ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಇಂದಿನಿಂದ ಕಾಯಕಯೋಗಿ ಶ್ರೀಗುರು ಸಿದ್ಧರಾಮೇಶ್ವರ ಜಯಂತಿ ಹಾಗೂ ರಾಜ್ಯಮಟ್ಟದ ನೊಳಂಬ ಲಿಂಗಾಯತ ಸಮಾವೇಶ ನಡೆಯಲಿದೆ. ತಾಲೂಕಿನ ಚಿಕ್ಕಬಾಸೂರ ಮದುವಣಗಿತ್ತಿಯಂತೆ ಸಿಂಗಾರಗೊಂಡಡಿದ್ದು, ಗ್ರಾಮದೆಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿದೆ.ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸಮ್ಮೇಳನ ಆಯೋಜನೆಯಾಗಿದ್ದು, ಸುಮಾರು 5 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ. ಅದಕ್ಕೆ ಅವಶ್ಯಕವಿರುವ ಎಲ್ಲಾ ಪೂರ್ವಸಿದ್ಧತೆ ಕಳೆದ 6 ತಿಂಗಳ ಹಿಂದೆಯೇ ಆರಂಭವಾಗಿದ್ದು, ಇದೀಗ ಅಂತಿಮ ಹಂತ ತಲುಪಿದೆ. ಪುಷ್ಪಗಿರಿಮಠ ಹಾಗೂ ನಂದಿಗುಡಿ-ಅತ್ತಿಕಟ್ಟಿ ಶ್ರೀಗಳು ಬಹುದೊಡ್ಡ ಭಕ್ತರ ದಂಡನ್ನು ಕಟ್ಟಿಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ.
ಭವ್ಯ ವೇದಿಕೆ ನಿರ್ಮಾಣ: ಗಣ್ಯರನ್ನು ಸೇರಿ ಸುಮಾರು 11 ಸಾವಿರಕ್ಕೂ ಅಧಿಕ ಜನರು ಆಸೀನರಾಗುವಷ್ಟು ಭವ್ಯಮಂಟಪವೊಂದು ಗ್ರಾಮದ ಹೊರಭಾಗದಲ್ಲಿ ಸಿದ್ಧಗೊಂಡಿದ್ದು ಸುಮಾರು 100ಕ್ಕೂ ಅಧಿಕ ಗಣ್ಯರು ಕುಳಿತುಕೊಳ್ಳುವಷ್ಟು ಭವ್ಯವೇದಿಕೆ ಸಿದ್ಧಗೊಂಡಿದೆ. ಗಣ್ಯರು, ಪುರುಷರು, ಮಹಿಳೆಯರು, ವರದಿಗಾರರು ಹಾಗೂ ಕಲಾವಿದರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.5 ಲಕ್ಷ ಜನಕ್ಕೆ ಊಟದ ವ್ಯವಸ್ಥೆ:
ವೇದಿಕೆಗೆ ಹೊಂದಿಕೊಂಡಿರುವ ಎಪಿಎಂಸಿ ಆವರಣದಲ್ಲಿ ಸುಮಾರು 5 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲು ತಯಾರು ಮಾಡಿಕೊಳ್ಳಲಾಗಿದೆ. ದಾವಣಗೆರೆ ಅಡುಗೆ ಕಂಟ್ರ್ಯಾಕ್ಟರ್ ಪ್ರಭು ತಮ್ಮ 300ಕ್ಕೂ ಅಧಿಕ ಬಾಣಸಿಗರೊಂದಿಗೆ ಶುಚಿ ಮತ್ತು ರುಚಿಯಾದ ರಸದೌತಣ ನೀಡಲು ಸಿದ್ಧರಾಗಿದ್ದಾರೆ. ಒಟ್ಟು 40 ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ.2 ಸಾವಿರ ಜನರ ಅವಿರತ ಶ್ರಮ: ಚಿಕ್ಕಬಾಸೂರು ಸೇರಿದಂತೆ ಆಕ್ಕಪಕ್ಕದ ಗ್ರಾಮಗಳಿಂದ ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸುಮಾರು 2 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಜಯಂತಿ ಹಾಗೂ ಸಮ್ಮೇಳನದ ಯಶಸ್ವಿಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಗಣ್ಯರ ದಂಡು: ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯಾತಿ ಗಣ್ಯರು ವೇದಿಕೆಯನ್ನು ಅಲಂಕರಿಸಲಿದ್ದು ಸ್ಥಳೀಯ ಸಮಾವೇಶದ ಯಶಸ್ವಿಗೆ ಶಾಸಕ ಬಸವರಾಜ ಶಿವಣ್ಣನವರ ಟೊಂಕ ಕಟ್ಟಿ ನಿಂತಿದ್ದು ಯಾವುದೇ ಕಾರಣಕ್ಕೂ ನೊಳಂಬ ಸಮಾವೇಶ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.