ಸಾರಾಂಶ
ಕುರುಗೋಡು : ಎರಡು ಬಾರಿ ಮುಖ್ಯಮಂತ್ರಿಯಾಗಿ ಅತ್ಯುತ್ತಮ ಆಡಳಿತ ನೀಡಿರುವ ಸಿದ್ದರಾಮಯ್ಯ ಅವರು ಇನ್ನೂ 3 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿದು, ಹತ್ತು ವರ್ಷಗಳ ಅವಧಿ ಪೂರೈಸಲಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಭಕ್ತ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣನವರ ಪುತ್ಥಳಿಗಳನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿದರು. ಸಿದ್ದರಾಮಯ್ಯ ದಕ್ಷ ಆಡಳಿತ ನೀಡುವ ಮುತ್ಸದ್ದಿ ನಾಯಕ. ಆದರೆ, ಪ್ರತಿಪಕ್ಷಗಳು ವಿನಾಕಾರಣ ಆರೋಪ ಮಾಡಿ ಕಪ್ಪುಚುಕ್ಕೆ ಇಡುವ ಹುನ್ನಾರ ನಡೆಸಿದವು. ಆದರೆ, ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅವರಿಗೆ ಸಮುದಾಯದ ಬೆಂಬಲ ಇರುವ ವರೆಗೆ ಯಾರೂ ಏನೂ ಮಾಡಲಾಗದು. 139 ಶಾಸಕರ ಬೆಂಬಲ ಇರುವ ಈ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಫಲ ನೀಡದು ಎಂದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರ ಪಾತ್ರ ಇರದಿದ್ದರೂ ಬಿಜೆಪಿ ನಾಯಕರು ಅಪಪ್ರಚಾರ ಮಾಡಿದರು. ಆದರೆ, ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿದೆ. ಭಾರತವು ಸರ್ವ ಜನಾಂಗಗಳ ಶಾಂತಿಯ ತೋಟವಾಗಿದ್ದು, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಬಿಜೆಪಿ ಕುತಂತ್ರ ಯಾವುದೇ ಕಾರಣಕ್ಕೂ ಯಶಸ್ವಿಯಾಗದು ಎಂದರು.
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಮತ್ತೆ ಮಂತ್ರಿಯಾಗಲಿದ್ದಾರೆ. ಮತ್ತೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಭೈರತಿ ಸುರೇಶ್ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸಿದ್ದರಾಮಯ್ಯ ಓರ್ವ ಹಿಂದುಳಿದ ವರ್ಗದ ನಾಯಕ ಎಂಬ ಕಾರಣಕ್ಕೆ ಬಿಜೆಪಿ ಸೇರಿದಂತೆ ಕೆಲವು ವರ್ಗದವರು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಅನೇಕ ಕುತಂತ್ರ ರೂಪಿಸುತ್ತಿದ್ದಾರೆ. ಆದರೆ ಜನರ ಬೆಂಬಲ ಇರುವವರೆಗೂ ಅದು ಸಫಲವಾಗದು ಎಂದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಮಾತನಾಡಿ, ಪಾರದರ್ಶಕ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದ್ದಾರೆ. ಬಿಜೆಪಿಯವರ ಕುತಂತ್ರದಿಂದ ಮಾಡದ ತಪ್ಪಿಗೆ ನಾನು ಜೈಲು ಸೇರಬೇಕಾಯಿತು ಎಂದು ತಿಳಿಸಿದರು. ಸಿದ್ದರಾಮಯ್ಯ ಅವರು ದೇಶ ಕಂಡ ಅಪರೂಪದ ವ್ಯಕ್ತಿ. ಇಂತಹ ವ್ಯಕ್ತಿಯನ್ನು ಪಡೆಯಲು ಹಾಲುಮತ ಸಮಾಜ ಪುಣ್ಯ ಮಾಡಿದೆ. ಬಡವರ ಪರ ಯೋಚಿಸುವ, ದಕ್ಷ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೋಡಿ ಬಿಜೆಪಿ ನಾಯಕರು ಗಡಗಡ ನಡಗುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಎನ್. ಗಣೇಶ್ ಮಾತನಾಡಿದರು. ಕನಕಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮಿ ಮತ್ತು ಗೋವರ್ಧನಾನಂದ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ, ಕೃಷ್ಣರಾಜ ನಗರ ಶಾಸಕ ಡಿ. ರವಿಶಂಕರ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಬಳ್ಳಾರಿ ಮೇಯರ್ ನಂದೀಶ್, ಕೆಎಸ್‌ಎಲ್ ಸ್ವಾಮಿ, ಕಲ್ಲುಕಂಬ ಪಂಪಾಪತಿ, ಕೆ.ಎ. ರಾಮಲಿಂಗಪ್ಪ, ಬೆಣಕಲ್ ಬಸವರಾಜಗೌಡ, ಶಶಿಕಲಾ, ಕುರುಬರ ಸಂಘದ ಅಧ್ಯಕ್ಷ ಡಾ. ಗಾದಿಲಿಂಗನಗೌಡ, ಬಿ.ಕೆ. ಕೆರಕೋಡಪ್ಪ, ಬಿ.ಎಂ. ಪಾಟೀಲ್, ದಮ್ಮೂರು ಸೋಮಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಹಾಗೂ ಗ್ರಾಮದ ಕುರುಬ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.