ಸಿದ್ದರಾಮಯ್ಯ ಕೇಂದ್ರದ ಜಾತಿ ಗಣತಿ ಸ್ವಾಗತಿಸುವುದು ಅನಿವಾರ್ಯ: ಸಂಸದ ಕೋಟ

| Published : May 02 2025, 12:16 AM IST

ಸಿದ್ದರಾಮಯ್ಯ ಕೇಂದ್ರದ ಜಾತಿ ಗಣತಿ ಸ್ವಾಗತಿಸುವುದು ಅನಿವಾರ್ಯ: ಸಂಸದ ಕೋಟ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಜಾತಿಗಣತಿ ತೀರ್ಮಾನ ಸ್ವಾಗತಿಸುವುದಾಗಿ ಹೇಳಿದ್ದಾರೆ. ಹಾಗೇ ಹೇಳದೆ ಅವರಿಗೆ ಬೇರೆ ದಾರಿಯೇ ಇಲ್ಲ. ರಾಜ್ಯದಲ್ಲಿ 10 ವರ್ಷದಿಂದ ಗಣತಿಯನ್ನೇ ಮಾಡಿದ್ದು ಬಿಟ್ಟರೇ ಅದು ಪ್ರಕಟವೂ ಅಗಿಲ್ಲಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಜನಗಣತಿಯ ಜೊತೆಗೆ ಜಾತಿ ಗಣತಿ ಯೋಜನೆ ಅತ್ಯಂತ ಸ್ವಾಗತಾರ್ಹವಾದುದು. ಇದರಿಂದ ಇದುವರೆಗೆ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಶಕ್ತಿ ಪ್ರದರ್ಶನಕ್ಕೆ ಅವಕಾಶವೇ ಇಲ್ಲದಿದ್ದ ಹಿಂದುಳಿದ ಸಮಾಜಗಳು ಗುರುತಿಸಲ್ಪಟ್ಟು ಶಕ್ತಿ ಪಡೆಯಲಿವೆ ಮತ್ತು ಸಮಬಾಳು ಸಮಪಾಲು ಸಾಕಾರವಾಗಲಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಜಾತಿಗಣತಿ ತೀರ್ಮಾನ ಸ್ವಾಗತಿಸುವುದಾಗಿ ಹೇಳಿದ್ದಾರೆ. ಹಾಗೇ ಹೇಳದೆ ಅವರಿಗೆ ಬೇರೆ ದಾರಿಯೇ ಇಲ್ಲ. ರಾಜ್ಯದಲ್ಲಿ 10 ವರ್ಷದಿಂದ ಗಣತಿಯನ್ನೇ ಮಾಡಿದ್ದು ಬಿಟ್ಟರೇ ಅದು ಪ್ರಕಟವೂ ಅಗಿಲ್ಲ, ಅದರ ಮೇಲೆ ಯಾವುದೇ ನಿರ್ಣಯ ಅಥವಾ ಕ್ರಮವನ್ನೂ ಜರುಗಿಸಲಿಕ್ಕಾಗಿಲ್ಲ. ತಮ್ಮ ಕುರ್ಚಿಗೆ ಗಂಡಾಂತರ ಬಂದಾಗಲೆಲ್ಲಾ ಗಣತಿ ವರದಿ ಜಾರಿ ಮಾಡುತ್ತೇವೆ ಅಂತಿದ್ದಾರೆ ಎಂದು ಟೀಕಿಸಿದರು.

