂರು ಮಾಡಲು ಸರ್ಕಾರ ಉತ್ಸಾಹವನ್ನೇ ತೋರುತ್ತಿಲ್ಲ.4) ಮೂರನೇ ವಿಶ್ವ ಕನ್ನಡ ಸಮ್ಮೇಳನ ದಶಕದಿಂದಲೂ ನನೆಗುದಿಗೆ ಬಿದ್ದಿದ್ದರೂ, ಅದರ ಬಗ್ಗೆಯೂ ಬಜೆಟ್‌ನಲ್ಲಿ ಚಕಾರ ಎತ್ತಿಲ್ಲ.
5) ದಾವಣಗೆರೆ ಜಿಲ್ಲೆಯಲ್ಲಿ ಐತಿಹಾಸಿಕ, ಪ್ರಾಚೀನ ದೇಗುಲ, ಪುಷ್ಕರಿಣಿ, ಆಧುನಿಕ ಗಾಜಿನ ಮನೆ, ಶತಶತಮಾನಗಳ ಸೂಳೆಕೆರೆ, ಪುಷ್ಕರಿಣಿ, ದೇಗುಲಗಳೇ ಇದೆ. ಆದರೆ, ರಾಜ್ಯ ಪ್ರವಾಸೋದ್ಯಮ ನಕ್ಷೆಯಲ್ಲಿ ದಾವಣಗೆರೆಗೊಂದು ಸ್ಥಾನವೇ ಸಿಕ್ಕಿಲ್ಲವೆಂಬುದು ಸತ್ಯ.- - - (* ಫೋಟೋಗಳು ಬರಬಹುದು)