ಸಿಎಂ ಸಿದ್ದರಾಮಯ್ಯರೇ ಅವಧಿಪೂರ್ಣ ಸಿಎಂ: ರಾಯರಡ್ಡಿ

| Published : Apr 17 2024, 01:19 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉಳಿದ 4 ವರ್ಷ 2 ತಿಂಗಳು ಸಿಎಂ ಆಗಿರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ.

- ಮೋದಿ ಆಡಳಿತದಲ್ಲಿ ದೇಶ ಬಡವಾಗಿದೆಕನ್ನಡಪ್ರಭ ವಾರ್ತೆ ಕೊಪ್ಪಳ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉಳಿದ 4 ವರ್ಷ 2 ತಿಂಗಳು ಸಿಎಂ ಆಗಿರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಕೊಪ್ಪಳದಲ್ಲಿ ಕಾಂಗ್ರೆಸ್ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕು. ಅವರಂತಹ ಜನಪರ ವ್ಯಕ್ತಿ ಮತ್ತೊಬ್ಬರಿಲ್ಲ. ನಾನು ಸಿದ್ದರಾಮಯ್ಯ ಅವರು ಸಿಎಂ ಆಗಿರಬೇಕು ಎಂದುಕೊಂಡವನು, ನಾನೇನು ಮಂತ್ರಿಯಾಗಬೇಕು ಎಂದೇನಿಲ್ಲ. ಮಂತ್ರಿಯಾಗಿ ದುಡ್ಡು ಮಾಡುವ ಅಗತ್ಯವೂ ನನಗಿಲ್ಲ. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹುದ್ದೆಯನ್ನು ನಾನು ಕೇಳಿ ಪಡೆದಿಲ್ಲ, ಕೇಳಿದರೆ ಇಂದೇ ರಾಜೀನಾಮೆ ನೀಡುತ್ತೇನೆ ಎಂದರು.

ನಾನು ಮತ್ತು ಸಿದ್ದರಾಮಯ್ಯ ಏಕಕಾಲಕ್ಕೆ ರಾಜಕೀಯಕ್ಕೆ ಬಂದಿದ್ದು, ನಾವ್ಯಾರು ದುಡ್ಡು ಮಾಡಲು ರಾಜಕೀಯಕ್ಕೆ ಬಂದಿಲ್ಲ. ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಬಡವಾಗಿದೆ. ಶ್ರೀಲಂಕಾ, ಬಾಂಗ್ಲಾದೇಶಕ್ಕಿಂತಲೂ ನಾವು ಬಡವರು, ಸುಮ್ಮನೇ ಪಾಕಿಸ್ಥಾನದ ಕುರಿತು ಮಾತನಾಡುತ್ತೇವೆ ಎಂದು ಕಿಡಿಕಾರಿದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶ ದೀವಾಳಿಯಾಗುತ್ತಿದೆ. ₹ 1.38 ಲಕ್ಷ ಕೋಟಿ ರುಪಾಯಿ ಸಾಲ ಮಾಡಲಾಗಿದೆ. ಮೋದಿ ಬಂದ ಮೇಲೆ ದೇಶದಲ್ಲಿ ಒಂದು ಡ್ಯಾಮ್ ಕಟ್ಟಿಲ್ಲ, ಯಡಿಯೂರಪ್ಪ ಅವರು ರಾಜ್ಯದಲ್ಲಿ ಏನು ಮಾಡಿಲ್ಲ, ಆದರೆ, ಸಿಎಂ ಸಿದ್ದರಾಮಯ್ಯ ಅವರ ಕಾಲದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.