ಈಗ ಕೇಂದ್ರ ಸರ್ಕಾರ ನಿಜವಾದ ಜಾತಿಗಣತಿ ಮಾಡಲಿಕ್ಕೆ ಹೊರಟಿದೆ, ಜೊತೆಗೆ ಅವರು ತಾವು ಮಾಡಿರುವುದು ಜಾತಿ ಗಣತಿಯಲ್ಲ, ಅದು ಸಾಮಾಜಿಕ ಶೈಕ್ಷಣಿಕ ವರದಿ ಎನ್ನುತ್ತಿದ್ದಾರೆ, ಆದ್ದರಿಂದ ತಮ್ಮ ಪ್ರಯೋಗಗಳೆಲ್ಲಾ ವಿಫಲವಾಗುತ್ತವೆ ಎಂದು ಗೊತ್ತಾಗಿ ಕೇಂದ್ರ ಸರ್ಕಾರದ ಜಾತಿಗಣತಿಯನ್ನು ಸ್ವಾಗತಿಸುವುದು ಅನಿವಾರ್ಯವಾಗಿದೆ ಎಂದು ಕೋಟ ವಿಮರ್ಶಿಸಿದರು.ರಾಹುಲ್ ಗಾಂಧಿ ಜಾತಿಗಣತಿ ಮಾಡಿ ಎಂದು ಮೊದಲೇ ಹೇಳಿದ್ದು ನಿಜ ಇರಬಹುದು, ಆದರೆ ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಅದನ್ನು 10 ವರ್ಷಗಳಿಂದ ಮಾಡಿದ್ದರೂ ಅದರಿಂದ ಯಾವುದೇ ನಿರ್ಧಾರ ಕ್ರಮ ಕೈಗೊಳ್ಳಲಿಕಾಗಿಲ್ಲ ಎಂಬುದೂ ನಿಜವಲ್ಲವೇ ಎಂದು ಕೋಟ ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಬಿಹಾರ ಚುನಾವಣೆಗಾಗಿ ಜಾತಿ ಗಣತಿ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಕೋಟ, ಇಷ್ಟು ದೊಡ್ಡ ದೇಶದಲ್ಲಿ ಯಾವುದೇ ಒಂದು ಕಡೆಯಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ, ಆ ಒಂದು ರಾಜ್ಯದ ಚುನಾವಣೆಗಾಗಿ ಇಡೀ ದೇಶಕ್ಕೆ ಅನ್ವಯವಾಗುವಂತಹ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುವುದಕ್ಕಾಗುವುದಿಲ್ಲ ಎಂದರು.......................

ಯುದ್ಧ ಹೇಳಿ ಮಾಡುವಂತಹದ್ದಲ್ಲ !

ಪಹಲ್ಗಾಮ್‌ ಮತ್ತು ನೀನು ಹಿಂದೂವಾ ಎಂದು ಕೇಳಿ ಕೊಂದ ಕೆಟ್ಟ ಪರಂಪರೆಯ ಭಯೋತ್ಪಾದಕರನ್ನು ಏನು ಮಾಡಬೇಕು, ಪಾಕಿಸ್ತಾನಕ್ಕೆ ಯಾವ ರೀತಿ ಉತ್ತರ ಕೊಡಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ಬಹಿರಂಗವಾಗಿ ಹೇಳಿ ಮಾಡುವಂತಹದ್ದಲ್ಲ, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಅದೆಲ್ಲವೂ ಗೌಪ್ಯವಾಗಿ ನಡೆಯುತ್ತದೆ. ರಾಷ್ಟ್ರಭಕ್ತ ಪ್ರಧಾನಿ ನರೇಂದ್ರ ಮೋದಿ ತಾನು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಪ್ರಚಾರ ಬಯಸುವವರೂ ಅಲ್ಲ ಎಂದು ಕೋಟ ಹೇಳಿದರು.

................

ಕುಡುಪು ಗುಂಪು ಹಲ್ಲೆಗೆ ಸಮರ್ಥನೆ ಇಲ್ಲ

ಮಂಗಳೂರಿನ ಕುಡುಪು ಎಂಬಲ್ಲಿ ನಡೆದ ಗುಂಪು ಹಲ್ಲೆ, ಹತ್ಯೆಯ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಕೋಟ, ಯಾವುದೇ ಧರ್ಮದವರ ಹತ್ಯೆಯನ್ನು ಯಾರೇ ಮಾಡಿರಲಿ ಅದನ್ನು ನಾಗರಿಕ ಸಮಾಜ ಸಮರ್ಥನೆ ಮಾಡಿಕೊಳ್ಳುವುದಕ್ಕಾಗುವುದಿಲ್ಲ, ಅದರಲ್ಲಿ ಚರ್ಚೆಯೇ ಇಲ್ಲ, ತನಿಖೆ ನಡೆಯಬೇಕು, ಕಾನೂನು ಕ್ರಮ ಆಗಬೇಕು ಎಂದರು.

ಆದರೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಭಾರತ ನೆಲದಲ್ಲಿ ನಿಂತು ಪಾಕಿಸ್ತಾನಕ್ಕೆ ಜೈ ಎನ್ನುವುದು ನಿಲ್ಲಬೇಕು, ಅಂತಹವರಿಗೆ ರಕ್ಷಣೆ ಮೀಡುವುದಿಲ್ಲ ಎಂದು ಹೇಳಿದ್ದಾರೆ, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಕೋಟ ಹೇಳಿದರು.