ಸಾರಾಂಶ
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹತ್ತನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ 27ನೇ ಸ್ಥಾನಕ್ಕೆ ಕುಸಿದಿದೆ. ಈ ಸಂಬಂಧ ಕೂಡಲೇ ಡಿಡಿಪಿಐ ಅಮಾನತುಗೊಳಿಸಿದ್ದೇನೆ. ಈ ಮೂಲಕ ಜಿಲ್ಲೆಯ ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹೊಸಪೇಟೆ : ವಿಜಯನಗರ ಜಿಲ್ಲೆ ಅಧಿಕಾರಿಗಳ ಕಾರ್ಯವೈಖರಿ ನನಗೆ ತೃಪ್ತಿ ತಂದಿಲ್ಲ. ಜಿಲ್ಲೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹತ್ತನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ 27ನೇ ಸ್ಥಾನಕ್ಕೆ ಕುಸಿದಿದೆ. ಈ ಸಂಬಂಧ ಕೂಡಲೇ ಡಿಡಿಪಿಐ ಅಮಾನತುಗೊಳಿಸಿದ್ದೇನೆ. ಈ ಮೂಲಕ ಜಿಲ್ಲೆಯ ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆ ಸ್ಥಾನ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಹಾಗಾಗಿ ಡಿಡಿಪಿಐ ಯುವರಾಜ್ ನಾಯ್ಕ ಅವರನ್ನು ಅಮಾನತುಗೊಳಿಸಲು ಮತ್ತು ಜಿಪಂ ಸಿಇಒ ಸದಾಶಿವ ಪ್ರಭು ಅವರಿಗೂ ನೋಟಿಸ್ ನೀಡಲು ಸೂಚಿಸಿರುವೆ. ಜಿಲ್ಲೆಯ ಎಲ್ಲ ತಾಲೂಕುಗಳ ಬಿಇಒಗಳಿಗೆ ನೋಟಿಸ್ ಜಾರಿ ಮಾಡಲೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ ಎಂದರು.
ಆಡಳಿತಕ್ಕೆ ಚುರುಕು: 80 ದಿನಗಳಿಂದ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಧಿಕಾರಿಗಳ ವಲಯದಲ್ಲಿ ಜಡತ್ವ ಮನೆ ಮಾಡಿದೆ. ಇದನ್ನು ಹೋಗಲಾಡಿಸಲು ಜಿಲ್ಲೆಯಲ್ಲೇ ಕೆಡಿಪಿ ಸಭೆ ಮಾಡಿದ್ದೇನೆ. ಈ ಸಭೆಯಲ್ಲಿ ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದರು.
ಎಸ್ಸೆಸ್ಸೆಲ್ಸಿಯಲ್ಲಿ ಗ್ರೇಸ್ ನೀಡಲ್ಲ: ಈ ಬಾರಿ ಪರೀಕ್ಷಾ ಅಕ್ರಮ ತಡೆಯಲು ಸಿಸಿ ಕ್ಯಾಮೆರಾ, ವೆಬ್ ಕ್ಯಾಮರಾ ಬಳಕೆಯಿಂದ ವಿದ್ಯಾರ್ಥಿಗಳು ಅಂಜಿಕೆಯಿಂದ ಪರೀಕ್ಷೆ ಎದುರಿಸಿದ ಹಿನ್ನೆಲೆ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಆಗಿದೆ. ಹಾಗಾಗಿ ಮಕ್ಕಳಿಗೆ ಗ್ರೇಸ್ ಅಂಕಗಳನ್ನು ನೀಡಿ ಪಾಸು ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮುಂದಿನ ವರ್ಷ ಗ್ರೇಸ್ ಅಂಕಗಳನ್ನು ನೀಡದಂತೆ ಸೂಚಿಸಿದ್ದೇನೆ. ಶಿಕ್ಷಣ ವ್ಯವಸ್ಥೆ ಸರಿಯಾದ ಕ್ರಮದಲ್ಲಿ ಇರಲಿ ಎಂದು ಸೂಚಿಸಿದ್ದೇನೆ ಎಂದರು.
