ಮುಸ್ಲಿಮರಿಗೆ ದಲಿತರ ಮೀಸಲು ನೀಡ್ತೇವೆಂಬ ಹೇಳಿಕೆ ಸುಳ್ಳು: ಸಿದ್ದರಾಮಯ್ಯ

| Published : Apr 25 2024, 02:05 AM IST / Updated: Apr 25 2024, 06:28 AM IST

ಮುಸ್ಲಿಮರಿಗೆ ದಲಿತರ ಮೀಸಲು ನೀಡ್ತೇವೆಂಬ ಹೇಳಿಕೆ ಸುಳ್ಳು: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಈವರೆಗಿನ ಯಾವ ಪ್ರಧಾನಿಯೂ ಈ ಮಟ್ಟಕ್ಕೆ ಇಳಿದಿಲ್ಲ. ಒಬಿಸಿ ಮೀಸಲು ಕಿತ್ತು ಮುಸ್ಲಿಮರಿಗೆ ಯಾವಾಗ ಕೊಟ್ಟಿದ್ದೇವೆ? ಯಾವ ರಾಜ್ಯ ಹೀಗೆ ಮಾಡಿದೆ? ಆದೇಶ ಪತ್ರ ಎಲ್ಲಿದೆ ತೋರಿಸಿ ಎಂದು ಪ್ರಧಾನಿಗೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. 

  ಬೆಂಗಳೂರು : ‘ಹಿಂದುಳಿದ ಜಾತಿ ಹಾಗೂ ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುವ ಹಸಿ ಸುಳ್ಳು ಅವರ ಅಜ್ಞಾನವನ್ನಷ್ಟೇ ಅಲ್ಲ ಸೋಲಿನ ಭೀತಿ ಹಾಗೂ ಹತಾಶೆಯನ್ನೂ ಸೂಚಿಸುತ್ತದೆ.

 ದೇಶದಲ್ಲಿ ಇಲ್ಲಿಯವರೆಗಿನ ಯಾವ ಪ್ರಧಾನಿ ಕೂಡ ತಮ್ಮ ಪಟ್ಟವನ್ನು ಇಂತಹ ಕೀಳು ಮಟ್ಟಕ್ಕೆ ಇಳಿಸಿಲ್ಲ.’ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜವಾಬ್ದಾರಿ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದೋ ಈ ಬೇಜವಾಬ್ದಾರಿತನದ ಆರೋಪವನ್ನು ಆಧಾರಗಳನ್ನು ನೀಡಿ ಸಾಬೀತುಪಡಿಸಬೇಕು. ಇಲ್ಲದೆ ಇದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದುಳಿದ ಜಾತಿ ಮತ್ತು ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ? ಯಾವ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ? ಅದಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶದ ಪತ್ರ ಇದೆಯೇ? ಈ ಎಲ್ಲ ವಿವರವನ್ನು ಪ್ರಧಾನಿಯವರು ದೇಶದ ಮುಂದೆ ಇಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಸಂವಿಧಾನದತ್ತವಾದ ಮೀಸಲಾತಿಯನ್ನು ಮನಬಂದಂತೆ ಬದಲಾವಣೆ ಮಾಡಲು ಸಾಧ್ಯ ಇಲ್ಲ.

ಮೀಸಲಾತಿಯನ್ನು ಪರಿಷ್ಕರಿಸುವ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿಯೂ ಇಲ್ಲ. ಇಂತಹದ್ದೊಂದು ಕನಿಷ್ಠ ಜ್ಞಾನ ಒಬ್ಬ ಪ್ರಧಾನಮಂತ್ರಿಗೆ ಇಲ್ಲದಿರುವುದು ಈ ದೇಶದ ದುರಂತವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ ಜಾರಿಯಲ್ಲಿದೆ. ಕೇಂದ್ರದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವಾಗಲಿ, ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವಾಗಲಿ ಇಲ್ಲಿಯವರೆಗೆ ಈ ಮೀಸಲಾತಿಯನ್ನು ಪ್ರಶ್ನಿಸಿಲ್ಲ. 

ಬಿಜೆಪಿಯೂ ಸೇರಿದಂತೆ ಯಾರೂ ಕೂಡಾ ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಿಲ್ಲ. ಈಗ ಚುನಾವಣೆಗಾಗಿ ಮತ ವಿಭಜನೆಯ ಏಕೈಕ ಉದ್ದೇಶದಿಂದ ಮೋದಿ ಹೇಳಿಕೆ ನೀಡಿರುವ ಕೀಳುಮಟ್ಟ ತೋರುತ್ತದೆ ಎಂದು ಕಿಡಿ ಕಾರಿದ್ದಾರೆ.ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ ಮೀಸಲಾತಿಯನ್ನು ಅಡ್ಡಾದಿಡ್ಡಿಯಾಗಿ ಪರಿಷ್ಕರಿಸಲು ಹೊರಟು ಸುಪ್ರೀಂಕೋರ್ಟಿನಿಂದ ಛೀಮಾರಿಗೆ ಗುರಿಯಾಗಿರುವುದನ್ನು ಮೋದಿ ಅವರು ಮರೆತಂತೆ ಕಾಣುತ್ತಿದೆ. ಒಬ್ಬ ಅನಕ್ಷರಸ್ಥ ಮಾತ್ರ ಈ ರೀತಿಯ ಆಧಾರರಹಿತ ಆರೋಪಗಳನ್ನು ಮಾಡಲು ಸಾಧ್ಯ. ಪ್ರಧಾನಿಯವರು ಸ್ವಯಂ ಪ್ರದರ್ಶಿಸುತ್ತಿರುವ ಅಜ್ಞಾನವನ್ನು ನೋಡಿದರೆ ಇವರ ಪದವಿ ಶಿಕ್ಷಣದ ಬಗೆಗಿನ ಸಂಶಯಗಳು ನಿಜ ಇರುವಂತೆ ಕಾಣಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಎಚ್.ಡಿ. ದೇವೇಗೌಡ ನಿಲುವೇನು?

ಮುಸ್ಲಿಂ ಮೀಸಲಾತಿಯನ್ನು ವಿರೋಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬಗ್ಗೆ ಮೋದಿಯವರ ಆಪ್ತಮಿತ್ರ ಮತ್ತು ಬಿಜೆಪಿಯ ಹೊಸ ಸಂಗಾತಿಯಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರತಿಕ್ರಿಯೆ ಏನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಿದ್ದೇ ನಾನು ಎಂದು ಕೊಚ್ಚಿಕೊಳ್ಳುತ್ತಿದ್ದ ದೇವೇಗೌಡರು ಈಗಲೂ ತಮ್ಮ ನಿಲುವಿಗೆ ಬದ್ಧರಾಗಿದ್ದಾರಾ? ಇಲ್ಲವೇ ನರೇಂದ್ರ ಮೋದಿಯವರಿಗೆ ಶರಣಾಗಿ ತಮ್ಮ ಹಿಂದಿನ ನಿಲುವನ್ನು ಬದಲಾಯಿಸಿಕೊಳ್ಳುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.