ಚಿಕ್ಕಮಗಳೂರು: ಭಕ್ತಿ ಹಾಗೂ ಕಾಯಕದ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ ಸಿದ್ದರಾಮೇಶ್ವರರು ಕೆರೆ ಕಟ್ಟೆಗಳನ್ನು ಕಟ್ಟಿಸಿ ರೈತರ ಬದುಕು ಹಸನಾಗಿಸುತ್ತಾ ಅವರ ಬಾಳಿಗೆ ಬೆಳಕಾದವರು ಎಂದು ಶಾಸಕರೆ ಎಚ್.ಡಿ.ತಮ್ಮಯ್ಯ ಹೇಳಿದರು.
- ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಕ್ತಿ ಹಾಗೂ ಕಾಯಕದ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ ಸಿದ್ದರಾಮೇಶ್ವರರು ಕೆರೆ ಕಟ್ಟೆಗಳನ್ನು ಕಟ್ಟಿಸಿ ರೈತರ ಬದುಕು ಹಸನಾಗಿಸುತ್ತಾ ಅವರ ಬಾಳಿಗೆ ಬೆಳಕಾದವರು ಎಂದು ಶಾಸಕರೆ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಶ್ರೀ ಶಿವ ಯೋಗಿ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದರು.ಶೋಷಿತ ವರ್ಗವನ್ನು ಸಾಮಾಜಿಕ, ಆರ್ಥಿಕವಾಗಿ ಸಮಾಜದ ಮುನ್ನೆಲೆಗೆ ತರುವ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಕಾಯಕ ಯೋಗಿ ಸಿದ್ದರಾಮೇಶ್ವರರು ವಚನಗಳ ಮೂಲಕ ಮೂಢನಂಬಿಕೆ, ಅಂಧಕಾರ ತೊಡೆದು ಹಾಕಲು ಯತ್ನಿಸಿದ್ದರು ಎಂದರು. ಸಿದ್ದರಾಮೇಶ್ವರರು ತಮ್ಮ ತತ್ವಜ್ಞಾನವನ್ನು ಸರಳ ಭಾಷೆಯಲ್ಲಿ ತಿಳಿಸಿ ಕೊಡುವ ಮೂಲಕ ಜನ ಸಾಮಾನ್ಯರ ಹೃದಯದಲ್ಲಿ ಪ್ರಜ್ವಲಿಸುತ್ತಿದ್ದಾರೆ. ಕಾಯಕವೇ ಕೈಲಾಸ ಎಂಬ ಸಿದ್ಧಾಂತವನ್ನು ಜೀವನದ ಮೂಲಕ ಸ್ವೀಕರಿಸಿ, ಸಾಮಾಜಿಕ ಸಮಾನತೆ ಮತ್ತು ಮಾನವೀಯತೆಯನ್ನು ವಚನಗಳ ಮೂಲಕ ಸಮಾಜಕ್ಕೆ ತಿಳಿಸುವ ಕೆಲಸ ಯಶಸ್ವಿಯಾಗಿ ಮಾಡಿದ್ದಾರೆ. ವಚನಗಳ ಜೀವನ ಮಾರ್ಗದರ್ಶಕ ತತ್ವ ಗಳು ಜಗತ್ತಿಗೆ ಸಾರಿದ ಸಿದ್ದರಾಮೇಶ್ವರರು ಸಂತ ಶಿವಯೋಗಿಗಳು ಎಂದು ತಿಳಿಸಿದರು. ಬಸವಾದಿ ಶರಣರು ಹಾಕಿಕೊಟ್ಟ ವಿಚಾರವನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಮಹನೀಯರ ಜಯಂತಿ ಆಚರಿಸಲಾಗುತ್ತಿದೆ. ಮಹನೀಯರ, ಮಹಾಪುರುಷರ ಜಯಂತಿಯನ್ನು ಒಂದು ಜಾತಿ, ಧರ್ಮ, ವರ್ಗಕ್ಕೆ ಸೀಮಿತಗೊಳಿಸಬಾರದು. ದಾರ್ಶನಿಕರ ವಿಚಾರಧಾರೆಗಳು ಇಡೀ ಪ್ರಪಂಚವೇ ಮೆಚ್ಚುವ ವಿಚಾರಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ₹50 ಲಕ್ಷ ವಿಶೇಷ ಅನುದಾನವನ್ನು ಸಿದ್ದರಾಮೇಶ್ವರ ಭವನಕ್ಕೆ ಮಂಜೂರು ಮಾಡಿಸಲಾಗಿದೆ. ಕಡೂರಿನಲ್ಲಿರುವ ನೊಳಂಬ ವೀರಶೈವರ ಸಮುದಾಯ ಭವನಕ್ಕೂ ಪ್ರಾಮಾಣಿಕ ಪ್ರಯತ್ನದ ಮೂಲಕ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಮಳೆಯ ದೇವರು ಎಂದು ಕರೆಸಿಕೊಂಡಿರುವ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು, ಹೋದೆಡೆಯಲ್ಲೆಲ್ಲಾ ಕೆರೆ ಕಟ್ಟಿಸುವ ಕಾಯಕದಲ್ಲಿ ನಿರತರಾಗಿ ಕೃಷಿ ಬದುಕಿಗೆ ಪ್ರಧಾನವಾದ ನೀರಾವರಿ ಯೋಜನೆಗಳ ಮೂಲಕ ಕೃಷಿಕರು ಹಾಗೂ ಜನಸಾಮಾನ್ಯರಿಗೆ ಹತ್ತಿರವಾದರು. ಆ ಕಾರಣಕ್ಕಾಗಿ ಇಂದಿಗೂ ಸಿದ್ದರಾಮೇಶ್ವರರನ್ನು ಮಳೆಯ ದೇವರು ಎಂದೇ ಸಂಬೋಧಿಸುತ್ತಾರೆ ಎಂದು ಹೇಳಿದರು. ಶರಣ ಸಿದ್ದರಾಮೇಶ್ವರರು ಮನುಷ್ಯನಾಗಿದ್ದರೂ ಅವರನ್ನು ನಾವಿಂದು ದೇವರನ್ನಾಗಿ ಮಾಡಿದ್ದೇವೆ. ಪರವಾಗಿಲ್ಲ. ದೇವರ ಮಾತನ್ನು ನಾವು ಕೇಳಬೇಕಲ್ಲವೆ ? ಹಾಗಾಗಿ ಸಿದ್ದರಾಮೇಶ್ವರರು ಹಾಕಿಕೊಟ್ಟ ಮಾರ್ಗದಲ್ಲಿ ಕಾಯಕ ಜೀವಿಗಳಾಗಿ ಜನಪರ ಯೋಚನೆವುಳ್ಳವರಾಗಿ ನಾವು ಜನರಿಗೆ ಹತ್ತಿರವಾಗಬೇಕು. ಅವರ ವ್ಯಕ್ತಿತ್ವದ ಕಾರಣಕ್ಕಾಗಲಿ, ಕಾಯಕದ ವಿಚಾರಕ್ಕಾಗಲಿ ಅಥವಾ ಇನ್ಯಾವುದೋ ಕಾರಣಕ್ಕಾಗಿಯೇ ಆಗಲಿ ಅವರನ್ನು ಅನುಸರಿಸುವವರಾಗಿ ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಸಿದ್ದರಾಮೇಶ್ವರರ ತತ್ವಾ ದರ್ಶಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಬೇಲೂರು ತಾಲೂಕು ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಸಿದ್ದರಾಮೇಶ್ವರರು ಕಾಯಕ ತತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ಹೇಳಿದರು.ನೊಳಂಬ ಸಮಾಜದ ಮುಖಂಡರಾದ ಎಸ್.ಸಿದ್ದಪ್ಪ, ಎಸ್.ಎಂ.ರಾಜಪ್ಪ, ಮಂಜುಳಮ್ಮ, ಜಿಲ್ಲಾ ಬೋವಿ ಸಂಘದ ಅಧ್ಯಕ್ಷ ಕೊಲ್ಲಾ ಬೋವಿ, ತಾಲೂಕು ಬೋವಿ ಸಮಾಜದ ಅಧ್ಯಕ್ಷ ನಾಗರಾಜ್, ಲಲಿತೇಗೌಡರು, ಶಿವಾನಂದ, ಎಸ್.ಆರ್.ಸೋಮಣ್ಣ, ಎಂ.ಸತೀಶ್, ಬಿ.ಆರ್.ಜಗದೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾ ಧಿಕಾರಿ ಸಿ.ಟಿ.ಜಯಕುಮಾರ್, ಉಪ ತಹಸೀಲ್ದಾರ್ ಪ್ರಸನ್ನ, ವಿವಿಧ ಇಲಾಖೆ ಅಧಿಕಾರಿಗಳು, ಸಮುದಾ ಯದ ಮುಖಂಡರು ಕಾರ್ಯಕ್ರಮದಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಸ್ವಾಗತಿಸಿದರು.20 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ನಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಸಮಾರಂಭದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ, ಪುಷ್ಪಗಿರಿ ಮಹಾಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.