ಸಿದ್ದರಾಮಯ್ಯ ಪ್ರಾಮಾಣಿಕ ರಾಜಕಾರಣ ಮಾಡಿಲ್ಲ

| Published : Sep 25 2024, 01:00 AM IST

ಸಿದ್ದರಾಮಯ್ಯ ಪ್ರಾಮಾಣಿಕ ರಾಜಕಾರಣ ಮಾಡಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು: ಮುಡಾ ನಿವೇಶನ ಹಗರಣದಲ್ಲಿ ರಾಜ್ಯಪಾಲರ ಕ್ರಮ ಸರಿ ಎಂದು ನ್ಯಾಯಮೂರ್ತಿಗಳು ತೀರ್ಪು ನೀಡಿರುವುದರಿಂದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಿನಾಮೆ ನೀಡಬೇಕೆಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶಗೌಡ ಆಗ್ರಹಿಸಿದರು.

ತುಮಕೂರು: ಮುಡಾ ನಿವೇಶನ ಹಗರಣದಲ್ಲಿ ರಾಜ್ಯಪಾಲರ ಕ್ರಮ ಸರಿ ಎಂದು ನ್ಯಾಯಮೂರ್ತಿಗಳು ತೀರ್ಪು ನೀಡಿರುವುದರಿಂದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಿನಾಮೆ ನೀಡಬೇಕೆಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶಗೌಡ ಆಗ್ರಹಿಸಿದರು.

ಮಂಗಳವಾರ ಸಂಜೆ ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಡಾ ನಿವೇಶನ ಹಗರಣದಲ್ಲಿ ಹೈಕೋರ್ಟ್ ತೀರ್ಪು ಬಂದಿದ್ದು ರಾಜ್ಯಪಾಲರ ಕ್ರಮ ಸರಿ ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಇನ್ನು ಮುಂದೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಇದುವರೆಗೆ ನೀಡಿದ್ದ ತಡೆ ತೆರವಾಗಲಿದೆ. ಆಗ ಅವರು ಅಧಿಕಾರದಲ್ಲಿ ಇರಬಾರದು ಎಂದರು. ಮುಖ್ಯಮಂತ್ರಿಗಳು ಪ್ರಾಮಾಣಿಕರು, ನಿಷ್ಕಳಂಕರು ಎನ್ನುವ ಬಿಂಬ ಮುರಿದು ಬಿದ್ದಿದೆ. ಮುಖ್ಯಮಂತ್ರಿಗಳು 2013 ರಿಂದ ಮತ್ತು ಅದಕ್ಕಿಂತ ಮುಂಚಿನಿಂದಲೂ ಅಧಿಕಾರದಲ್ಲಿ ಇದ್ದರು. ಅವರ ಅಧಿಕಾರದ ದುರ್ಬಳಕೆಯಾಗಿದೆ. ಮತ್ತು ಅವರ ಕುಟುಂಬ ಇಲ್ಲಿ ಫಲಾನುಭವಿ ಎಂದು ನ್ಯಾಯಾಲಯ ಹೇಳಿದೆ. ಇದು ಸಿದ್ದರಾಮಯ್ಯನವರು ತಾವು ಹೇಳಿಕೊಳ್ಳುವಂತೆ ಪ್ರಾಮಾಣಿಕ ರಾಜಕೀಯ ಜೀವನ ಮಾಡಿಲ್ಲ ಎಂದು ಸ್ಪಷ್ಟವಾಗುತ್ತದೆ ಎಂದರು.ಯಾರ ವಿರುದ್ಧವೇ ಆಗಲಿ ತನಿಖೆ ನಡೆಯುವಾಗ ಅವರು ಅಧಿಕಾರದಲ್ಲಿ ಇರಬಾರದು. ಜನಪ್ರತಿನಿಧಿಗಳ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಲಿ. ಅಲ್ಲಿ ಅವರು ತಪ್ಪಿತಸ್ಥರಲ್ಲ ಎಂಬ ತೀರ್ಪು ಬಂದರೆ ಮತ್ತೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅವರು ನೈತಿಕ ಹೊಣೆ ಹೊತ್ತುಕೊಂಡು ತಕ್ಷಣ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗೆ ಇಳಿಯಬೇಕು ಎಂದರು.

ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕಿಲ್ಲ, ಅವರಿಗೆ ಸಂಪುಟದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ. ಆ ಸಂಪುಟ ತೆಗೆದುಕೊಂಡ ನಿರ್ಣಯವನ್ನೇ ರಾಜ್ಯಪಾಲರು ತಿರಸ್ಕರಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂಬುದನ್ನು ಶಿವಕುಮಾರ್‌ ಅವರು ಮರೆತಿದ್ದಾರೆ. ಮತ್ತು ಇದು ಸರಿಯಾದ ಕ್ರಮ ಎಂದು ನ್ಯಾಯಾಲವೂ ಹೇಳಿದೆ. ಹಾಗಿರುವಾಗ ಮುಖ್ಯಮಂತ್ರಿಗಳಿಗೆ ಸಂಪುಟದ ಬೆಂಬಲವಿದೆ ಎನ್ನುವುದೇ ಅರ್ಥಹೀನ ಎಂದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಆಸೆ ಬುರುಕುತನದಿಂದ ವರ್ತಿಸಿದ್ದಾರೆ. ಎಲ್ಲಿ ಜಮೀನು ವಶ ಪಡಿಸಿಕೊಳ್ಳಲಾಗಿದೆಯೋ ಅಲ್ಲಿಯೇ ನಿವೇಶನ ಪಡೆಯುವ ಬದಲು ಬೆಲೆ ಬಾಳುವ ಪರ್ಯಾಯ ನಿವೇಶನ ಪಡೆಯಲಾಗಿದೆ. ಅದು ಸಾಲದು ಎಂದು ತಮಗೆ 63ಕೋಟಿ ರುಪಾಯಿ ಪರಿಹಾರ ಕೊಡಬೇಕು ಎಂದು ಸಿದ್ದರಾಮಯ್ಯನವರು ಕೇಳಿದ್ದಂತೂ ಅವರ ವೈಯಕ್ತಿಕ ಅಧಃಪತನದ ದ್ಯೋತಕದಂತೆ ಇತ್ತು ಎಂದಿದ್ದಾರೆ.

ಹಿಂದೆ ಇದೇ ರೀತಿ ತಮ್ಮ ವಿರುದ್ಧ ಆರೋಪ ಬಂದಾಗ ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು ಮಾದರಿ ಹಾಕಿದ್ದಾರೆ. ಎಸ್‌.ಬಂಗಾರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗ (ಕ್ಲಾಸಿಕ್‌ ಕಂಪ್ಯೂಟರ್‌ ಖರೀದಿ ಹಗರಣ) ಆಗ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್‌ ಅವರು ಬಂಗಾರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ ವೀರಪ್ಪ ಮೋಯ್ಲಿ ಅವರನ್ನು ಮುಖ್ಯಮಂತ್ರಿ ಮಾಡಿದ್ದರು. ಅದರಂತೆ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೂಚನೆ ನೀಡಿ ಇಡೀ ದೇಶಕ್ಕೆ ಒಂದು ಸಂದೇಶ ಕಳಿಸಬೇಕು. ಮಾತೆತ್ತಿದರೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕೆ ಮಾಡುವ ಕಾಂಗ್ರೆಸ್‌ ಪಕ್ಷಕ್ಕೆ ಈಗ ಕಳಂಕ ಅಂಟಿಕೊಂಡಿದೆ. ಅವರು ಯಾರು ಬೇಕಾದವರನ್ನು ಮುಖ್ಯಮಂತ್ರಿ ಮಾಡಲಿ. ಡಿ.ಕೆ.ಶಿವಕುಮಾರ್‌ ಆಗಲಿ, ಪರಮೇಶ್ವರ್‌ ಆಗಲಿ. ಅಥವಾ ಕೇಜ್ರಿವಾಲ್‌ ತರಹ ಹೊಸ ಜನಾದೇಶ ಬೇಕು ಎಂದು ವಿಧಾನಸಭೆ ವಿಸರ್ಜಿಸಿ ಜನರ ಬಳಿ ಹೋಗಲಿ ಎಂದರು.

ಪ್ರತಿಭಟನೆಯಲ್ಲಿ ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಗುಬ್ಬಿ ದಿಲೀಪ್, ಪ್ರಭಾಕರ ಬೆಳಗುಂಬ ನಾಗೇಶ ಶಂಕರ್ ಅಂಜಿನಪ್ಪ ಶಬ್ಬೀರ್ ಬೆಳ್ಳಿ ಲೋಕೇಶ ,ಚಿದಾನಂದ, ರವೀಶ್, ಸುಮಿತ್ರಾದೇವಿ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.