ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯಲು ಅನರ್ಹ

| Published : May 02 2025, 11:47 PM IST

ಸಾರಾಂಶ

ಕಾಶ್ಮೀರದಲ್ಲಿ 26 ಜನರನ್ನು ಧರ್ಮದ ಆಧಾರದ ಮೇಲೆ ಹತ್ಯೆ ಮಾಡಲಾಗಿದೆ. ಇದರಿಂದ ದೇಶದ ಜನರ ರಕ್ತ ಕುದಿಯುತ್ತಿದೆ. ಕೇಂದ್ರ ಸರ್ಕಾರ ಪ್ರತಿಕಾರಕಕ್ಕಾಗಿ ಕಾಯುತ್ತಿದೆ. ಆದರೆ, ಸಿದ್ದರಾಮಯ್ಯ ಅವರು, ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಇದರಿಂದಲೇ ರಾಜ್ಯದಲ್ಲಿ ಅರಾಜಕತೆಯ ಸೃಷ್ಟಿಯಾಗಿದೆ.

ಗಂಗಾವತಿ:

ತಮಗೆ ಭದ್ರತೆ ಇಲ್ಲ, ಸಚಿವರಿಗೂ ಬಾಂಬ್‌ ಬೆದರಿಕೆ ಬರುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ಹೀಗಾದರೆ ಜನಸಾಮಾನ್ಯರ ಗತಿ ಏನೆಂದು ಪ್ರಶ್ನಿಸಿರುವ ಶಾಸಕ ಜನಾರ್ದನ ರೆಡ್ಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾದ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಸಲು ಅನರ್ಹರಾಗಿದ್ದಾರೆ ಎಂದು ಕಿಡಿಕಾರಿದರು..

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹೇಳಿಕೆ ರಾಜ್ಯದಲ್ಲಿ ಭದ್ರತಾ ವೈಫಲ್ಯ ಎತ್ತಿ ತೋರಿಸುತ್ತಿದೆ ಎಂದರು.

ಮುಖ್ಯಮಂತ್ರಿಗಳು ಈ ಹಿಂದೆ ಅಲ್ಪಸಂಖ್ಯಾತರು ಹಾಗೂ ಹಿಂದೂಗಳನ್ನು ಬೇರ್ಪಡಿಸುವ ರೀತಿಯಲ್ಲಿ ಮೀಸಲಾತಿ ಕೊಟ್ಟಿದ್ದರು. ಹಿಂದೂಗಳಲ್ಲಿ ದ್ವೇಷ ಹುಟ್ಟಿಸುವ ಕೆಲಸ ಮಾಡಿದ್ದರು ಎಂದ ಅವರು, ಕಾಶ್ಮೀರದಲ್ಲಿ 26 ಜನರನ್ನು ಧರ್ಮದ ಆಧಾರದ ಮೇಲೆ ಹತ್ಯೆ ಮಾಡಲಾಗಿದೆ. ಇದರಿಂದ ದೇಶದ ಜನರ ರಕ್ತ ಕುದಿಯುತ್ತಿದೆ. ಕೇಂದ್ರ ಸರ್ಕಾರ ಪ್ರತಿಕಾರಕಕ್ಕಾಗಿ ಕಾಯುತ್ತಿದೆ. ಆದರೆ, ಸಿದ್ದರಾಮಯ್ಯ ಅವರು, ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಇದರಿಂದಲೇ ರಾಜ್ಯದಲ್ಲಿ ಅರಾಜಕತೆಯ ಸೃಷ್ಟಿಯಾಗಿದೆ ಎಂದರು.

ಮಂಗಳೂರಿನಲ್ಲಿ ಗುರುವಾರ ನಡೆದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸುತ್ತೇವೆ ಎಂದ ಶಾಸಕರು, ಸರ್ಕಾರ ಹಿಂದೂ ಕಾರ್ಯಕರ್ತರ ಹತ್ಯೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಇತರರು ಇದ್ದರು.