ಒಟ್ಟು ₹2.50 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ: ಕಾಯಕಯೋಗಿ ಶ್ರೀಗುರು ಸಿದ್ಧರಾಮೇಶ್ವರ ಜಯಂತಿ ಹಾಗೂ ರಾಜ್ಯಮಟ್ಟದ ಲಿಂಗಾಯತ ನೊಳಂಬ ಸಮಾವೇಶವನ್ನು ಸರ್ಕಾರದ ₹50 ಲಕ್ಷ ಸೇರಿದಂತೆ ಸಾರ್ವಜನಿಕ ವಂತಿಗೆ ಸೇರಿ ಒಟ್ಟು ₹2.50 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿದೆ.ವಿವಿಧ ಗೋಷ್ಠಿಗಳು, ಪ್ರಶಸ್ತಿ ಪ್ರದಾನ, ಸಾಹಿತ್ಯ ಪುಸ್ತಕ ಬಿಡುಗಡೆ:ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಜ.14 ಹಾಗೂ 15ರಂದು ಶ್ರೀಗುರು ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಜರುಗಲಿದ್ದು, ಕಾರ್ಯಕ್ರಮ ಅಂಗವಾಗಿ ವಿವಿಧ ಗೋಷ್ಠಿಗಳು, ಪ್ರಶಸ್ತಿ ಪ್ರದಾನ, ಸಾಹಿತ್ಯ ಪುಸ್ತಕ ಬಿಡುಗಡೆ, ಸಾಧಕರಿಗೆ ಸನ್ಮಾನ ಹಾಗೂ ಹಲವು ಸಾಂಸ್ಕೃತಿಕ ಕಲೆಗಳ ಪ್ರದರ್ಶನಗಳು ನಡೆಯಲಿದೆ.ಜ.14 ರಂದು ಬೆಳಗ್ಗೆ 7.30ಕ್ಕೆ ಕುಪ್ಪೂರಿನ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಶ್ರೀ ಷಟಸ್ಥಳ ಧ್ವಜಾರೋಹಣ ನೆರವೇರಿಸುವರು,ಶಾಸಕ ಬಸವರಾಜ ಶಿವಣ್ಣನವರ ಮೆರವಣಿಗೆಗೆ ಚಾಲನೆ ನೀಡಲಿದ್ದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗ್ಗೆ 10 ಗಂಟೆಗೆ ಸಮಾರಂಭ ಉದ್ಘಾಟಿಸಲಿದ್ದು, ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸಾನಿದ್ಯ ವಹಿಸಲಿದ್ದಾರೆ. ಸಂಸದ ಜಿ.ಎಸ್. ಬಸವರಾಜು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು ನೊಳಂಬ ಶ್ರೀ ಪ್ರಶಸ್ತಿ ಪ್ರದಾನವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಲಿದ್ದಾರೆ. ಮಾಜಿ ಸಚಿವ ಬಿ.ಸಿ. ಪಾಟೀಲ ಗ್ರಂಥ ಬಿಡುಗಡೆ ಮಾಡಲಿದ್ದು, ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3 ಗಂಟೆಗೆ ಶರಣ ಸಾಹಿತ್ಯಗೋಷ್ಠಿಯನ್ನು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಉದ್ಘಾಟಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗ್ರಂಥ ಬಿಡುಗಡೆ ನೆರವೇರಿಸುವರು.ಜ.15ರಂದು ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ.ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಸಿದ್ದರಾಮ ಸಾಹಿತ್ಯ ಪ್ರಶಸ್ತಿ ನೀಡುವರು. ಸಚಿವ ಶಿವಾನಂದ ಪಾಟೀಲ ನೊಳಂಬವಾಣಿ ಪತ್ರಿಕೆ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ, ಶಾಸಕರಾದ ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಹಂಪಿ ವಿವಿ ಕುಲಪತಿ ಡಾ. ಪರಶಿವಮೂರ್ತಿ ಹಾಗೂ ಜಯಂತ್ಯುತ್ಸವದಲ್ಲಿ ಪುಷ್ಪಗಿರಿಮಠದ ಸೋಮಶೇಖರ ಶ್ರೀ, ಹುಕ್ಕೇರಿಮಠದ ಸದಾಶಿವ ಶ್ರೀ, ಮಡ್ಲೂರಿನ ಮುರುಘರಾಜೇಂದ್ರ ಶ್ರೀ, ಹೋತನಹಳ್ಳಿ ಶಂಕರಾನಂದ ಶ್ರೀ, ಗೊಲ್ಲಹಳ್ಳಿ ವಿಭವವಿದ್ಯಾಶಂಕರ ಶ್ರೀ, ಯಳವತ್ತಿ ಸದ್ಗುರು ಯೋಗಾನಂದ ಶ್ರೀ, ಹೇರೂರಿನ ನಂಜುಂಡೇಶ್ವರ ಶ್ರೀ, ಕೆರಗೊಡಿಯ ಗುರುಪರದೇಶಿ ಶ್ರೀ ಪಾಲ್ಗೊಳ್ಳುವರು.