ರೆಡ್ಡಿ ಹಾಗೆಲ್ಲ ಮಾತನಾಡಬಾರದು:

ರಾಯರಡ್ಡಿಯೇ ರಾಜಶೇಖರ ಹಿಟ್ನಾಳರನ್ನು ಸೋಲಿಸುತ್ತಾರೆ ಎಂದು ಗಂಗಾವತಿ ಶಾಸಕ ಹೇಳಿದ್ದಾರೆ. ಹಾಗೆಲ್ಲ ಹುಚ್ಚು ಹುಚ್ಚಾಗಿ ಹೇಳಬಾರದು. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರ ಮತಗಳ ಅಂತರವನ್ನು ನೀಡುತ್ತೇವೆ ಎಂದು ಹೇಳಿದರು.

ಯಾರು ಯಾರನ್ನು ಸೋಲಿಸುವುದಿಲ್ಲ, ನಾನು ಸೋಲಿಸಿ, ಮಂತ್ರಿಯಾಗುತ್ತೇನೆ ಎಂದೆಲ್ಲ ಹೇಳಿದ್ದಾರೆ. ಇದು ಸರಿಯಲ್ಲ. ನಾನು ಮಂತ್ರಿಯಾಗುವ ಆಸೆಯನ್ನೇ ಹೊಂದಿಲ್ಲ. ಈಗಲೂ ಹೇಳುತ್ತೇನೆ, ನನಗೆ ಸಿದ್ದರಾಮಯ್ಯ ಸಿಎಂ ಆಗಿರಬೇಕು. ಅದನ್ನು ಬಿಟ್ಟು ಬೇರೆ ಆಸೆ ಇಲ್ಲ. ಮಂತ್ರಿ ಪದವಿ ಬಗ್ಗೆ ನನಗೆ ಆಸೆಯೇ ಇಲ್ಲ ಮತ್ತು ಅದನ್ನು ಕೇಳಿಯೂ ಇಲ್ಲ ಎಂದರು.

ಆದರೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರನಾಗಿ ಬಜೆಟ್‌ನಲ್ಲಿ ಗುಮಾಸ್ತನಂತೆ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರು ಮಾಲೀಕರಂತೆ ಸಹಿ ಹಾಕಿದ್ದಾರೆ. ಅವರಾಗಿಯೇ ನನ್ನನ್ನು ಆರ್ಥಿಕ ಮಂತ್ರಿ ಮಾಡಿದರೆ ಆಗುತ್ತೇನೆ, ಹಾಗೊಂದು ವೇಳೆ ಅವಕಾಶ ಸಿಕ್ಕರೆ 65 ವರ್ಷ ಮೇಲ್ಪಟ್ಟವರಿಗೆ ಬಸ್ಸಿನ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದೇನೆ, ಯಾರೋ ಹೇಳಿದ್ದನ್ನು ಕೇಳಬಾರದು ಎಂದು ಹೇಳಿದ್ದೇನೆ, ಆತ ಆಯ್ತಣ್ಣಾ ಎಂದಿದ್ದಾನೆ. ಹಾಗಂತ ನಾನು ಆತನ ಮೇಲೆ ಕೋಪಿಸಿಕೊಂಡಿದ್ದೇನೆಂದಲ್ಲ. ನಮ್ಮಲ್ಲಿಯೇ ಒಂದಷ್ಟು ಮನಸ್ತಾಪ ಇದ್ದರೂ ಸಹ ನಾವೆಲ್ಲ ಒಗ್ಗಟ್ಟಾಗಿಯೇ ರಾಜಶೇಖರರನ್ನು ಗೆಲ್ಲಿಸುತ್ತೇವೆ. ಗಂಗಾವತಿಯಲ್ಲಿಯೂ ಇಕ್ಬಾಲ್ ಅನ್ಸಾರಿ ಸಹ ಕಾಂಗ್ರೆಸ್ ಗೆಲುವಿಗೆ ಶ್ರಮಿಸುತ್ತಾರೆ ಎನ್ನುವ ವಿಶ್ವಾಸವಿದೆ. ಅವರೊಂದಿಗೆ ಸಹ ಮಾತನಾಡಿದ್ದೇನೆ ಎಂದರು.