- ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಟು ಟೀಕೆ

- ಗೌಡರು ವಸೂಲಿ ಮಾಡುವುದಕ್ಕಾಗಿ ನಮ್ಮನ್ನು ರಾಜಕೀಯಕ್ಕ ಕರೆತರಲಿಲ್ಲಕನ್ನಡಪ್ರಭ ವಾರ್ತೆ ಪಾಂಡವಪುರ

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ತಮ್ಮ ಮೊದಲ ಮಗನನ್ನು ರಾಜಕೀಯದಲ್ಲಿ ಬೆಳೆಸಲು ಮುಂದಾಗಿದ್ದರು. ಅವರ ಅಕಾಲಿಕ ಮರಣದಿಂದ ಎರಡನೇ ಮಗನನ್ನು ರಾಜಕಾರಣಕ್ಕೆ ತಂದಿದ್ದಾರೆ. ವೈದ್ಯರಾಗಿದ್ದವರನ್ನು ರಾಜಕೀಯಕ್ಕೆ ಕರೆತಂದು ವಸೂಲಿಗೆ ಇಟ್ಟುಕೊಂಡಿದ್ದಾರೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.

ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯನವರು ಟೀಕಿಸುತ್ತಿರುವ ಬಗ್ಗೆ ತಾಲೂಕಿನ ಟಿ.ಎಸ್.ಛತ್ರ ಗ್ರಾಮದಲ್ಲಿ ಕೇಳಿದಾಗ, ದೇವೇಗೌಡರ ಕುಟುಂಬದ ಬಗ್ಗೆ ದೂರುವ ಕುಟುಂಬ ಸದಸ್ಯರು ಎಷ್ಟು ಜನ ರಾಜಕೀಯದಲ್ಲಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಉಪಮುಖ್ಯಮಂತ್ರಿ ಕುಟುಂಬದಲ್ಲಿ ಎಷ್ಟು ಜನ ಅಧಿಕಾರ ಪಡೆದಿದ್ದಾರೆ. ಅವರ ತಮ್ಮನನ್ನೇ ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡಲು ಹೊರಟಿಲ್ಲವೇ. ಎರಡು, ಮೂರು ಜನ ಶಾಸಕರಿರುವ ಕುಟುಂಬಗಳು ಸಾಕಷ್ಟಿವೆ. ಹಾಗಾಗಿ ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕುಟುಕಿದರು.ದೇವೇಗೌಡರು ನಮ್ಮನ್ನು ವಸೂಲಿ ಮಾಡುವುದಕ್ಕಾಗಿ ರಾಜಕೀಯಕ್ಕೆ ಕರೆತರಲಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಧ್ಯೇಯವನ್ನಿಟ್ಟುಕೊಂಡು ರಾಜಕೀಯಕ್ಕೆ ಬಂದೆವು. ಜನರೇ ನಮ್ಮನ್ನು ರಾಜಕಾರಣಕ್ಕೆ ಕರೆತಂದರು ಎಂದು ಹೇಳಿದರು.ಅಧಿಕಾರದ ರುಚಿ ಬಿಡೋಲ್ಲ:

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುವ ಬಗ್ಗೆ ಕೇಳಿದಾಗ, ಮುಂದಿನ ಚುನಾವಣೆವರೆಗೂ ಕಾದು ನೋಡಬೇಕು. ೨೦೨೮ಕ್ಕೆ ಮತ್ತೆ ನಾನೇ ಸಿಎಂ ಎನ್ನುತ್ತಿದ್ದಾರೆ. ಕೊನೆ ಉಸಿರಿರುವವರೆಗೂ ರಾಜಕೀಯ ಮಾಡುವೆ ಎಂದಿದ್ದಾರೆ. ಈ ಹಿಂದೆ ೨೦೧೩ರ ವಿಧಾನಸಭೆಯಲ್ಲಿ ಇದೇ ನನ್ನ ಕೊನೆ ಚುನಾವಣೆ ಎಂದಿದ್ದರು. ಅಧಿಕಾರದ ರುಚಿ ನೋಡಿದ ಮೇಲೆ ನಾನೇ ಪರ್ಮನೆಂಟ್ ಸಿಎಂ ಎನ್ನುತ್ತಿದ್ದಾರೆ. ಜನರೇ ಮುಂದೆ ತೀರ್ಮಾನ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.ಕಾಂಗ್ರೆಸ್‌ನದ್ದು ಬರೀ ರಾಜಕೀಯ:


