ಮೂರುವರೆ ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ :ಬದಲಾವಣೆಯ ಚರ್ಚೆ ನಡೆದಿಲ್ಲ - ಶಾಸಕ ರಾಜು ಕಾಗೆ

| Published : Sep 14 2024, 01:51 AM IST / Updated: Sep 14 2024, 12:45 PM IST

ಮೂರುವರೆ ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ :ಬದಲಾವಣೆಯ ಚರ್ಚೆ ನಡೆದಿಲ್ಲ - ಶಾಸಕ ರಾಜು ಕಾಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನ 135 ಜನ ಶಾಸಕರಿದ್ದೇವೆ. ಎಲ್ಲ ಶಾಸಕರಿಗೂ ಮುಖ್ಯಮಂತ್ರಿಯಾಗುವ ಆಸೆ ಇರುತ್ತದೆ. ಆದರೆ, ಅದು ಸಾಧ್ಯವಾಗದ ಮಾತು. ಪಕ್ಷದಲ್ಲಿ ಸಿಎಂ ಬದಲಾವಣೆಯ ಚರ್ಚೆ ನಡೆದಿಲ್ಲ.  

  ಕಾಗವಾಡ:  ಕಾಂಗ್ರೆಸ್‌ನ 135 ಜನ ಶಾಸಕರಿದ್ದೇವೆ. ಎಲ್ಲ ಶಾಸಕರಿಗೂ ಮುಖ್ಯಮಂತ್ರಿಯಾಗುವ ಆಸೆ ಇರುತ್ತದೆ. ಆದರೆ, ಅದು ಸಾಧ್ಯವಾಗದ ಮಾತು. ಪಕ್ಷದಲ್ಲಿ ಸಿಎಂ ಬದಲಾವಣೆಯ ಚರ್ಚೆ ನಡೆದಿಲ್ಲ. ಇದು ಕೇವಲ ವಿಪಕ್ಷಗಳ ಸೃಷ್ಟಿ. ಮುಂದಿನ ಮೂರುವರೆ ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗಿರಲಿದ್ದಾರೆ ಎಂದು ಶಾಸಕ ರಾಜು ಕಾಗೆ ಹೇಳಿದರು.

ಶುಕ್ರವಾರ ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಸಂಬರಗಿಯಲ್ಲಿ ಬಸವ ವಸತಿ ಯೋಜನೆಯಡಿ ಬಡವರಿಗೆ ಮಂಜೂರಾದ 128 ಮನೆಗಳ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ರಾಷ್ಟ್ರ ಕಂಡ ಹಿರಿಯ ಹಿಂದುಳಿದ ನಾಯಕ. ಅನವಶ್ಯಕ ಗೊಂದಲ ಸೃಷ್ಟಿ ಬೇಡ. ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಕೂದಲೆಳೆಯಷ್ಟು ವೈಮನಸಿಲ್ಲ. ಉಳಿದ ಅವಧಿಗೆ ಸಿದ್ದರಾಮಯ್ಯನವರೇ ಸಿಎಂ ಆಗಿ ಜನರಿಗೆ ನೀಡಿರುವ ಭರವಸೆ ಈಡೇರಿಸುತ್ತಾರೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿಲ್ಲ. ಸಿದ್ದರಾಮಯ್ಯನವರು ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ನೀಡಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಕೊಡುವ ಮೂಲಕ ನುಡಿದಂತೆ ನಡೆದು ದೇಶದಲ್ಲಿ ಜನಪ್ರಿಯತೆ ಗಳಿಸಿದೆ. ಇದನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರಿಗೆ ಸಹಿಸಿಕೊಳ್ಳಲು ಆಗದೆ ಹೊಟ್ಟೆಕಿಚ್ಚಿನಿಂದ ಹೇಗಾದರೂ ಮಾಡಿ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂದು ರಾಜ್ಯಪಾಲರ ಮೂಲಕ ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನ ನಿಮ್ಮನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿದ್ದಾರೆ. ಮುಡಾ ಎಂಬ ಹಗರಣವನ್ನು ಬಿಜೆಪಿ ಮತ್ತು ಜೆಡಿಸ್‌ನವರು ಸೃಷ್ಟಿ ಮಾಡಿ ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ನೀವು ಏನೇ ತಿಪ್ಪರಲಾಗ ಹಾಕಿದರೂ ಏನೂ ಆಗಲ್ಲ. ರಾಜ್ಯದ ಜನರ ಆಶೀರ್ವಾದ ನಮ್ಮ ಮೇಲಿದೆ, ಹೊಟ್ಟೆಕಿಚ್ಚು ಪಡದೆ ಗಪ್ ಚುಪ್ ಇರುವಂತೆ ವಿಪಕ್ಷಗಳಿಗೆ ತಾಕೀತು ಮಾಡಿದರು.

ಈ ವೇಳೆ ಸಂಬರಗಿ ಗ್ರಾಮ ಪಂಚಾಯತಿಯಲ್ಲಿ ಬಸವ ವಸತಿ ಯೋಜನೆಯ 128 ಫಲಾನುಭವಿಗಳಿಗೆ ಮನೆಗಳ ಆದೇಶ ಪತ್ರ ವಿತರಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ದಳವಾಯಿ, ಉಪಾಧ್ಯಕ್ಷ ಅಶೋಕ ಮಾನೆ, ಕಾಂಗ್ರೆಸ್ ವಕ್ತಾರ ರಾವಸಾಬ ಐಹೊಳೆ, ಮುಖಂಡರಾದ ವಿನಾಯಕ ಬಾಗಡಿ, ಗುಳಪ್ಪ ಜತ್ತಿ, ಶಿವಾನಂದ ಗೊಲಬಾವಿ, ಶಿದರಾಯ ತೇಲಿ, ಮಲ್ಲಿಕಾರ್ಜುನ ದಳವಾಯಿ, ಮುತ್ತಣ್ಣ ಪಾಟೀಲ, ಕಾಡಗೌಡ ಪಾಟೀಲ,ಅಮೃತ ಮಿಸಾಳ, ಅಣ್ಣಾಸಾಹೇಬ ಮಿಸಾಳ, ತುಕಾರಾಮ ಸೇಳಕೆ, ಮಿಥುನ ಕಾಂಬಳೆ, ವಿಲಾಸ ಟೋಣೆ, ರಾಮಣ್ಣ ಲಖಗೌಡರ, ಮಲ್ಲಿಕಾರ್ಜುನ ಪಾಟೀಲ, ಶ್ರೀಶೈಲ ಪಾಟೀಲ, ತಾಪಂ ಇಒ ಶಿವಾನಂದ ಕಲ್ಲಾಪುರೆ, ಪಿಡಿಒ ಧರೆಪ್ಪ ತಗಲಿ ಇತರರು ಇದ್ದರು.