ಸಾರಾಂಶ
ಹೊಸಪೇಟೆ: ರಾಜ್ಯದ ತಾಂಡಾ, ಹಟ್ಟಿ, ಹಾಡಿ, ಕ್ಯಾಂಪ್, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ 1 ಲಕ್ಷ 3 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20ರಂದು ಸರ್ಕಾರಕ್ಕೆ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮರ್ಪಣೆ ಸಂಕಲ್ಪ ಸಮಾವೇಶ ನಡೆಸಲಾಗುತ್ತಿದ್ದು, 3 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣೆ ಸಂಕಲ್ಪ ಸಮಾವೇಶಕ್ಕಾಗಿ ನಿರ್ಮಾಣವಾಗುತ್ತಿರುವ ಭವ್ಯ ವೇದಿಕೆಯನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರದಲ್ಲೇ ಆಗಿನ ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಹೊಸ ಕಾಯ್ದೆ ರಚಿಸಿ, ಕಂದಾಯ ಗ್ರಾಮಗಳನ್ನಾಗಿ ಮಾಡುವ ಸಂಕಲ್ಪ ಹೊಂದಲಾಗಿತ್ತು. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸೇಡಂನಲ್ಲಿ ಕಾರ್ಯಕ್ರಮ ಮಾಡಿ, 50 ಸಾವಿರ ಜನರಿಗೆ ಹಕ್ಕುಪತ್ರ ನೀಡಿದ್ದರು. ಆದರೆ, ಈ ಯೋಜನೆ ಸರಿಯಾಗಿ ಅನುಷ್ಠಾನ ಆಗಿರಲಿಲ್ಲ. ಈಗ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಿ ಬಡವರಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ ಎಂದರು.ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ. ಸರ್ಕಾರ ಈಗ ₹4.9 ಲಕ್ಷ ಕೋಟಿ ಗಾತ್ರದ ಬೃಹತ್ ಬಜೆಟ್ ಹೊಂದಿದೆ. ಕಳೆದ ಎರಡು ವರ್ಷದಲ್ಲಿ ಗ್ಯಾರಂಟಿಗಾಗಿ ₹90 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಈ ವರ್ಷ ಆಸ್ತಿ ಸೃಜನೆಗಾಗಿ ಬಜೆಟ್‌ನಲ್ಲಿ ₹83 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ರಾಜ್ಯ ಸರ್ಕಾರ ದಿವಾಳಿ ಆಗಿಲ್ಲ. ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಈಗ ಪ್ರಧಾನಿ ಮೋದಿ ಕೂಡ ಕರ್ನಾಟಕದ ಗ್ಯಾರಂಟಿಗಳನ್ನು ನಕಲು ಮಾಡುತ್ತಿದ್ದಾರೆ. ಇಡೀ ದೇಶಕ್ಕೆ ಕರ್ನಾಟಕ ಮಾದರಿ ಆಗಿದೆ. ಬಿಜೆಪಿಯವರು ಗ್ಯಾರಂಟಿ ವಿಷಯದಲ್ಲಿ ಡೋಂಗಿತನ ಪ್ರದರ್ಶಿಸುತ್ತಿದ್ದಾರೆ ಎಂದರು.
ಕೆಕೆಆರ್‌ಡಿಬಿಗೆ ಐದು ಸಾವಿರ ಕೋಟಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿಗೆ ಐದು ಸಾವಿರ ಕೋಟಿ ರು. ಮೀಸಲಿಟ್ಟಿದ್ದೇವೆ. ಈ ಹಿಂದಿನ ಬೊಮ್ಮಾಯಿ ಸರ್ಕಾರ ಚುನಾವಣೆ ವೇಳೆ ₹3 ಸಾವಿರ ಕೋಟಿ ಘೋಷಣೆ ಮಾಡಿತ್ತು. ಆದರೆ, ನಾವು ಎರಡೂ ವರ್ಷ ನುಡಿದಂತೆ ನಡೆದಿದ್ದೇವೆ. ಈ ಭಾಗದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ. 371(ಜೆ) ವಿಶೇಷ ಕಾನೂನು ತಂದು ಅಭಿವೃದ್ಧಿಪಡಿಸುತ್ತಿದ್ದೇವೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಈ ಭಾಗಕ್ಕೆ ಒಂದು ನಯಾಪೈಸೆ 371(ಜೆ) ಅಡಿ ಬಿಡುಗಡೆ ಮಾಡಿಲ್ಲ ಎಂದು ಹರಿಹಾಯ್ದರು.ಸಮರ್ಪಣೆ ಸಂಕಲ್ಪ ಸಮಾವೇಶಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ, ಜೆಡಿಎಸ್‌ನ ನಾಯಕರನ್ನು ಆಹ್ವಾನಿಸಿದ್ದೇವೆ ಎಂದರು.
ಜನರೇ ನಮ್ಮ ಮಾಲೀಕರಾಗಿದ್ದಾರೆ. ಅವರು ನಮಗೆ 138 ಸ್ಥಾನ ನೀಡಿದ್ದಾರೆ. ಇನ್ನೂ ಇಬ್ಬರು ಪಕ್ಷೇತರರು ನಮ್ಮ ಜತೆಗಿದ್ದಾರೆ. ಒಟ್ಟು 140 ಶಾಸಕರು ಇದ್ದಾರೆ. ಜನರಿಗೆ ನೀಡಿದ ಭರವಸೆ ಈಡೇರಿಸುತ್ತಿದ್ದೇವೆ ಎಂದರು.ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಘೋಷಣೆ ಮಾಡುತ್ತೇವೆ. ಶಾಸಕ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಡುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಶಕ್ತಿ ತುಂಬುತ್ತೇವೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ 71 ಸಾವಿರ ಜನರನ್ನು ಪೋಡಿ ಮುಕ್ತ ಮಾಡಿದ್ದೇವೆ. ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ಮುಂದಿದೆ. ಹೊಸಪೇಟೆಯಲ್ಲೇ ಈ ಸಮಾವೇಶ ಮಾಡುವ ಮೂಲಕ ಈ ಭಾಗದಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.ಸಚಿವರಾದ ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಎನ್.ಎಸ್. ಬೋಸರಾಜು, ಚಲುವರಾಯಸ್ವಾಮಿ, ಕೆ. ಸುಧಾಕರ, ಶಿವರಾಜ್ ತಂಗಡಗಿ, ಬೈರತಿ ಸುರೇಶ್, ಶಾಸಕರಾದ ಎಚ್.ಆರ್. ಗವಿಯಪ್ಪ, ಬಿ. ನಾಗೇಂದ್ರ, ರಾಘವೇಂದ್ರ ಹಿಟ್ನಾಳ, ಸಲೀಂ ಅಹ್ಮದ್, ಡಾ. ಎನ್.ಟಿ. ಶ್ರೀನಿವಾಸ್, ಹಂಪನಗೌಡ ಬಾದರ್ಲಿ ಮತ್ತಿತರರಿದ್ದರು.