ಸಾರಾಂಶ
ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸತ್ಯ ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಸೋಲಿನ ಭಯದಿಂದ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಸದಾಕಾಲ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದರು.
ಎನ್‌ಡಿಆರ್‌ಎಫ್‌ನಲ್ಲಿ ಶೇ.75 ದುಡ್ಡು ಕೊಡುತ್ತೇವೆ. ಇವರು ಹೇಗೆ ಖರ್ಚು ಮಾಡುತ್ತಾರೆಯೋ ಹಾಗೆ ದುಡ್ಡು ಕೊಡುತ್ತಾ ಹೋಗುತ್ತದೆ. ಹಿಂದೆ ಯಡಿಯೂರಪ್ಪ ಸರ್ಕಾರವಿದ್ದಾಗಲೂ ಮನೆ ಬಿದ್ದವರಿಗೆ ₹ 5 ಲಕ್ಷ, ಎಕರೆಗೆ ₹5 ಸಾವಿರ ಪರಿಹಾರ ನೀಡಿದ್ದೇವು. ಆದರೆ, ಕಾಂಗ್ರೆಸ್ ಸರ್ಕಾರ ಯಾಕೆ ಬರ ಪರಿಹಾರ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ? ನೀತಿ ಸಂಹಿತೆ ಮುಗಿದ ನಂತರ ಎಲ್ಲ ವಿಚಾರದ ಕುರಿತು ಸ್ಪಷ್ಟಪಡಿಸುತ್ತೇವೆ ಎಂದರು.
ಅಭಿನಂದನೆ: ಸುಮಲತಾ ಬಿಜೆಪಿ ಸೇರ್ಪಡೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸುಮಲತಾ ಅವರ ಸಮಸ್ಯೆ ಸುಖಾಂತ್ಯವಾಗುತ್ತದೆ ಎಂದು ಹಿಂದೆಯೂ ಹೇಳಿದ್ದೆ. ಅದರಂತೆಯೇ ಆಗಿದೆ. ಬಿಜೆಪಿಗೆ ಪೂರ್ಣ ಬಹುಮತವಿದ್ದಾಗಲೂ, ಅವರು ನಮ್ಮನ್ನು ಬೆಂಬಲಿಸಿದ್ದಾರೆ. ಸಂಸತ್ತಿನಲ್ಲಿ ಮತದಾನ ವಿಚಾರ ಬಂದಾಗ ಸುಮಲತಾ ನಮ್ಮನ್ನು ಬೆಂಬಲಿಸಿದ್ದರು. ಈಗ ನಮ್ಮ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಅವರು ಏನು ಕಂಡೀಷನ್ ಹಾಕಿದ್ದಾರೋ ಗೊತ್ತಿಲ್ಲ ಎಂದರು.
ಈಶ್ವರಪ್ಪ ನಮ್ಮ ಪಕ್ಷದಲ್ಲೇ ಇದ್ದಾರೆ. ಅವರ ಸಮಸ್ಯೆಯೂ ಬಗೆಹರಿಯುತ್ತದೆ. ಎಲ್ಲವೂ ಸುಖಾಂತ್ಯವಾಗುತ್ತದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.