ಯುದ್ಧದ ಸಂಧರ್ಭದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಬೇರೆ ದೇಶಗಳಲ್ಲಿ ಯುದ್ಧದ ಪರಿಣಾಮದಿಂದಾಗಿ ಲಾಕ್‌ಡೌನ್ ಪರಿಸ್ಥಿತಿ ತಲುಪಿದ್ದಾರೆ. ನಮ್ಮ ದೇಶ ಉತ್ತಮ ಬಾಂಧವ್ಯದಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಕೇಂದ್ರ ಸರ್ಕಾರ ಜನರಿಗೆ ಸಮಸ್ಯೆ ಎದುರಾಗದಂತೆ ಪರಿಸ್ಥಿತಿ ನಿಭಾಯಿಸುತ್ತಿದೆ. ಆದರೆ, ಕಾಂಗ್ರೆಸ್‌ನವರು ಏನು ಮಾಡುತ್ತಿದ್ದಾರೆ. ಶಾಸಕರ ಐಪಿಎಲ್ ಟಿಕೆಟ್ ಬೇಡಿಕೆ ದೇಶಾದ್ಯಂತ ನಗೆಪಾಟಲಿಗೆ ಒಳಗಾಯಿತು. ಈ ಹಿಂದೆ ಎಂಎಲ್‌ಎಗಳಿಗೆ, ಮಂತ್ರಿಗಳಿಗೆ ಒಂದೆರಡು ಪಾಸ್ ಕೊಡುತ್ತಿದ್ದರು. ಅದು ಗೌರವಯುತವಾಗಿ ನಡೆದುಕೊಂಡು ಬರುತ್ತಿತ್ತು. ಆದರೆ, ಶಾಸಕರು ೩-೪ ಟಿಕೆಟ್‌ಗೆ ಅಸೆಂಬ್ಲಿಯಲ್ಲಿ ಬೇಡಿಕೆ ಇಟ್ಟು ಮಾತನಾಡಿ ನಗೆಪಾಟಲಿಗೊಳಗಾದರು ಎಂದು ಟೀಕಿಸಿದರು.ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನವರು ಅಧಿಕಾರದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದರು. ಈಗ ಆಟೋ ಡ್ರೈವರ್‌ಗಳು ೧೫ ಸಾವಿರ ರು. ಕೊಡಿ ಎಂದು ಕೇಳುತ್ತಿದ್ದಾರೆ. ಎಲ್ಲದಕ್ಕ್ಕೂ ಗ್ಯಾರಂಟಿ ಎನ್ನುವುದನ್ನು ಬಿಟ್ಟು ಆಟೋ ಡ್ರೈವರ್‌ಗಳ ಸಮಸ್ಯೆ ಪರಿಹಾರ ಮಾಡಲಿ ಎಂದು ನಯವಾಗಿ ಜರಿದರು.ಮೇ ತಿಂಗಳಲ್ಲಿ ಶಂಕುಸ್ಥಾಪನೆ:

ಮೇ ತಿಂಗಳಲ್ಲಿ ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸುವ ಗುರಿ ಇಟ್ಟುಕೊಂಡಿದ್ದೇನೆ. ರಾಜ್ಯ ಸರ್ಕಾರ ಯಾವ ಜಾಗವನ್ನು ಅಭಿವೃದ್ಧಿಪಡಿಸಿಕೊಡಲಿದೆ ಎಂಬುದನ್ನು ಹೇಳಬೇಕು. ಮಂಡ್ಯದಲ್ಲಿ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಯಿಂದ ಟೌನ್‌ಶಿಪ್ ಬೆಳವಣಿಗೆ ಕಾಣಲಿದೆ ಎಂದು ನುಡಿದರು.ಉಪ ಚುನಾವಣೆ ಪ್ರಚಾರ:

ರಾಜ್ಯದಲ್ಲಿ ಉಪ ಚುನಾವಣೆ ವಾತಾವರಣ ಹೇಗಿದೆ ಎಂಬುದನ್ನು ಈಗಾಗಲೇ ತಿಳಿದುಕೊಂಡಿದ್ದೇನೆ. ನಾನೂ ಸಹ ಪ್ರಚಾರಕ್ಕೆ ಹೋಗುತ್ತೇನೆ. ನಾಳೆ ಸಂಜೆ ದಾವಣಗೆರೆಗೆ ಹೋಗಿ ಎರಡು ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದೇನೆ. ಭಾನುವಾರ ಇಡೀ ದಿನ ಬಾಗಲಕೋಟೆ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಹೇಳಿದರು.