ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡವಿದೆ. ಈ ಕೂಗಿಗೆ ಅವರೇ ರೂವಾರಿಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಡಿಸಿಎಂ ಸೃಷ್ಟಿ ಕೂಗು ಹೆಚ್ಚಾಗಿದೆ. ಮುಖ್ಯಮಂತ್ರಿಗಳು ಕಾಂಗ್ರೆಸ್ಸಿನವರಿಂದಲೇ ಈ ರೀತಿಯ ವಾತಾವರಣ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ಈ ಬಗ್ಗೆ ಈ ವರೆಗೂ ಉತ್ತರ ನೀಡುತ್ತಿಲ್ಲ. ಡಿಸಿಎಂ ಕುರಿತು ಹೇಳಿಕೆ ನೀಡುವವರಿಗೆ ಒಂದು ಕಡೆ ಡಿ.ಕೆ. ಶಿವಕುಮಾರ್ ನೋಟಿಸ್ ನೀಡುವುದಾಗಿ ಹೇಳುತ್ತಾರೆ. ಆದರೆ, ಸಿದ್ದರಾಮಯ್ಯ ಬಣದವರು ಅದಕ್ಕೆ ಸವಾಲು ಹಾಕುತ್ತಾರೆ. ಇದನ್ನೆಲ್ಲ ಗಮನಿಸಿದರೆ ಕಾಂಗ್ರೆಸ್‌ನಲ್ಲಿ ಬಣಗಳಿರುವುದು ಸ್ಪಷ್ಟ ಎಂದರು.
ಬಾಲಿಶತನದ ಹೇಳಿಕೆ:ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಬಿಜೆಪಿಯವರ ಕೈವಾಡವಿದೆ ಎಂಬ ಕಾಂಗ್ರೆಸ್ ಶಾಸಕರ ಆರೋಪ ಬಾಲಿಶತನದಿಂದ ಕೂಡಿದೆ. ಕಾಂಗ್ರೆಸ್ ತನ್ನ ಎಡೆಯಲ್ಲಿ ಕತ್ತೆ ಸತ್ತು ಬಿದ್ದರೆ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಜನರು ಅವರಿಗೆ ಆಧಿಕಾರ ಕೊಟ್ಟಿದ್ದಾರೆ. ಆದರೆ, ರಾಜ್ಯ ಸರ್ಕಾರ ಎಲ್ಲ ವಿಷಯಗಳಲ್ಲಿ ವಿಫಲವಾಗಿದೆ. ವಾಲ್ಮೀಕಿ ನಿಗಮದ ಹಗರಣ, ಬಾಂಬ್ ಸ್ಫೋಟ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಧಾರವಾಡ ತಾಲೂಕಿನ ಬೇಲೂರಿನಲ್ಲಿ ಭಾರತ ಮೀಸಲು ಪಡೆ (ಐಆರ್‌ಬಿ) ಘಟಕ ಸ್ಥಾಪಿಸಲು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾಗ ನೀಡಿದ್ದರು. ಆದರೆ, ಅದನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮುಂಬೈ ಕರ್ನಾಟಕದಲ್ಲಿ ಮತದಾರರು ಕಾಂಗ್ರೆಸ್‌ನ್ನು ಸೋಲಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಈ ರೀತಿ ಮಾಡಿದ್ದಾರೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರಾಸಕ್ತಿಯಿಂದ ಏಥರ್ ಕಂಪನಿ ರಾಜ್ಯವನ್ನು ತೊರೆದಿದೆ. ಈ ಹಿಂದೆ ಹೀರೋ ಮೋಟರ್ಸ್ ಕಂಪನಿ ಸಹ ರಾಜ್ಯವನ್ನು ತೊರೆದಿತ್ತು. ರಾಜ್ಯ ಸರ್ಕಾರ ಕಂಪನಿಯೊಂದಿಗೆ ಮಾತುಕತೆ ನಡೆಸಲು ಮುಂದಾಗಬೇಕು ಎಂದರು.ರಾಜ್ಯದ ಹಿತಕ್ಕೆ ಬದ್ಧ:
ಕರ್ನಾಟಕ ಅಭಿವೃದ್ಧಿ ಜತೆ ಇತರೆ ರಾಜ್ಯಗಳ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಸದಾ ಸಿದ್ಧವಿದೆ. ರಾಜ್ಯ ಸರ್ಕಾರ ತಮ್ಮ ವೈಫಲ್ಯ ಮುಚ್ಚಿಹಾಕಲು, ಕೇಂದ್ರದ ಮೇಲೆ ಆರೋಪ ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ವಿಚಾರದಲ್ಲಿ ಹಲವಾರು ನ್ಯೂನತೆಗಳಿವೆ. ತಮ್ಮ ನ್ಯೂನತೆಗಳನ್ನು ಕೇಂದ್ರದ ಮೇಲೆ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.ಇತಿಹಾಸದಲ್ಲೇ ನಮ್ಮ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ಈ ವರೆಗೂ ಕರ್ನಾಟಕಕ್ಕೆ ಒಂದು ಲಕ್ಷ ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಯಾವುದೇ ಜಗಳ ಮಾಡುವ ಉದ್ದೇಶವಿಲ್ಲ. ಸಮಗ್ರ ಅಭಿವೃದ್ಧಿಯೇ ಕೇಂದ್ರ ಸರ್ಕಾರದ ಮುಖ್ಯ ಉದ್ದೇಶ ಎಂದರು.
ಉತ್ತಮ ಪ್ರದರ್ಶನ ನೀಡಿದ ಭಾರತ:ಟಿ20 ವಿಶ್ವಕಪ್‌ನಲ್ಲಿ ಭಾರತ ಗೆಲುವು ಸಾಧಿಸಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿನಂದನೆ ಸಲ್ಲಿಸಿದ್ದಾರೆ. ಎಲ್ಲ ವಿಭಾಗಗಳಲ್ಲಿಯೂ ಭಾರತ ಉತ್ತಮ ಪ್ರದರ್ಶನ ನೀಡಿದೆ. ರೋಚಕ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. 17 ವರ್ಷಗಳ ಆನಂತರ ಐಸಿಸಿ ವಿಶ್ವಕಪ್ ಗೆದ್ದಿದೆ.. ಭಾರತ ಇದೇ ರೀತಿ ಕ್ರೀಡಾ ಸ್ಫೂರ್ತಿ ಮುಂದುವರಿಸಲಿ ಎಂದು ಸಂತಸ ವ್ಯಕ್ತಪಡಿಸಿದರು.
ದಾರಿ ತಪ್ಪಿದ ಮಗನಂತಾದ ರಾಜ್ಯ ಸರ್ಕಾರಕನ್ನಡಪ್ರಭ ವಾರ್ತೆ ಧಾರವಾಡ
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ತಮ್ಮ ಹಿಂಬಾಲಕರಿಂದ ತಮ್ಮದೇ ಸರ್ಕಾರದ ವಿರುದ್ಧ ಹೇಳಿಕೆ ಕೊಡಿಸುತ್ತಿದ್ದು, ರಾಜ್ಯ ಸರ್ಕಾರ ದಾರಿ ತಪ್ಪಿದ ಮಗನಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕೆ ಮಾಡಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಒಬ್ಬರ ವಿರುದ್ಧ ಒಬ್ಬರು ಹೇಳಿಕೆ ಕೊಡಿಸುತ್ತಿದ್ದಾರೆ. ಒಂದೆಡೆ ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಬಾಲಂಗೋಚಿಗಳಿಂದ ಹೇಳಿಸಲಾಗುತ್ತಿದೆ. ಇನ್ನೊಂದೆಡೆ ಮುಖ್ಯಮಂತ್ರಿಗಳನ್ನೇ ಬದಲಾವಣೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿಗಳು ತಮ್ಮವರಿಂದ ಹೇಳಿಸುತ್ತಿದ್ದಾರೆ. ಒಟ್ಟಾರೆ ತಮ್ಮದೇ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಇದರ ಪರಿಣಾಮ ರಾಜ್ಯದ ಜನತೆ ಮೇಲಾಗುತ್ತಿದೆ ಎಂದು ವಾಗ್ದಾಳಿ ಮಾಡಿದರು.
ರಾಜ್ಯದಲ್ಲಿ ಇಷ್ಟೊಂದು ಅರಾಜಕತೆ ಸೃಷ್ಟಿಯಾದರೂ ಹೈಕಮಾಂಡ್ ಮಾತ್ರ ಯಾವ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇಷ್ಟು ದಯನೀಯ ಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಗ್ಯಾರಂಟಿ ಕೊಟ್ಟರೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಸ್ಥಾನ ಪಡೆಯಲಾಗಲಿಲ್ಲ. ಅಧಿಕಾರಿಗಳಿಗೆ ಸರಿಯಾದ ನಿರ್ದೇಶನ ಕೊಡಲು ಸರ್ಕಾರ ವಿಫಲವಾಗಿದೆ. ಇನ್ನಾದರೂ ತಮ್ಮಲ್ಲಿನ ಆಂತರಿಕ ಸಮಸ್ಯೆ ಬಗೆಹರಿಸಿಕೊಂಡು ಜನರ ಕಡೆ ಗಮನ ಹರಿಸಬೇಕು ಎಂದು ಆಗ್ರಹಿಸಿದ ಸಚಿವರು, ಬೆಲೆ ಏರಿಕೆ ಮಾಡಿ ಜನರ ಹಣ ಪಡೆದು ಜನರಿಗೆ ಕೊಡುತ್ತಿದ್ದಾರೆ. ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಸಿದುಕೊಳ್ಳುತ್ತಿದ್ದಾರೆ ಎಂದು ಬೆಲೆ ಏರಿಕೆ ವಿರುದ್ಧವೂ ರಾಜ್ಯ ಸರ್ಕಾರವನ್ನು ಟೀಕಿಸಿದರು. ಸಿದ್ದರಾಮಯ್ಯ ಒಬ್ಬ ವಿಫಲ ಮುಖ್ಯಮಂತ್ರಿ ಎಂದಿರುವ ಸಚಿವ ಜೋಶಿ, ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಬೀಳಿಸುತ್ತೇವೆಂದು ಬಿಜೆಪಿಗರು ಹೇಳಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.ಸಮಾಜ ವಿಜ್ಞಾನ ಪಠ್ಯದಲ್ಲಿ ವೀರಶೈವ ಪದ ತೆಗೆದ ವಿಚಾರವಾಗಿ ಮತ್ತೆ ಸಮಾಜ ಒಡೆಯುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ವೀರಶೈವ ಲಿಂಗಾಯತ ಎಂದು ಮೊದಲಿತ್ತು. ಪ್ರತ್ಯೇಕ ಮಾಡುವ ಅಗತ್ಯವಿಲ್ಲ. ಅನಗತ್ಯವಾಗಿ ವೀರಶೈವ-ಲಿಂಗಾಯತ ಸಮಾಜದಲ್ಲಿ ಕಿಚ್ಚು ಹಚ್ಚುವ ಕೆಲಸ ಮುಖ್ಯಮಂತ್ರಿ ಮಾಡಬಾರದು ಎಂದು ಜೋಶಿ ಹೇಳಿದರು.