ಸಾರಾಂಶ
ರಾಯಚೂರಿನಲ್ಲಿ ಶೀಘ್ರ ಆಯೋಜನೆ । ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪರಿಶಿಷ್ಟರಿಗೆ ಒಳ ಮೀಸಲಾತಿ ಜಾರಿಗಾಗಿ ತೆಲಂಗಾಣದಲ್ಲಿ ಏ.14 ಅಂಬೇಡ್ಕರ್ ಜಯಂತಿ ದಿನದಂದು ತೀರ್ಮಾನ ಕೈಗೊಳ್ಳಲಾಗಿದ್ದು, ಅದೇ ರೀತಿ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮೀಸಲು ಸೌಲಭ್ಯ ಹಂಚಿಕೆ ಮಾಡಲು ಕ್ರಮ ಕೈಗೊಂಡಿದ್ದು, ಜೂನ್‌ನಲ್ಲಿ ಅನುಷ್ಠಾನಗೊಳ್ಳಲಿದೆ. ಒಳ ಮೀಸಲಾತಿ ಜಾರಿ ವಿಷಯದಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿಗಳಾದ ರೇವಂತ್ ರೆಡ್ಡಿ ಹಾಗೂ ಸಿದ್ದರಾಮಯ್ಯ ಅವರನ್ನು ಶೀಘ್ರ ಅಭಿನಂದಿಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.ಚಿತ್ರದುರ್ಗದಲ್ಲಿ ಬುಧವಾರ ಮಾತನಾಡಿದ ಅವರು, ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ರಾಯಚೂರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಮೂಲಕ ನೊಂದ, ಸೌಲಭ್ಯ ವಂಚಿತ, ಅಸ್ಪೃಶ್ಯ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ಅಧಿಕಾರ ಬಳಸಿದ ಇಬ್ಬರು ಮುಖ್ಯಮಂತ್ರಿಯನ್ನು ಗೌರವಿಸಿ, ಕೃತಜ್ಞತೆ ಸಲ್ಲಿಸಲಾಗುವುದು ಎಂದರು.
ಆಂಧ್ರ ಪ್ರದೇಶದಲ್ಲಿ ಮೊದಲ ಬಾರಿಗೆ ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ಆರಂಭಗೊಂಡ ಒಳ ಮೀಸಲಾತಿ ಹೋರಾಟ ದೇಶದ ವಿವಿಧ ರಾಜ್ಯಗಳಲ್ಲಿ ಕಿಚ್ಚನ್ನು ಹಚ್ಚಿದ್ದು, ಕರ್ನಾಟಕದಲ್ಲಿ ಬಹಳಷ್ಟು ನಾಯಕರು, ಹೋರಾಟಗಾರರು ಚಳವಳಿಯನ್ನು ಮುನ್ನೆಡೆಸಿದ್ದಾರೆ. ರಾಜಕಾರಣಿಗಳು ಧ್ವನಿಯೆತ್ತಿದ್ದಾರೆ. ಅವರೆಲ್ಲರ ಹೋರಾಟದ ಫಲ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಇದೆ ಎಂಬ ಮಹತ್ವದ ತೀರ್ಪನ್ನು ಆ.1, 2024ರಂದು ಸುಪ್ರೀಂ ಕೋರ್ಟ್ ನೀಡಿದ್ದು, ಈಗಾಗಲೇ ತೆಲಂಗಾಣದಲ್ಲಿ ಅನುಷ್ಠಾನಗೊಂಡಿರುವುದು ಸಂತಸದ ವಿಷಯ. ಅದೇ ರೀತಿ ರಾಜ್ಯದಲ್ಲೂ ಶೀಘ್ರ ಅನುಷ್ಠಾನಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿದ್ದು, ಸರ್ಕಾರಿ ಉದ್ಯೋಗ ನೇಮಕಾತಿಗಳಿಗೆ ಅಲ್ಲಿಯವರೆಗೆ ತಡೆ ಹಾಕಲಾಗಿದೆ. ಇಂತಹ ನಡೆಗಳು ಒಳಮೀಸಲಾತಿ ಜಾರಿಗೊಳಿಸುವುದು ಕಡ್ಡಾಯವೆಂಬ ಸಂದೇಶವನ್ನು ನೀಡುತ್ತದೆ. ಯಾವುದೆ ಸಂಶಯಗಳು ಸಮುದಾಯದವರಲ್ಲಿ ಬೇಕಿಲ್ಲ. ಒಂದೆರಡು ತಿಂಗಳು ತಡವಾಗಿರಬಹುದು. ಆದರೆ, ಜಾರಿಗೊಳಿಸುವುದು ಮಾತ್ರ ಶತಃಸಿದ್ಧ. ಈ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬದ್ಧತೆ ಪ್ರಶ್ನಾತೀತವಾಗಿದ್ದು, ನಾವೆಲ್ಲರೂ ಅವರ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ ಎಂದು ಹೇಳಿದರು.ಜೂನ್ ಮೊದಲ ವಾರದಲ್ಲಿಯೇ ಒಳಮೀಸಲಾತಿ ಜಾರಿಗೊಳ್ಳುವುದು ಖಚಿತವಾಗಿದ್ದು, ಜಾರಿಗೊಂಡ ತಕ್ಷಣವೇ ಸಿಎಂ ಸಿದ್ದರಾಮಯ್ಯ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ರಾಯಚೂರಿನಲ್ಲಿ ಅದ್ಧೂರಿ ಸಮಾರಂಭ ಏರ್ಪಡಿಸಿ ಅಭಿನಂದಿಸಲಾಗುವುದು ಎಂದು ಎಚ್.ಆಂಜನೇಯ ತಿಳಿಸಿದ್ದಾರೆ.