ಡಿಎಂಫ್ ಅನುದಾನ ಬಿಡುಗಡೆಗೆ ಸೂಚನೆ: ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ರಚನೆಯಾಗಿದ್ದು, ಜಿಲ್ಲೆಗೆ ಖನಿಜ ನಿಧಿಯಿಂದ ಇನ್ನು ₹218 ಕೋಟಿ ಕಳೆದ ವರ್ಷದ ಹಣ ಬಾಕಿ ಇದೆ. ಈ ಹಣ ಬಿಡುಗಡೆಗೂ ಖನಿಜ ಇಲಾಖೆ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಡಿಎಂಎಫ್ ಅನುದಾನದಲ್ಲಿ ಬಳ್ಳಾರಿಗೆ ಶೇ.72 ಮತ್ತು ವಿಜಯನಗರ ಜಿಲ್ಲೆಗೆ ಶೇ.28ರಷ್ಟು ಅನುದಾನ ಹಂಚಿಕೆ ಆಗಿದೆ. ಬಳ್ಳಾರಿ ಜಿಲ್ಲೆ ಶಾಸಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಗಣಿ ಇಲಾಖೆಯವರು ಮಾಹಿತಿ ನೀಡಿದ್ದಾರೆ. ಇದೆಲ್ಲ ಬಗೆಹರಿಸಲಾಗುವುದು. ವಿಜಯನಗರ ಜಿಲ್ಲೆಗೆ ಡಿಎಂಎಫ್ ಅನುದಾನ ಪ್ರತಿ ವರ್ಷ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಕ್ಕರೆ ಕಾರ್ಖಾನೆ: ಜಿಲ್ಲೆಯ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆಗೆ ಬೇಡಿಕೆ ಇದೆ. ಜಿಲ್ಲೆಯ ರೈತರು ಅಹವಾಲು ಸಲ್ಲಿಸಿದ್ದಾರೆ. ಇನ್ನು ಶಾಸಕ ಎಚ್.ಆರ್.ಗವಿಯಪ್ಪ ಕೂಡ ಸಭೆಯಲ್ಲಿ ಗಮನ ಸೆಳೆದಿದ್ದಾರೆ. ಈ ಬಗ್ಗೆ ಜಾಗದ ಸಮಸ್ಯೆ ಬಗೆಹರಿಸಲಾಗುವುದು. ಸಕ್ಕರೆ ಇಲಾಖೆಯ ಕಾರ್ಯದರ್ಶಿ ಹಾಗೂ ಸಚಿವರ ಜೊತೆಗೆ ಈ ಬಗ್ಗೆ ಚರ್ಚಿಸಿ ಶೀಘ್ರವೇ ಕಾರ್ಖಾನೆ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದರು.
ಮೆಡಿಕಲ್ ಕಾಲೇಜ್‌ಗೆ ಕ್ರಮ: ವಿಜಯನಗರ ಜಿಲ್ಲೆಗೆ ಹೊಸದಾಗಿ ಮೆಡಿಕಲ್ ಕಾಲೇಜ್ ಮಂಜೂರಾತಿಗೆ ಕ್ರಮ ವಹಿಸಲಾಗುವುದು. ಇದಕ್ಕಾಗಿ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಹಾಸಿಗೆಗಳನ್ನು ಹೆಚ್ಚಿಸಲು ಕ್ರಮ ವಹಿಸಲು ಸೂಚಿಸಲಾಗಿದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ 400 ಬೆಡ್‌ಗಳನ್ನು ಸೃಜಿಸಲಾಗುವುದು. ಉಳಿದ ಸರ್ಕಾರಿ ಆಸ್ಪತ್ರೆಗಳಲ್ಲೂ ಹಾಸಿಗೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇದರಿಂದ ಮೆಡಿಕಲ್ ಕಾಲೇಜ್ ಮಂಜೂರಾತಿಗೆ ಅನುಕೂಲ ಆಗಲಿದೆ ಎಂದರು.
ಸಮನಾಂತರ ಜಲಾಶಯಕ್ಕೆ ಕ್ರಮ: ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ ಕೊಪ್ಪಳದ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕಾಗಿ ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸಿದೆ ಎಂದರು.
ಡಿಸಿಗೆ ವರದಿ ನೀಡಲು ಸೂಚನೆ: ಸಂಡೂರಿನ ಅರಣ್ಯ ಪ್ರದೇಶದಲ್ಲಿ ಕುದುರೆಮುಖ ಕಂಪನಿಗೆ ಗಣಿಗಾರಿಕೆಗೆ ಕೇಂದ್ರದ ಭಾರೀ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವಕಾಶ ಮಾಡಿಕೊಟ್ಟಿರುವ ಕುರಿತು ಸಮಗ್ರ ವರದಿ ಸಲ್ಲಿಸಲು ಬಳ್ಳಾರಿ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಆ ಪ್ರದೇಶದಲ್ಲಿ ಮರಗಳನ್ನು ಕಡಿದು ಗಣಿಗಾರಿಕೆ ಮಾಡಬೇಕಾಗುತ್ತದೆ ಎಂಬ ಪ್ರಾಥಮಿಕ ಮಾಹಿತಿ ಇದೆ. ಆದರೆ, ಈ ಬಗ್ಗೆ ಜಿಲ್ಲಾಧಿಕಾರಿಯಿಂದ ವರದಿ ಬಂದ ಬಳಿಕವೇ ಈ ಬಗ್ಗೆ ನಿಖರವಾಗಿ ಪ್ರತಿಕ್ರಿಯಿಸುವೆ ಎಂದರು.