ಸಾರಾಂಶ
ರಾಜ್ಯದ ಮುಖ್ಯಮಂತ್ರಿಯೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಶಾಸಕರು ಸುಮ್ಮನೆ ಇರುತ್ತಾರೆಯೇ ಎಂದು ಕೇಂದ್ರ ಸಚಿವ ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು
ಹುಬ್ಬಳ್ಳಿ: ಅಧಿಕಾರಕ್ಕೆ ಬಂದ ಒಂದೂವರೆ ವರ್ಷದೊಳಗೆ ಮುಖ್ಯಮಂತ್ರಿಯ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪ ಬಂದಿರುವುದು ದುರ್ದೈವದ ಸಂಗತಿ. ಸಿದ್ದರಾಮಯ್ಯ ರಾಜ್ಯದ ಅತ್ಯಂತ ಲಜ್ಜೆಗೆಟ್ಟ ಮುಖ್ಯಮಂತ್ರಿಯಾಗಿದ್ದು, ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚಾಗುತ್ತ ಸಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಯೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಶಾಸಕರು ಸುಮ್ಮನೆ ಇರುತ್ತಾರೆಯೇ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.ಕಾಂಗ್ರೆಸ್ ಹೈಕಮಾಂಡ್ ಪಾಲುದಾರರು
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣದ ಬಗ್ಗೆಯೂ ನಾನು ಹಲವಾರು ಬಾರಿ ಹೇಳಿದ್ದೇನೆ. ಈ ಭ್ರಷ್ಟಾಚಾರದ ಹಣವನ್ನು ಕಾಂಗ್ರೆಸ್ ಹೈಕಮಾಂಡ್ಗೆ ಮುಟ್ಟಿಸಿಲ್ಲ ಎನ್ನುವುದನ್ನು ಮುಖ್ಯಮಂತ್ರಿಗಳು ಸಾಬೀತುಪಡಿಸಲಿ. ಈ ಭ್ರಷ್ಟಾಚಾರದ ಹಣದಲ್ಲೂ ಕಾಂಗ್ರೆಸ್ ಹೈಕಮಾಂಡ್ ಪಾಲುದಾರಿಕೆಯಿದೆ. ಒಂದು ವೇಳೆ ಪಾಲುದಾರಿಕೆ ಇಲ್ಲದಿದ್ದರೆ ಹೈಕಮಾಂಡ್ ಕೂಡಲೇ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದರು.ರಾಜೀನಾಮೆ ನೀಡಲಿ
ಭ್ರಷ್ಟಾಚಾರದಲ್ಲಿ ನ್ಯಾಯಾಂಗ ತನಿಖೆ ಅಂದರೆ ತಪ್ಪಿಸಿಕೊಳ್ಳಲು ರಹದಾರಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಈ ಪ್ರಕರಣವನ್ನು ಈ ಕೂಡಲೇ ಸಿಬಿಐಗೆ ನೀಡಬೇಕು. ತಪ್ಪು ಮಾಡದೆ ಹೋದರೆ ಕಾಂಗ್ರೆಸ್‌ನವರಿಗೆ ಏತಕ್ಕೆ ಭಯ? ಎರಡೂ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ನ ಹೈಕಮಾಂಡ್ ಪಾತ್ರವಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದರು.ಸಿಬಿಐ ತನಿಖೆಗೆ ವಹಿಸಿ
ಹಿಂದುಳಿದ ವರ್ಗದವರು ಮುಖ್ಯಮಂತ್ರಿಯಾಗಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳುತ್ತಿರುವುದು ಅವರ ಹೇಡಿತನ ಹಾಗೂ ಭಾಗಿಯಾಗಿರುವುದನ್ನು ಸಾಬೀತು ಪಡಿಸಿದಂತಿದೆ. ಭ್ರಷ್ಟಾಚಾರ, ಅಪರಾಧ ಕೃತ್ಯಗಳಿಗೆ ಯಾವುದೇ ಸಮಾಜ, ಜಾತಿ, ಧರ್ಮವಿಲ್ಲ. ಈ ರೀತಿ ಹಿಂದುಳಿದ ನಾಯಕ ಎನ್ನುವ ಮೂಲಕ ಈ ಕೃತ್ಯಗಳಿಂದ ತಮ್ಮನ್ನು ಸಂರಕ್ಷಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇವರು ಶುದ್ಧಹಸ್ತರಾಗಿದ್ದರೆ ಸಿಬಿಐ ತನಿಖೆಗೆ ಕೊಡಲಿ. ಆಯೋಗ, ನ್ಯಾಯಾಂಗ ತನಿಖೆ ಎಂಬುದು ತಮ್ಮನ್ನು ರಕ್ಷಿಸಿಕೊಳ್ಳಲು ಮಾಡಿರುವ ಕೆಲಸವಷ್ಟೆ ಎಂದರು.ವರ್ಗಾವಣೆ ದಂಧೆ
ರಾಜ್ಯದಲ್ಲಿ ಹರಾಜಿನ ರೀತಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಸರ್ಕಾರ ಟೆಂಡರ್ ನೀತಿ ಅನುಸರಿಸುತ್ತಿದೆ. ಟೆಂಡರ್‌ನಲ್ಲಿ ಸ್ಲ್ಯಾಬ್ ವಿಧಿಸಿದಂತೆ, ಅಧಿಕಾರಿಗಳ ವರ್ಗಾವಣೆಯಲ್ಲಿ ಸಹ ಕಾಂಗ್ರೆಸ್‌ನವರು ಆಯಾ ದರ್ಜೆ, ಶ್ರೇಣಿ, ಹುದ್ದೆ, ಪ್ರದೇಶದವರು ರೇಟ್ ಸ್ಲ್ಯಾಬ್ ಹಾಕಿ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ಹರಿಹಾಯ್ದರು.ವ್ಯವಸ್ಥೆಯ ಲೋಪ
ಹೀಗೆ ವರ್ಗಾವಣೆ ಪಡೆದ ಅಧಿಕಾರಿಗಳು ಅನಿವಾರ್ಯವಾಗಿ ಕಲೆಕ್ಷನ್‌ನಲ್ಲಿ ನಿರತರಾಗುತ್ತಾರೆ. ಇದು ಅಧಿಕಾರಿಗಳ ತಪ್ಪಲ್ಲ. ನಮ್ಮ ವ್ಯವಸ್ಥೆಯ ಲೋಪ. ಕಾಂಗ್ರೆಸ್ ಹಿಂದಿನಿಂದಲೂ ಈ ರೀತಿ ಭ್ರಷ್ಟಾಚಾರ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆಯೇ ಇಲ್ಲವಾಗಿದೆ. ಅಪರಾಧಿ ಕೃತ್ಯಗಳು ಹೆಚ್ಚುತ್ತಲೇ ಇವೆ. ಅಪರಾಧಿಗಳನ್ನು ಬೆಂಬಲಿಸುತ್ತ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿ ಹಾಕಿದ್ದಾರೆ ಎಂದು ಕಿಡಿ ಕಾರಿದರು.