ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ನೀಡುವ ಮೂಲಕ ಅವರಿಗೆ ಆಗಬಹುದಾದ ರಾಜಕೀಯ ಹಾನಿಯನ್ನು ನಿಯಂತ್ರಿಸುವ ಪ್ರಯತ್ನ ನಡೆದಿದೆ. ಇದನ್ನು ಮಾಡಿದವರು ಯಾರು ಎಂಬುದು ಜನರಿಗೆ ತಿಳಿಯಬೇಕಿದೆ. ಆದರೂ ಅಪಘಾತವಾದ ವಾಹನಕ್ಕೆ ಟಿಂಕರಿಂಗ್ ಮಾಡಿ ಪೈಂಟ್‌ ಮಾಡಿದರೂ ಅದನ್ನು ಅಪಘಾತವಾದ ವಾಹನ ಎಂದೇ ಕರೆಯಲಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಶಾಸಕರಾದ ಎ.ಮಂಜು ಮಾರ್ಮಿಕವಾಗಿ ಹೇಳಿದರು. ಗ್ಯಾರಂಟಿ ಯೋಜನೆಗಳಿಗೆ ಹಣ ವೆಚ್ಚ ಮಾಡಿರುವುದರಿಂದ ಸರ್ಕಾರದ ಬಳಿ ಸಂಪನ್ಮೂಲದ ಕೊರತೆ ಎದುರಾಗಿದೆ. ಗ್ಯಾರಂಟಿ ಘೋಷಿಸುವ ಮುನ್ನ ಸಂಪನ್ಮೂಲ ಸಂಗ್ರಹದ ಬಗ್ಗೆ ಚಿಂತಿಸಬೇಕಿತ್ತು. ಸಾಲ ಮಾಡಿ ಊಟ ಮಾಡುವುದು ಒಳ್ಳೆಯದಲ್ಲ ಎಂದು ಟೀಕಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ನೀಡುವ ಮೂಲಕ ಅವರಿಗೆ ಆಗಬಹುದಾದ ರಾಜಕೀಯ ಹಾನಿಯನ್ನು ನಿಯಂತ್ರಿಸುವ ಪ್ರಯತ್ನ ನಡೆದಿದೆ. ಇದನ್ನು ಮಾಡಿದವರು ಯಾರು ಎಂಬುದು ಜನರಿಗೆ ತಿಳಿಯಬೇಕಿದೆ. ಆದರೂ ಅಪಘಾತವಾದ ವಾಹನಕ್ಕೆ ಟಿಂಕರಿಂಗ್ ಮಾಡಿ ಪೈಂಟ್‌ ಮಾಡಿದರೂ ಅದನ್ನು ಅಪಘಾತವಾದ ವಾಹನ ಎಂದೇ ಕರೆಯಲಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಶಾಸಕರಾದ ಎ.ಮಂಜು ಮಾರ್ಮಿಕವಾಗಿ ಹೇಳಿದರು.ಶುಕ್ರವಾರ ಹಾಸನಾಂಬಾ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ ಮಾಸ್ ಲೀಡರ್‌. ಅವರು ಇಲ್ಲದಿದ್ದರೆ ಕಾಂಗ್ರೆಸ್‌ಗೆ ೧೩೬ ಸ್ಥಾನಗಳ ಬದಲಿಗೆ ೩೬ ಸ್ಥಾನಗಳೂ ಬರುತ್ತಿರಲಿಲ್ಲ. ಅವರ ನಾಯಕತ್ವದಿಂದಲೇ ಪಕ್ಷಕ್ಕೆ ಅಷ್ಟು ಸ್ಥಾನಗಳು ಬಂದಿವೆ. ನೆಗೆಟಿವ್ ಆಗಿದ್ದ ಮತಗಳನ್ನು ಪಾಸಿಟಿವ್ ಆಗಿ ಪರಿವರ್ತಿಸುವಲ್ಲಿ ಅವರ ಪಾತ್ರವಿದೆ. ಗ್ಯಾರಂಟಿ ಯೋಜನೆಗಳಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಒಪ್ಪುವುದಿಲ್ಲ. ಸ್ಟಿಂಗ್ ಮಾಡಿದವರ ಪರವಾಗಿಯೇ ಸರ್ಕಾರ ಇದೆ ಎಂದೂ ಆರೋಪಿಸಿದರು. ಹಾಲು ಉತ್ಪಾದಕರಿಗೆ ಕೊಡಲು ಸರ್ಕಾರದ ಬಳಿ ಹಣವಿರಲಿಲ್ಲ:

ಹಾಲಿನ ದರ ಏರಿಕೆ ವಿಚಾರವಾಗಿ ಮಾತನಾಡಿ, ಹಾಲಿನ ದರವನ್ನು ೮ ರು. ಹೆಚ್ಚಿಸಿರುವುದನ್ನು ನಿಜವಾಗಿಯೂ ಸ್ವಾಗತಿಸುತ್ತೇನೆ. ಆದರೆ ಗ್ರಾಹಕರಿಗೆ ಹೊರೆಯಾಗದಂತೆ ರೈತರು ಮತ್ತು ಗ್ರಾಹಕರ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಗ್ರಾಹಕರು ಹೆಚ್ಚಿನ ದರ ನೀಡಿ ಹಾಲು ಖರೀದಿಸುವ ಮೂಲಕ ರೈತರಿಗೆ ನೆರವಾಗುತ್ತಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸಬೇಕು. ಸರ್ಕಾರವೇ ರೈತರಿಗೆ ನೆರವು ನೀಡಬೇಕಿತ್ತು. ಆದರೆ ಗ್ಯಾರಂಟಿ ಯೋಜನೆಗಳಿಗೆ ಹಣ ವೆಚ್ಚ ಮಾಡಿರುವುದರಿಂದ ಸರ್ಕಾರದ ಬಳಿ ಸಂಪನ್ಮೂಲದ ಕೊರತೆ ಎದುರಾಗಿದೆ. ಗ್ಯಾರಂಟಿ ಘೋಷಿಸುವ ಮುನ್ನ ಸಂಪನ್ಮೂಲ ಸಂಗ್ರಹದ ಬಗ್ಗೆ ಚಿಂತಿಸಬೇಕಿತ್ತು. ಸಾಲ ಮಾಡಿ ಊಟ ಮಾಡುವುದು ಒಳ್ಳೆಯದಲ್ಲ ಎಂದು ಟೀಕಿಸಿದರು.ಜಿಲ್ಲಾಡಳಿತದ ವ್ಯವಸ್ಥೆಗೆ ಮೆಚ್ಚುಗೆ

ಹಾಸನಾಂಬಾ ದೇವಿ ದರ್ಶನಕ್ಕೆ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿರುವುದನ್ನು ಸ್ವಾಗತಿಸುತ್ತೇನೆ. ಭಕ್ತರಿಗೆ ಅಗತ್ಯವಾದ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿರುವುದು ಸಂತಸದ ಸಂಗತಿ. ಭಕ್ತರು ನೀಡಿರುವ ಕಾಣಿಕೆಗಳಿಂದಲೇ ಇಷ್ಟೊಂದು ವ್ಯವಸ್ಥೆ ಮಾಡಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸಚಿವರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಉತ್ತಮ ವ್ಯವಸ್ಥೆ ಮೂಲಕ ಹಾಸನಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.