ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಭಾಗದಲ್ಲಿ ಮಗನನ್ನು ಲೀಡರ್ ಮಾಡಲು ಸಿದ್ದರಾಮಯ್ಯ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.ಸಚಿವ ಸಂಪುಟದಲ್ಲಿ ಮೈಸೂರು ಜಿಲ್ಲೆಗೆ ಒಂದು ಸ್ಥಾನ ಮಾತ್ರ ನೀಡಿರುವ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಮಗನನ್ನು ಮಂತ್ರಿ ಮಾಡಲು ಮಲ್ಲಿಕಾರ್ಜುನ ಖರ್ಗೆ ಆ ಭಾಗದ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸಿದರು. ಅದೇ ರೀತಿ ಮೈಸೂರು ಭಾಗದಲ್ಲಿ ಮಗನನ್ನು ಲೀಡರ್ ಮಾಡಲು ಸಿದ್ದರಾಮಯ್ಯ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸಿದ್ದಾರೆ ಎಂದು ಟೀಕಿಸಿದರು.
ಡಾ. ಮಹದೇವಪ್ಪ, ಕೆ. ವೆಂಕಟೇಶ್ ಎಲ್ಲರನ್ನು ಸಿದ್ದರಾಮಯ್ಯ ಮೂಲೆ ಗುಂಪು ಮಾಡಿದ್ದಾರೆ. ಸಭ್ಯ ರಾಜಕಾರಣಿ ತನ್ವೀರ್ ಸೇಠ್ ಗೆ ಅವಕಾಶ ತಪ್ಪಿಸಿದ್ದು ಸಿದ್ದರಾಮಯ್ಯ. ದಲಿತರ ಧ್ವನಿ ಆಗಿರುವ ಮಹದೇವಪ್ಪರ ಸ್ನೇಹವನ್ನೆ ಸಿದ್ದರಾಮಯ್ಯ ಮರೆತು ಬಿಟ್ಟರು. ತನ್ನ ಮಗನ ಮೇಲೆ ಮಾತ್ರ ಕಿರೀಟ ಇರಬೇಕು ಅಂತಾ ಎಲ್ಲಾ ನಾಯಕರ ರಾಜಕೀಯ ಮುಗಿಸಿದ್ದಾರೆ. ಮಹಾದೇವಪ್ಪ, ವೆಂಕಟೇಶ್ ಅವರು ಸಿದ್ದರಾಮಯ್ಯಗೆ ಸದಾ ಜೊತೆ ಇದ್ದರು. ಸ್ನೇಹಿತರ ರಾಜಕೀಯವನ್ನೆ ಸಿದ್ದರಾಮಯ್ಯ ಮುಗಿಸಿದರು ಎಂದು ಅವರು ದೂರಿದರು.ಭ್ರಷ್ಟಾಚಾರ ಮಾಡಿ 14 ಸೈಟ್ ಪಡೆದು ಭ್ರಷ್ಟಾಚಾರ ಬಗ್ಗೆ ಮಾತಾಡುವ ನೈತಿಕತೆಯನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದರು. ಈಗ ಮಗನಿಗಾಗಿ ಎಲ್ಲರ ರಾಜಕೀಯ ಮುಗಿಸಿ ಕುಟುಂಬ ರಾಜಕೀಯದ ಬಗ್ಗೆ ಟೀಕೆ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಅವರು ಕುಟುಕಿದರು.
ಐಪಿಎಲ್ ಟಿಕೆಟ್ ಹೋರಾಟಗಾರ ಕಶ್ಯಪ್ ಗೆ ಮತ್ತು ಟ್ರಂಪ್, ಮೋದಿಗೆ ಬುದ್ಧಿ ಹೇಳುವ ಸಂತೋಷ್ ಲಾಡ್ ಗೆ ಮೊದಲು ಕನ್ನಡ ಕಲಿಸಿ. ವಯಸ್ಕರ ಶಿಕ್ಷಣ ಜಾರಿಗೆ ತಂದು ಸಚಿವರಿಗೆ ಕನ್ನಡ ಕಲಿಸಬೇಕಿದೆ. ಕಶ್ಯಪ್ಪಗೆ ಬರೀ ಆ ಮಗ, ಸೂ ಮಗ, ಬೋ ಮಗ ಅಂತಾ ಬೈಯೋದು ಗೊತ್ತು. ಕನ್ನಡ ಓದಲು ಬರಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಸಂಪುಟದಲ್ಲಿ ಒಬ್ಬ ಮಹಿಳೆಯರೂ ಇಲ್ಲ. ಕಾಂಗ್ರೆಸ್ ಮಹಿಳಾ ವಿರೋಧಿ. ಲಕ್ಷ್ಮಿ ಹೆಬ್ಬಾಳ್ಕರ್, ಗಾಯತ್ರಿ ಶಾಂತೇಗೌಡ ಇಬ್ಬರು ಮಂತ್ರಿ ಆಗುವುದಕ್ಕೆ ಕಲ್ಲು ಹಾಕಿದವರು ಸಿದ್ದರಾಮಯ್ಯ. ಕರ್ನಾಟಕದ ರಾಜಕೀಯ ಹೊಲಸು ಮಾಡಿದ್ದೆ ಸಿದ್ದರಾಮಯ್ಯ. ರಾಜಕೀಯ ಹಾಳು ಮಾಡಿ, ಈಗ ರಾಜಕೀಯ ಹೊಲಸಾಗಿದೆ ಅಂತಾ ಸಿದ್ದರಾಮಯ್ಯ ಭಾಷಣ ಮಾಡುತ್ತಾರೆ ಎಂದು ಅವರು ಟೀಕಿಸಿದರು.
ಯತೀಂದ್ರ ಮೇರಿಟ್ ಕೋಟಾದಲ್ಲಿ ಮಂತ್ರಿ ಆಗಿಲ್ಲ. ಅಪ್ಪನ ಕೋಟಾದಲ್ಲಿ ಮಂತ್ರಿ ಅಷ್ಟೆ. ಮೇರಿಟ್ ಇಲ್ಲದ ಯತೀಂದ್ರ ಈ ಭಾಗದಲ್ಲಿ ಲೀಡರ್ ಆಗಲ್ಲ ಅನ್ನೋ ಕಾರಣಕ್ಕೆ ಮಹದೇವಪ್ಪರಂಥ ದಲಿತರ ಧ್ವನಿಯನ್ನು ಸಿದ್ದರಾಮಯ್ಯ ಕುಗ್ಗಿಸಿದ್ದಾರೆ ಎಂದು ಅವರು ಆರೋಪಿಸಿದರು.ಯಾರು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ. ಇದು ಸ್ವಾಭಾವಿಕವಾಗಿ ಹಿಂದೂ ರಾಷ್ಟ್ರ. ಯತೀಂದ್ರ ಅಪ್ಪನದು ಮೊದಲಿಂದಲೂ ಇದೇ ಪಾಲಿಟಿಕ್ಸ್. ಯತೀಂದ್ರ ಅವರೇ ನಿಮಗೆ ಮಂತ್ರಿ ಸ್ಥಾನ ಸಿಕ್ಕಿದು ಇದೇ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ. ನಿಮ್ಮದು ಜಾತಿ ಖೋಟಾ. ಅಪ್ಪನ ಕೋಟಾ ನೆನಪಿರಲಿ.- ಪ್ರತಾಪ್ ಸಿಂಹ, ಮಾಜಿ ಸಂಸದರು