ಸಾರಾಂಶ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣದಲ್ಲಿ ಪ್ರಕರಣ ದಾಖಲಾಗಿರುವ ಸಂದರ್ಭದಲ್ಲಿ ಅವರು ತೆಗೆದು ಕೊಂಡಿರುವ ನಿಲುವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಸಂಚಾಲಕ ನಾಗೇಶ್ ಆಂಗೀರಸ ಹೇಳಿದ್ದಾರೆ.ಸಮಾಜವಾದಿ ಸಿದ್ಧಾಂತದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನ ಹಾಗೂ ಅವರ ನಿಲುವು ಇದೀಗ ಅಪ್ರಸ್ತುತವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ದಿ. ರಾಮಕೃಷ್ಣ ಹೆಗ್ಡೆಯವರ ಮೌಲ್ಯಾಧಾರಿತ ರಾಜಕಾರಣದ ಗರಡಿಯಿಂದ ಗುರುತಿಸಿಕೊಂಡ ಸಿದ್ದರಾಮಯ್ಯ ನವರು ಕಾಂಗ್ರೆಸ್ ಸೇರಿದ ಬಳಿಕ ಅದೇ ರಾಮಕೃಷ್ಣ ಹೆಗ್ಡೆಯವರು ತಂದ ಲೋಕಾಯುಕ್ತದ ಕಣ್ಣು ಮುಚ್ಚಿಸಿದ್ದಾರೆ. ಸಿದ್ದರಾಮಯ್ಯನವರ ಮೊದಲ ಹಾಗೂ ಪ್ರಸ್ತುತ ಆಡಳಿತದ ಅವಧಿಯಲ್ಲಿ ಅವರ ಸಂಪುಟ ಸಚಿವರ, ಶಾಸಕರ ಕಿರುಕುಳ ತಡೆಯಲಾರದೆ ಅನೇಕ ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿರುವುದು ಅವರ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ ಎಂದು ದೂರಿದರು.ಮುಖ್ಯಮಂತ್ರಿಗಳು ತಮ್ಮ ಸಂಪುಟದ ಸಚಿವರ ಭ್ರಷ್ಟಾಚಾರಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಎಸ್ಸಿ, ಎಸ್ಟಿ ಹಣ ಅನ್ಯ ಉದ್ದೇಶಕ್ಕೆ ಬಳಸಿ, ಇದುವರೆಗಿನ ಅವರ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಕೇರಳ, ಪಶ್ಚಿಮಬಂಗಾಳದ ಹಿಂಸಾಚಾರ ರಾಜಕೀಯ ಕರ್ನಾಟಕಕ್ಕೆ ಕಾಲಿರಿಸಲು ವೇದಿಕೆ ಒದಗಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಬ್ರಿಟೀಷರ ತಂತ್ರಗಾರಿಕೆಯಂತೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಿಂದೂ, ಮುಸ್ಲಿಂ ಸಮುದಾಯದ ನಡುವೆ ದ್ವೇಷದ ಕಿಡಿ ಹೊತ್ತಿಸಿ ಇದೀಗ ರಾಜ್ಯಾದ್ಯಂತ ಪಸರಿಸಲು ವೇದಿಕೆ ಮಾಡಿಕೊಟ್ಟಿದ್ದಾರೆ. ಕೇವಲ ಫೋನ್ ಕದ್ದಾಲಿಕೆ ಆಪಾದನೆ ಬಂದಾಗ ರಾಜಿನಾಮೆ ಸಲ್ಲಿಸಿದ್ದ ರಾಮಕೃಷ್ಣ ಹೆಗ್ಡೆಯವರ ನಿಲುವನ್ನು ಸಿದ್ದರಾಮಯ್ಯ ಅಷ್ಟು ಬೇಗ ಮರೆತರೆ ಎಂಬುದು ಪ್ರಶ್ನೆಯಾಗಿದೆ ಎಂದರು.ಮುಸ್ಲಿಂ ಸಮುದಾಯ ಕೇಳದೇ ಇದ್ದರೂ ಟಿಪ್ಪು ಜಯಂತಿ ಆಚರಣೆಗೆ ಅಡಿಗಲ್ಲು ಹಾಕಿದರು. ಕೊಡಗಿನಲ್ಲಿ ಸೌಮ್ಯವಾದಿ ಹಿಂದೂ ನಾಯಕ ಕುಟ್ಟಪ್ಪ ರನ್ನು ಬಲಿ ಪಡೆದ ನಂತರ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ ಏಕಾಯಿತು ಎಂಬುದನ್ನು ಸಿಎಂ ಅವಲೋಕಿಸಬೇಕಿದೆ. ಮುಖ್ಯಮಂತ್ರಿಗಳಿಗೆ ನೈತಿಕತೆಯಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತಾವು ಹೇಳಿಕೊಂಡ ಸಿದ್ಧಾಂತಕ್ಕೆ ಬದ್ಧರಾಗಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.