ಕೊಪ್ಪಳ:ಸಿದ್ದರಾಮಯ್ಯ ಅವರೇ ಐದು ವರ್ಷವೂ ಮುಖ್ಯಮಂತ್ರಿ ಆಗಿರಬೇಕು ಎನ್ನುವುದು ನನ್ನ ಅಭಿಪ್ರಾಯ. ಹಾಗೊಂದು ವೇಳೆ ಬದಲಾಯಿಸಬೇಕು ಎನ್ನುವುದಾದರೆ ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕ ಎಂದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಲೂ ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರಬೇಕು. ಅವರ ಅಧಿಕಾರವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಎಲ್ಲ ವರ್ಗಗಳ ಹಿತ ಕಾಯುತ್ತಿದ್ದಾರೆ. ಹೀಗಾಗಿ, ನಾನು ಅವರು ಇರಬೇಕು ಎಂದು ಹೇಳಿದ್ದೇನೆ ಹೊರತು ನಾನು ಯಾರು ಬೆಂಬಲಿಗ ಅಲ್ಲ, ನಾನು ಕಾಂಗ್ರೆಸ್ ಬೆಂಬಲಿಗ ಎಂದರು.

ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಹಾಗಂತ ನಾನು ಡಿ.ಕೆ. ಶಿವಕುಮಾರ ಆಗಬಾರದು ಎನ್ನುವುದಿಲ್ಲ. ಶಾಸಕರಾಗಿರುವ ಪ್ರತಿಯೊಬ್ಬರೂ ಮುಖ್ಯಮಂತ್ರಿ ಆಗಲು ಅರ್ಹರಿರುತ್ತಾರೆ ಎಂದರು.

ರಾಜ್ಯದಲ್ಲಿನ ರಾಜಕೀಯ ಕುರಿತು ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ನಾನೇ ಖುದ್ದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ, ಮುಖ್ಯಮಂತ್ರಿಯಾಗುವಂತೆ ನಾನೇ ಮನವಿ ಮಾಡಿದ್ದೇನೆ. ಆದರೆ ಖರ್ಗೆ ಅವರು, ಈ ಹಿಂದೆಯೇ ಆಗಬೇಕಾಗಿತ್ತು, ನೀವೆಲ್ಲ ಸೋತಿದ್ದರಿಂದ 2008ರಲ್ಲಿ ನಾನು ಆಗಲಿಲ್ಲ ಎಂದಷ್ಟೇ ಹೇಳಿದರು. ಸಚಿವ ಸಂಪುಟ ಪುನರ್ ರಚನೆ ಮಾಡಿ, 25 ಬೇರೆ ಶಾಸಕರಿಗೆ ಸಚಿವ ಸ್ಥಾನ ಕೊಡಿ, ಅದರಲ್ಲೂ ಹೊಸಬರು, ಹಿರಿಯರು ಸಹ ಇರಲಿ ಎಂದಷ್ಟೇ ಹೇಳಿದ್ದೇನೆ. ನನ್ನನ್ನು ಸಚಿವನ್ನಾಗಿ ಮಾಡಿ ಎಂದು ನಾನು ಕೇಳಿಲ್ಲ ಎಂದರು.

ಮಗು ಅತ್ತಾಗಲೇ ಹಾಲು ಕೊಡಬೇಕು ಎಂದೇನೂ ಇಲ್ಲ. ಒಳ್ಳೆಯ ತಾಯಿ ಮಗುವಿಗೆ ಯಾವಾಗ ಹಾಲು ಬೇಕು ಎನ್ನುವುದು ಗೊತ್ತಾಗಿ ಅಳುವ ಮೊದಲೇ ಕೊಡುತ್ತಾಳೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ಕೊಡುವುದಾದರೆ ನಿಭಾಯಿಸುವೆ ಎಂದರು.


ಸಚಿವ ಸ್ಥಾನ ನಾನು ಕೇಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀನು ಪೈನಾನ್ಸ್ ಮಿನಿಸ್ಟರ್ ಆಗಬೇಕು ಎಂದು ಹೇಳಿದ್ದರು, ಮಾಡಿಲ್ಲ. ಹಾಗಂತ ನಾನು ಕೇಳಲು ಆಗುತ್ತದೆಯೇ? ಎಂದು ಪ್ರಶ್ನೆ ಮಾಡಿದರು.

ಪ್ರಧಾನಿಯಾಗಬೇಕು: ನಾನು ಪ್ರಧಾನಿಯಾಗಬೇಕು ಅಂದುಕೊಂಡಿದ್ದೇನೆ, ಯಾಕೆ ನಾನು ಪ್ರಧಾನಿಯಾಗಬಾರದೆ ಎಂದು ಪ್ರಶ್ನೆ ಮಾಡಿದ ಅವರು, ಪ್ರತಿಯೊಬ್ಬರೂ ಆಸೆ ಪಡಬಹುದು. ಆದರೆ, ಆಗಬೇಕಲ್ಲ?ಎಂದರು.

ಪತ್ರಕರ್ತರೋರ್ವರ ಹೆಸರು ಹೇಳಿ, ಅವರು ಮುಖ್ಯಮಂತ್ರಿ ಆಗಬಾರದ್ಯಾಕೆ ಎಂದು ಪ್ರಶ್ನೆ ಮಾಡಿದರು. ಮತ್ತೆ ಸಚಿವ ಸ್ಥಾನದ ಆಕಾಂಕ್ಷಿಯೇ ಎಂದು ಕೇಳಿದಾಗ, ನಾನು ಪ್ರಧಾನಿಯಾಗಬೇಕು ಅಂದುಕೊಂಡಿದ್ದೇನೆ, ನೀವು ಸಚಿವನಾಗು ಅಂತಿರಲ್ಲ ಎಂದು ವ್ಯಂಗ್ಯವಾಡಿದರು. ನಾನಂತೂ ಸಚಿವ ಸ್ಥಾನ ಕೊಡಿ ಎಂದು ಕೇಳುವುದಿಲ್ಲ, ಕೊಟ್ಟರೆ ನಿಭಾಯಿಸುತ್ತೇನೆ ಎಂದು ಪುನರುಚ್ಚರಿಸಿದರು.