ಸಾರಾಂಶ
ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಈಗ ಲೂಟಿ ರಾಮಯ್ಯ ಎನಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ : ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಈಗ ಲೂಟಿ ರಾಮಯ್ಯ ಎನಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆದ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿ, ಇಂತಹ ಬೆಲೆ ಏರಿಕೆಯನ್ನು ರಾಜ್ಯದ ಜನರು ಹಿಂದೆಂದೂ ಕಂಡಿರಲಿಲ್ಲ. ಕಾಂಗ್ರೆಸ್‌ಗೆ ಬಹುಮತ ಕೊಟ್ಟ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದ್ದಾರೆ. ಇವರನ್ನು ಜನರು ಎಂದಿಗೂ ಕ್ಷಮಿಸಲಾರರು ಎಂದು ಹೇಳಿದರು.
ಮೇಕೆದಾಟು ಹೆಸರೇಳಿಕೊಂಡು ಡಿ.ಕೆ.ಶಿವಕುಮಾರ್ ಹೋರಾಟ ಮಾಡಿದರು. ಮೇಕೆ ದಾಟಿದ ಸ್ಥಳವನ್ನು ಶಿವಕುಮಾರ್ ದಾಟಲೇ ಇಲ್ಲ. ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಅಡ್ಡಿಪಡಿಸಿರುವುದು ತಮಿಳುನಾಡಿನ ಸ್ಟ್ಯಾಲಿನ್. ತಮಿಳುನಾಡಿಗೆ ಹೋಗಿ ಬ್ರದರ್ ಎಂದು ಹೇಳಿ ಬಿರಿಯಾನಿ ತಿಂದು ಬರುತ್ತಾರೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿಸಿದವನನ್ನೂ ಬ್ರದರ್ ಎಂದು ಕರೆಯುತ್ತಾರೆ. ಕೇಂದ್ರದವರು ನಮಗೆ ಅನುಮತಿ ಕೊಡಲಿಲ್ಲ ಎಂದು ಜನರೆದುರು ನಾಟಕವಾಡುತ್ತಾರೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಮಂಡ್ಯ ವಿವಿಗೆ ೫೫ ಕೋಟಿ ರು. ಅನುದಾನ ನೀಡಿದೆ. ಅದನ್ನು ನುಂಗಿಹಾಕಿದ ಕಾಂಗ್ರೆಸ್ಸಿಗರು ವಿವಿ ಬಾಗಿಲು ಮುಚ್ಚಿದ್ದಾರೆ. ಕೆರಗೋಡಿನಲ್ಲಿ ಹನುಮಧ್ವಜವನ್ನು ಕಿತ್ತುಹಾಕಿದರು. ಹಿಂದುವಾಗಿ ಹುಟ್ಟಿದ್ದೀನಿ, ಹಿಂದೂ ಆಗೇ ಸಾಯುತ್ತೇನೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ನಾನು ಟೋಪಿ ಹಾಕಿದ್ದೀನಿ, ಟೋಪಿ ಹಾಕೇ ಸಾಯುತ್ತೇನೆ ಎನ್ನುತ್ತಾರೆ. ಇವರು ಅಧಿಕಾರಕ್ಕೆ ಬರಲು ಹಿಂದೂಗಳ ಮತ ಪಡೆದಿಲ್ಲವೇ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ೫೦ ಅಗತ್ಯ ವಸ್ತುಗಳ ಮೇಲೆ ತೆರಿಗೆ ಹಾಕಿದ್ದಾರೆ. ಸಕಾಲ ಸೇವೆ ಸತ್ತುಹೋಗಿದೆ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಮೇಲೆ ಶೇ.೪೦ರಷ್ಟು ಆರೋಪ ಹೊರಿಸಿ ಅಧಿಕಾರಕ್ಕೆ ಬಂದು ೮೦ ಪರ್ಸೆಂಟ್ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸದನದಲ್ಲಿ ವಿಷಯವಾರು ಚರ್ಚೆಗೆ ಅವಕಾಶ ನೀಡುವುದಿಲ್ಲ. ಹಾಡುಹಗಲೇ ಪುಂಡು ಪೋಕರಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ, ಇದೆಲ್ಲಾ ದೊಡ್ಡ ನಗರಗಳಲ್ಲಿ ಮಾಮೂಲಿ ಎಂದು ಗೃಹಸಚಿವರೇ ಹೇಳುತ್ತಾರೆ. ತಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ಈ ರೀತಿ ಆದರೆ ಏನು ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಮಾಜಿ ಸಚಿವರಾದ ಶ್ರೀರಾಮುಲು, ಮುರುಗೇಶ್ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಮುಖಂಡರಾದ ಡಾ.ಸಿದ್ದರಾಮಯ್ಯ, ಸಾದೊಳಲು ಸ್ವಾಮಿ, ರವಿಕುಮಾರ್, ಎಸ್.ಸಚ್ಚಿದಾನಂದ, ಎಚ್.ಟಿ.ಅಶೋಕ್‌ಕುಮಾರ್, ಸಿ.ಟಿ. ಮಂಜುನಾಥ್, ಆರ್ಮುಗಂ ಕಿಶೋರ್, ವಿವೇಕ್ ಸೇರಿದಂತೆ ಹಲವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.