ಸಿದ್ದರಾಮಯ್ಯ ಸರ್ಕಾರಿ ಸಮಾವೇಶವನ್ನು ಕಾಂಗ್ರೆಸ್ ಸಮಾವೇಶ ಮಾಡಿದ್ರು: ಕೋಟ

| Published : Mar 15 2024, 01:27 AM IST

ಸಿದ್ದರಾಮಯ್ಯ ಸರ್ಕಾರಿ ಸಮಾವೇಶವನ್ನು ಕಾಂಗ್ರೆಸ್ ಸಮಾವೇಶ ಮಾಡಿದ್ರು: ಕೋಟ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾವೇಶದಲ್ಲಿ ಸರ್ಕಾರವನ್ನು ಸಮರ್ಥನೆ ಮಾಡಿಕೊಂಡಿದ್ದರೆ ಯಾವುದೇ ತಪ್ಪು ಇಲ್ಲ, ಆದರೆ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಖರ್ಚಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಾವೇಶವನ್ನು ಮಾಡಿದ್ದಾರೆ ಅದು ತಪ್ಪು ಎಂದು ಕೋಟ ಶ್ರೀನಿವಾಸ್ ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸಮಾವೇಶದಲ್ಲಿ ಉಡುಪಿಯ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರೇಕ್ಷಕರನ್ನಾಗಿ ಕೂರಿಸಿದ್ದ ಬಗ್ಗೆ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿ ಸಮಾವೇಶ ಮಾಡಿದರೆ ಗೌರವ ಬರುವುದಿಲ್ಲ ಎಂದಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶದಲ್ಲಿ ಸರ್ಕಾರವನ್ನು ಸಮರ್ಥನೆ ಮಾಡಿಕೊಂಡಿದ್ದರೆ ಯಾವುದೇ ತಪ್ಪು ಇಲ್ಲ, ಆದರೆ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಖರ್ಚಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಾವೇಶವನ್ನು ಮಾಡಿದ್ದಾರೆ ಅದು ತಪ್ಪು ಎಂದರು.ಅಲ್ಲದೇ ಬಿಜೆಪಿಯ ಬಗ್ಗೆ ಸಿದ್ದರಾಮಯ್ಯ ಲಘುವಾಗಿ ಮಾತನಾಡಿದ್ದಾರೆ. ಮೋದಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಕೆಟ್ಟ ಸಂಪ್ರದಾಯವನ್ನು ಸಿಎಂ ಮುಂದುವರಿಸಿದ್ದಾರೆ. ಪ.ಜಾತಿ ಪಂಗಡದ ಹಣ ಗ್ಯಾರಂಟಿಗೆ ಬಳಕೆ ಮಾಡಿದ್ದು ಮೋಸ ಅಲ್ಲವೇ ಎಂದು ಕೋಟ ಪ್ರಶ್ನಿಸಿದರು.

ಅಂಬೇಡ್ಕರ್ ಸಂವಿಧಾನದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ, ಅಂಬೇಡ್ಕರ್ ಅವರ ಅಂತ್ಯ ಸಂಸ್ಕಾರಕ್ಕೂ ಕಾಂಗ್ರೆಸ್ ಜಾಗ ಕೊಡಲಿಲ್ಲ. ಚುನಾವಣೆಯಲ್ಲಿ ಅಂಬೇಡ್ಕರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಜನಸಂಘ ಅಂಬೇಡ್ಕರ್ ಅವರ ಏಜಂಟ್ ಆಗಿ ಕೆಲಸ ಮಾಡಿತ್ತು ಎಂದು ತಿರುಗೇಟು ನೀಡಿದರು.* ಬಿಜೆಪಿ ಶಾಸಕರ ಗೈರು ಸರಿಗ್ಯಾರೆಂಟಿ ಸಮಾವೇಶಕ್ಕೆ ಉಡುಪಿಯ 5 ಶಾಸಕರು ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಕಾರ್ಯಕ್ರಮಕ್ಕೆ ಅದರದ್ದೇ ಆದ ಗೌರವ ಇರುತ್ತದೆ. ಆದರೆ ಸರ್ಕಾರದ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಕಾರ್ಯಕ್ರಮವಾಗಿ ಪರಿವರ್ತಿಸಿದ್ದರು. ಈ ಕಾರಣಕ್ಕಾಗಿ ಬಿಜೆಪಿ ಶಾಸಕರು ಕಾರ್ಯಕ್ರಮ ಬಹಿಷ್ಕರಿಸಿರಬಹುದು ಎಂದರು.